ಸೋಮವಾರ, ಡಿಸೆಂಬರ್ 5, 2022
19 °C
ಗೋವನಿತಾಶ್ರಯ ಟ್ರಸ್ಟ್‌ನ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಸಮಾರಂಭದಲ್ಲಿ ಕೊಂಡೆವೂರು ಶ್ರೀ ಆಶೀರ್ವಚನ

ಗೋವು ನೆಮ್ಮದಿಯಿಂದಿದ್ದರೆ ಬದುಕು ಹಸನು: ಯೋಗಾನಂದ ಸರಸ್ವತಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಡಿಪು: ಗೋವು ಎಲ್ಲಿ ನೆಮ್ಮದಿಯಿಂದಿರುತ್ತದೆಯೋ ಅಲ್ಲಿ ಮನುಷ್ಯನ ಬದುಕು ಕೂಡ ಹಸನಾಗಿರುತ್ತದೆ. ಗೋವಿನ ಸೇವೆ ಮಾಡಿದರೆ ಎಲ್ಲ ಕ್ಷೇತ್ರ ಮತ್ತು ಎಲ್ಲ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಗೋವಿನ ಕಣ್ಣೀರು ಭೂಮಿಗೆ ಬೀಳದಂತೆ ರಕ್ಷಣೆಗೆ ಪಣ ತೊಡಬೇಕು ಎಂದು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಪಜೀರು ಬೀಜಗುರಿಯ ಗೋವನಿತಾಶ್ರಯ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮದ ಸಭಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಗೋಮಾತೆಯ ಕೊಡುಗೆ ಅಪಾರ. ಅದು, ಚಲಿಸುವ ದೇವಾಲಯ ಇದ್ದಂತೆ. ಮನುಷ್ಯನಿಗೆ ಈಗ ಸೌಕರ್ಯಗಳು ಹೆಚ್ಚಾಗಿವೆ. ಆದರೆ ಗೋವು ಸಾಕಲು ಯಾರ ಬಳಿಯೂ ಜಾಗ ಇಲ್ಲದ ಪರಿಸ್ಥಿತಿ ಎದುರಾಗಿದೆ. ಗೋವನ್ನು ಮನೆಯಲ್ಲೇ ಆರಾಧಿಸಬೇಕು. ಅದು ಸಾಧ್ಯವಾಗದಿದ್ದರೆ ಇಂತಹ ಆಶ್ರಮಕ್ಕೆ ಗೋಗ್ರಾಸ ನೀಡಿ  ಪುಣ್ಯ ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.

ಗೋವನಿತಾಶ್ರಯದ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಪುರಾಣಿಕ್ ಮಾತನಾಡಿ, 20 ವರ್ಷಗಳ ಹಿಂದೆ ಬೋಳುಗುಡ್ಡವಾಗಿದ್ದ ಈ ಪ್ರದೇಶ ಈಗ ನಂದಗೋಕುಲದಂತಾಗಿದೆ. ದಾನಿಗಳು ಹಾಗೂ ಪೋಷಕರ ದೊಡ್ಡ ಮನಸ್ಸಿನಿಂದ ಗೋವುಗಳು ಇಲ್ಲಿ ನೆಮ್ಮದಿಯಿಂದ ಇದೆ. ಗೋವುಗಳೊಂದಿಗೆ ವನಿತೆಯರಿಗೂ ಇಲ್ಲಿ ಆಶ್ರಯ ಸಿಗುತ್ತಿದೆ ಎಂದರು.

ಟ್ರಸ್ಟ್‌ನ ಮಾಜಿ ಕಾರ್ಯದರ್ಶಿ ಡಾ.ಪಿ.ಎ.ಭಟ್, ಸುರತ್ಕಲ್ ಶಾಸಕ ಭರತ್ ಶೆಟ್ಟಿ, ಟ್ರಸ್ಟ್ ಸದಸ್ಯ ಚಂದ್ರಹಾಸ್ ಪೂಂಜ, ಸಂತೋಷ್ ಕುಮಾರ್ ಬೋಳಿಯಾರ್, ವಿದ್ಯಾರತ್ನ ಟ್ರಸ್ಟ್‌ನ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಮುಖಂಡ ಚಂದ್ರಹಾಸ್ ಪಂಡಿತ್ ಹೌಸ್, ಸುದರ್ಶನ್ ನೆತ್ತಿಲಬಾಳಿಕೆ, ವಿಶ್ವ ಹಿಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಕುತ್ತಾರ್, ಕೃಷ್ಣಮೂರ್ತಿ, ಶರವು ಗಣಪತಿ ಭಟ್, ಶರಣ್, ರವಿ ರೈ, ರಾಜೇಶ್ ಶೆಟ್ಟಿ ಪಜೀರುಗುತ್ತು, ಸುರೇಖಾ ರಾಜಿ, ಸಂಜೀವ ಸೂಟರ್‌ಪೇಟೆ, ಪ್ರಶಾಂತ್ ಗಟ್ಟಿ, ಸತೀಶ್ ಆಚಾರ್ಯ ಇದ್ದರು.

ಉಳ್ಳಾಲ ಗ್ರಾಮಾಂತರ ಪ್ರಖಂಡದ ಹಿತಚಿಂತಕಾ ಅಭಿಯಾನ ಉದ್ಘಾಟಿಸಲಾಯಿತು. ಡಾ.ಮೀರಾ ಮತ್ತು ಮನೆಯವರು ಶಸ್ತ್ರಚಿಕಿತ್ಸೆ ಕೊಠಡಿಯನ್ನು ದಾನ ಮಾಡಿದರು.

ಕದ್ರಿಯಲ್ಲಿ ಮೆರವಣಿಗೆಗೆ ಚಾಲನೆ

ಕದ್ರಿ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶಾಸಕ ವೇದವ್ಯಾಸ ಕಾಮತ್‌, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎ.ಜೆ.ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಇದ್ದರು.

ಗೋಮಾತೆಗೆ ಜಯಘೋಷ ಮೊಳಗಿಸುತ್ತ ಹೊರಟ ಮೆರವಣಿಗೆ ಕಂಕನಾಡಿ, ಪಂಪ್‌ವೆಲ್‌, ತೊಕ್ಕೊಟ್ಟು, ಕುತ್ತಾರ್‌, ದೇರಳಕಟ್ಟೆ ಮೂಲಕ ಅಸೈಗೋಳಿ ತಲುಪಿತು. ಅಲ್ಲಿ, ಉಳ್ಳಾಲ ಭಾಗದಿಂದ ಬಂದ ಮೆರವಣಿಗೆಯನ್ನು ಸೇರಿ ಗ್ರಾಮ ಚಾವಡಿ ಮೂಲಕ ಗೋಶಾಲೆಗೆ ತಲುಪಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.