ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡ್ಲದವರ ಗಣೇಶೋತ್ಸವಕ್ಕೆ ₹ 360 ಕೋಟಿ ವಿಮೆ

ಮುಂಬೈಯಲ್ಲಿ ಜಿಎಸ್‌ಬಿ ಸೇವಾ ಮಂಡಲದ ಪೆಂಡಾಲ್‌ಗೆ 69ನೇ ವರ್ಷದ ಸಂಭ್ರಮ
Published 4 ಸೆಪ್ಟೆಂಬರ್ 2023, 22:28 IST
Last Updated 4 ಸೆಪ್ಟೆಂಬರ್ 2023, 22:28 IST
ಅಕ್ಷರ ಗಾತ್ರ

ಮಂಗಳೂರು: ಶ್ರೀಮಂತ ಗಣಪ ಎಂದೇ ಪರಿಗಣಿಸಲಾಗಿರುವ ಮುಂಬೈನ ಕಿಂಗ್ಸ್‌ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲದ ಗಣೇಶನನ್ನು ಕೂರಿಸಿರುವ ಪೆಂಡಾಲ್‌ಗೆ ₹360.40 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ.

ಈ ಮಂಡಲ ಸ್ಥಾಪಿಸಿ ಗಣೇಶನ ಆರಾಧನೆ ಮತ್ತು ಪೂಜಾ ಕೈಂಕರ್ಯದಲ್ಲಿ ತೊಡಗಿರುವವರೆಲ್ಲರೂ ಮಂಗಳೂರಿನ ಕೊಂಕಣಿ–ಕನ್ನಡಿಗರು.

ಇದೇ 19ರಿಂದ ಗಣೇಶೋತ್ಸವ ನಡೆಯಲಿದೆ. ಅದರ ಅಂಗವಾಗಿ ಗಣೇಶನನ್ನು ಕರೆತರುವ ‘ವಿರಾಟ್‌ ದರ್ಶನ ದಿನ’ 17ರಂದು ನಡೆಯಲಿದೆ. ಇದರ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಜಿಎಸ್‌ಬಿ ಸೇವಾ ಮಂಡಲ ಕಳೆದ ಬಾರಿ ₹316.40 ಕೋಟಿ ವಿಮೆ ಮಾಡಿಸಿತ್ತು. ಈ ವರ್ಷ 69ನೇ ಉತ್ಸವದ ಸಂಭ್ರಮ.

‘ಮಂಗಳೂರಿನವರೇ ಸೇರಿಕೊಂಡು ಸ್ಥಾಪಿಸಿದ ಪೆಂಡಾಲ್‌ ಇದು. ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲಾಗುತ್ತದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಜಗತ್ತಿನ ನಾನಾ ಕಡೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತಿ ವರ್ಷ ವಿಮೆ ಮಾಡಿಸುತ್ತಿದ್ದೇವೆ. ಈ ವರ್ಷ 3,500 ಸ್ವಯಂಸೇವಕರು ಇದ್ದು ಪ್ರತಿ ವರ್ಷ ದಕ್ಷಿಣ ಕನ್ನಡವೂ ಸೇರಿದಂತೆ ಜಗತ್ತಿನ ನಾನಾ ಕಡೆಯಿಂದ ಸರಾಸರಿ 30 ಲಕ್ಷ ಭಕ್ತರು ಭೇಟಿ ನೀಡುತ್ತಾರೆ’ ಎಂದು ಮಂಡಲದ ಟ್ರಸ್ಟಿ ಮತ್ತು ವಕ್ತಾರ ಡಿ.ಅಮಿತ್ ಪೈ ‘ಪ್ರಜಾವಾಣಿ’ಗೆ ತಿಳಿಸಿದರು.

‘66 ಕೆಜಿ ಚಿನ್ನದ ಆಭರಣಗಳು, 295 ಕೆಜಿ ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಬಳಸಿ ವಿಗ್ರಹ ತಯಾರಿಸಲಾಗಿದೆ. ಆಭರಣಗಳಿಗೆ ₹38.47 ಕೋಟಿ, ಅಗ್ನಿ ಅನಾಹುತಕ್ಕೆ ಸಂಬಂಧಿಸಿ ಹಾಗೂ ಫರ್ನಿಚರ್‌ ಮತ್ತಿತರ ವಸ್ತುಗಳಿಗೆ ₹2 ಕೋಟಿ, ಪೆಂಡಾಲ್‌, ಭಕ್ತರ ಸುರಕ್ಷೆ ಇತ್ಯಾದಿಗಳಿಗೆ ₹30 ಕೋಟಿ, ಅರ್ಚಕರು, ಸ್ವಯಂಸೇವಕರು, ಅಡುಗೆಯವರು, ಚಪ್ಪಲಿ ಸ್ಟ್ಯಾಂಡ್‌ಗಳನ್ನು ನೋಡಿಕೊಳ್ಳುವವರು, ಭದ್ರತಾ ಸಿಬ್ಬಂದಿ, ಪಾರ್ಕಿಂಗ್ ಸೌಲಭ್ಯ ನೋಡಿಕೊಳ್ಳುವವರು ಮುಂತಾದವರಿಗಾಗಿ ₹289.50 ವಿಮೆ ಮಾಡಿಸಲಾಗಿದೆ’ ಎಂದು ಅಮಿತ್ ಪೈ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT