ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತನಂತೆ ಬದುಕಿದ್ದ ಇದಿನಬ್ಬ: ಡಾ. ಮೋಹನ ಆಳ್ವಗೆ ಪ್ರಶಸ್ತಿ ಪ್ರದಾನ

ಡಾ. ಮೋಹನ ಆಳ್ವಗೆ ಪ್ರಶಸ್ತಿ ಪ್ರದಾನ
Published : 5 ಮಾರ್ಚ್ 2021, 16:15 IST
ಫಾಲೋ ಮಾಡಿ
Comments

ಮಂಗಳೂರು: ಸುಸಂಸ್ಕೃತ ಮಾದರಿಗಳಿಲ್ಲದೆ ಸುಂದರ ಸಮಾಜ ಕಟ್ಟಲು ಸಾಧ್ಯವಿಲ್ಲ. ಸುಸಂಸ್ಕೃತ ವ್ಯಕ್ತಿತ್ವದ, ಸಂತನಂತೆ ಬದುಕಿದ ಬಿ.ಎಂ. ಇದಿನಬ್ಬ ಅವರ ವ್ಯಕ್ತಿತ್ವವನ್ನು ಯುವ ಪೀಳಿಗೆಗೆ ಪರಿಚಯಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಬ್ಯಾಾರಿ ಸಾಹಿತ್ಯ ಅಕಾಡೆಮಿಯು ಇಲ್ಲಿನ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಶಾಸಕ, ಹಿರಿಯ ಕವಿ ದಿವಂಗತ ಬಿ.ಎಂ.ಇದಿನಬ್ಬ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಿ.ಎಂ. ಇದಿನಬ್ಬ ಸ್ಮಾರಕ ಗೌರವ ಪ್ರಶಸ್ತಿಯನ್ನು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡಕ್ಕಾಗಿ ಬದುಕನ್ನು ಸವೆಸಿದವರು ಇದಿನಬ್ಬ. ಈಗ ಅವರು ಇದ್ದಿದ್ದರೆ ಕನ್ನಡ ಶಾಲೆಗಳ ದುಃಸ್ಥಿತಿಯನ್ನು ಕಂಡು, ಶಾಲೆಗಳ ಉಳಿವಿಗೆ ಹೋರಾಟ ನಡೆಸುತ್ತಿದ್ದರು. ಸಾಹಿತ್ಯದಲ್ಲಿ ರಾಜನಾಗಿ ಮೆರೆಯುವ ಅವಕಾಶವಿದ್ದರೂ, ಕನ್ನಡದ ಸೇವಕನಾಗಿ ಸಮಾಜಕ್ಕೆ ಆದರ್ಶದ ಮಾರ್ಗ ತೋರಿದವರು ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವ ಅವರು, ‘ಇದಿನಬ್ಬ ಅವರ ಬಗೆಗಿನ ಬರಹಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಇನ್ನೊಂದು ತಿಂಗಳೊಳಗೆ ಹೊರತರಲಾಗುವುದು’ ಎಂದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ. ಇದಿನಬ್ಬ ಅವರು ಬ್ಯಾರಿ ಸಮುದಾಯದಲ್ಲಿ ಹುಟ್ಟಿದರೂ, ಅಪ್ಪಟ ಕನ್ನಡಿಗರಾಗಿ ಕನ್ನಡಿಗರ ಮನೆ- ಮನ ತಲುಪಿದ್ದರು ಎಂದರು.

ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು. ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಶಂಶೀರ್ ಬುಡೋಳಿ ವಂದಿಸಿದರು.

ಇದಿನಬ್ಬರ ಹೆಸರಿಡಲು ಸಲಹೆ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಇದಿನಬ್ಬರ ಹೆಸರನ್ನು ಕನ್ನಡ ಭವನ, ವೇದಿಕೆ ಅಥವಾ ಪ್ರಮುಖ ರಸ್ತೆಗೆ ಇಡಬೇಕು ಎಂದು ಅಭಿಪ್ರಾಯಪಟ್ಟರು. ಬಿ.ಎಂ. ಇದಿನಬ್ಬ ಅವರ ಪುತ್ರರಾದ ಬಿ.ಎಂ. ಅಬ್ದುಲ್ ರಹಮಾನ್ ಭಾಷಾ, ಬಿ.ಎಂ. ಬದ್ರುದ್ದೀನ್, ಪುತ್ರಿಯರಾದ ಫಾತಿಮಾ, ಖತೀಜಮ್ಮ, ನಫೀಸಾ, ಝುಬೈದಾ ಅವರನ್ನು ಸನ್ಮಾನಿಸಲಾಯಿತು. ಬಿ.ಎಂ.ಇದಿನಬ್ಬರ ಮೊಮ್ಮಗ ಶಬ್ಬೀರ್ ಹಸನ್, ಮರಿಮೊಮ್ಮಗಳು ನಫೀಸಾ ಹಿಬಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT