ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ಹಿಂದೂಗಳು ತಿರುಗಿಬಿದ್ದರೆ ಮುಸ್ಲೀಮರ ಮನೆ ಉಳಿಯದು: ಈಶ್ವರಪ್ಪ

ಕಾವೂರು‌: ವಿಜಯ ಸಂಕಲ್ಪ ಯಾತ್ರೆಯಲ್ಲಿ ಈಶ್ವರಪ್ಪ ವಾಗ್ದಾಳಿ
Last Updated 13 ಮಾರ್ಚ್ 2023, 5:36 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದು ಸಮಾಜ ತಿರುಗಿ ಬಿದ್ದರೆ ರಾಜ್ಯದಲ್ಲಿ ಮುಸ್ಲೀಮರ ಒಂದೇ ಒಂದು ಮನೆಯೂ ಉಳಿಯುವುದಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಕಾವೂರಿನ ಶಾಂತಿನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಿದ ಸರ್ಕಾರ ನಮ್ಮದು. ಪಿಎಫ್‌ಐ ನಿಷೇಧಿಸಿದ್ದು ಬಿಜೆಪಿ ಸರ್ಕಾರ. ಸುಮ್ಮನೆ ಈ ಸಂಘಟನೆಯನ್ನು ನಿಷೇಧಿಸಿಲ್ಲ. ಹಿಂದೂ ಯುವಕರ ಜೀವಕ್ಕೆ ಬೆಲೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿಯೇ ಈ ನಿರ್ಧಾರ ಕೈಗೊಂಡಿದ್ದೇವೆ. ಗೋಹತ್ಯೆ ಮಾಡುವವರ ಮನೆಯ ಮೇಲೆ ಬುಲ್‌ಡೋಜ್‌ ಓಡಿಸಿ ಯಶಸ್ವಿಯಾದ ರಾಜ್ಯದ ಮೊದಲ ಶಾಸಕ ಭರತಣ್ಣ’ ಎಂದರು.

‘ಹಿಂದೂಗಳ ಸುದ್ದಿಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ. ಒಂದು ಕಾಲದಲ್ಲಿ ಹಿಂದೂ ಕಾರ್ಯಕರ್ತರು ಶಾಖೆಗೆ ಹೋದರೆ ಕೊಂದು ಹಾಕುತ್ತಿದ್ದರು. ಹಿಂದು ಸಮಾಜ ಜಾಗೃತವಾಗಿರಲಿಲ್ಲ. ಈಗ ಯಾವನಾದರೂ ಬರಲಿ ನೊಡೋಣ. ಅವರು ಯಾವುದರಲ್ಲಿ ಹೊಡೆಯುತ್ತಾರೋ ಅದರಲ್ಲೇ ಹೊಡೆದು ಮುಗಿಸಿ ಬಿಡುತ್ತಾರೆ. ನಮ್ಮ ಕಾರ್ಯಕರ್ತರನ್ನು ಮುಟ್ಟಿದರೆ ಜೀವಂತ ಉಳಿಯಲ್ಲ. ಕೆಣಕಿದರೆ ಪುಡಿ ಪುಡಿ ಆಗುತ್ತೇವೆ ಎಂದು ಗೊತ್ತು. ಹಾಗಾಗಿ ಯಾರೂ ನಮ್ಮ ಸುದ್ದಿಗೆ ಬರುತ್ತಿಲ್ಲ’ ಎಂದರು.

‘ಹಿಂದೂ ಪರ ಎಂದೇ ನಾವು ಮತ ಯಾಚಿಸುತ್ತೇವೆ. ನಮಗೆ ಮುಸ್ಲೀಮರ ಮತವೇ ಬೇಡ. ಕೇವಲ ಹಿಂದೂಗಳ ಮತದಲ್ಲೇ ನಾವು ಗೆಲ್ಲುತ್ತೇವೆ. ನೀವು ಮುಸ್ಲೀಮರ ಪರ ಎಂದು ಹೇಳಿಕೊಳ್ಳಲು ಸಿದ್ದರಿದ್ದೀರಾ’ ಎಂದು ಅವರು ಕಾಂಗ್ರೆಸ್‌ನವರನ್ನು ಉದ್ದೇಶಿಸಿ ಸವಾಲು ಹಾಕಿದರು.

‘ಕಾಶಿ ವಿಶ್ವನಾಥ ದೇವಸ್ಥಾನ ಪಕ್ಕದಲ್ಲಿ ಅರ್ಧ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಲಾಗಿದೆ. ಮಥುರಾದಲ್ಲೂ ಇದೇ ಹಣೆಬರೆಹ. ಎಲ್ಲೆಲ್ಲಿ ನಮ್ಮ ದೇವಸ್ಥಾನ ಕಿತ್ತುಹಾಕಿ ಮಸೀದಿ ಕಟ್ಟಿದ್ದಾರೋ, ಆ ಎಲ್ಲ ಮಸೀದಿ ಕಿತ್ತುಹಾಕಿ ದೇವಸ್ಥಾನ ಕಟ್ಟೇ ಕಟ್ಟುತ್ತೇವೆ. ದೇವರ ಮೇಲೆ ಆಣೆ. ಈ ಬಗ್ಗೆ ಅನುಮಾನವೇ ಬೇಡ’ ಎಂದರು.

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ‘ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಮೂಲಸೌಕರ್ಯ ಮತ್ತು ಮಾನವ ಅಭಿವೃದ್ಧಿಗೆ ಒತ್ತು ನೀಡಿದೆ. ಮೊದಲ ಸಲ ಸಾಮಾನ್ಯ ಜನರಿಗೂ ನೇರ ಸವಲತ್ತು ವರ್ಗಾವಣೆ ಸೌಲಭ್ಯ ಸಿಕ್ಕಿದೆ. ಕಿಸಾನ್‌ ಸಮ್ಮಾನ್‌ ಮೂಲಕ ರೈತರನ್ನು, ಐಐಟಿ, ವೈದ್ಯಕೀಯ ಕಾಲೇಜು, ನರ್ಸಿಂಗ್‌ ಕಾಲೇಜು ಸ್ಥಾಪನೆಯ ಮೂಲಕ ಯುವಜನರನ್ನು ಸದೃಢಗೊಳಿಸಲಾಗುತ್ತಿದೆ. ನವಭಾರತ ನಿರ್ಮಾಣ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ‘ ಎಂದರು.

‘ಕಾಂಗ್ರೆಸ್‌ನ ಅಧಿಕಾರಕ್ಕೆ ಬರುವುದಿಲ್ಲ. ಹಾಗಾಗಿಯೇ ಉಚಿತ ವಿದ್ಯುತ್‌ ಪೂರೈಸುವ ಭರವಸೆ ನೀಡಿದೆ. ಗೋವಾದಲ್ಲಿ ಅವರ ಈ ತಂತ್ರ ಫಲಿಸಿಲ್ಲ’ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ‘ಕಮಿಷನ್‌ಗಾಗಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ರಮಾನಾಥ ರೈ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ಆದ ಅಭಿವೃದ್ಧಿ ಎಷ್ಟು. ಈಗ ಆಗಿರುವ ಅಭಿವೃದ್ಧಿ ಎಷ್ಟು ಉತ್ತರ ಕೊಡಿ’ ಎಂದು ಸವಾಲು ಹಾಕಿದರು.

ಜಯಾನಂದ ಅಂಚನ್‌ ಹಾಗೂ ಪಕ್ಷದ ಪ್ರಮುಖರು ಇದ್ದರು.

**

‘ಕ್ಷೇತ್ರದಲ್ಲಿ ಬಾವಲಿಗಳು ಓಡಾಡುತ್ತಿವೆ’

‘ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರದಲ್ಲಿ ಹೊಸ ವೇಷಗಳು ಬರುತ್ತವೆ. ಬಾವಲಿಗಳು ತಿರುಗಾಡುತ್ತಿದ್ದು, ಅವುಗಳ ‌ನಡುವೆಯೇ ಜಗಳ. ಒಬ್ಬನ ಹತ್ತಿರ ದುಡ್ಡಿದೆಯಂತೆ. ಬಾವಲಿ ಎಲ್ಲಿ ಬೇಕಾದರೂ ಹಾರಾಡಲಿ ನಮಗೆ ಚಿಂತೆ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಕೋಟೆ. ದುಡ್ಡು ನೀಡಿ ಮತ ಖರೀದಿ ಮಾಡಲಾಗದು’ ಎಂದು ಶಾಸಕ ಡಾ.ವೈ.ಭರತ್‌ ಶೆಟ್ಟಿ ಹೇಳಿದರು.

‘ಅವರು ಎಲ್ಲ ದೇವಸ್ಥಾನಗಳಿಗೆ, ನೇಮ, ಕೋಲಗಳಿಗೆ ಹೋಗುತ್ತಾರೆ. ಅಲ್ಲಿ ತೆಗೆದುಕೊಂಡ ಪ್ರಸಾದವನ್ನು ಹಣೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಮನೆಗೂ ಒಯ್ಯುಯುವುದಿಲ್ಲ. ಏನು ಮಾಡುತ್ತಾರೆ ನೀವೇ ಆಲೋಚನೆ ಮಾಡಿ’ ಎಂದರು.

‘ನಾನು ಶಾಸಕನಾದ ಬಳಿಕ ಹಿಂದುತ್ವದ ವಿಚಾರದ ಜೊತೆಗೆ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇನೆ. ಕ್ಷೇತ್ರದ ಹಿಂದಿನ ಶಾಸಕರು ಕ್ಷೇತ್ರಕ್ಕೆ ₹ 524 ಕೋಟಿ ಅನುದಾನ ಮಾತ್ರ ತಂದಿದ್ದರು. ನನ್ನ ಅವಧಿಯಲ್ಲಿ ₹ 2 ಸಾವಿರ ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದಲ್ಲಿ ಶೀಘ್ರವೇ ಪ್ಲಾಸ್ಟಿಕ್ ಪಾರ್ಕ್‌ ಆರಂಭವಾಗಲಿದ್ದು, ಸಾವಿರಾರು ಯುವಕರಿಗೆ ಉದ್ಯೋಗ ಸಿಗಲಿದೆ’ ಎಂದರು.

‘ನಮಗೆ ಸಹಬಾಳ್ವೆ ಬೇಕು. ಮತಕ್ಕಾಗಿ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಬೇಡ. ನಗರದಲ್ಲಿ ಕುಕ್ಕರ್‌ ಸ್ಫೋಟ ಕಾಂಗ್ರೆಸ್‌ ಅವಧಿಯಲ್ಲೇನಾದರೂ ಸಂಭವಿಸುತ್ತಿದ್ದರೆ ಆರೋಪಿಯನ್ನು ಬಿಡುಗಡೆ ಮಾಡಿ ಇನ್ನೊಂದು ಸ್ಫೋಟಕ್ಕೆ ಅವಕಾಶ ಕಲ್ಪಿಸುತ್ತಿದ್ದರು. ಗೋಹತ್ಯೆ ಮಾಡಿದವರ ಜಾಗವನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಂಡಿದ್ದು ನನ್ನ ಕ್ಷೇತ್ರದಲ್ಲೇ ಮೊದಲು. ಆದರೆ ಹಿಂದಿನ ಶಾಸಕರು ಗೋ ಕಳ್ಳತನ ಮಾಡಿದ ವ್ಯಕ್ತಿ ಪೊಲೀಸ್‌ ಗುಂಡಿಗೆ ಬಲಿಯಾದಾಗ ಆತನ ಮನೆಯವರಿಗೆ ₹ 10 ಲಕ್ಷ ಕೊಡಿಸುವ ಮೂಲಕ ಗೋಹತ್ಯೆಗೆ ಉತ್ತೇಜನ ನೀಡಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT