ಮಂಗಳೂರು: ‘ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಹಾಗೂ ಅವರ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯ. ಜೊತೆಗೆ, ಮಕ್ಕಳು ತಮ್ಮ ಕರ್ತವ್ಯಗಳ ಬಗ್ಗೆಯೂ ತಿಳಿವಳಿಕೆ ಹೊಂದಿರಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಧೀಶೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಹೇಳಿದರು.
ಮಕ್ಕಳ ಹಕ್ಕುಗಳ ಮಾಸೋತ್ಸವ ಸಂಚಾಲನಾ ಸಮಿತಿಯು ಹಮ್ಮಿಕೊಂಡಿರುವ ‘ಮಕ್ಕಳ ಹಕ್ಕುಗಳ ಮಾಸೋತ್ಸವ’ವನ್ನು ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.
ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ ಪ್ರಾಸ್ತಾವಿಕ ಮಾತನಾಡಿ, ‘ಎಲ್ಲಾ ವರ್ಗದ ಮಕ್ಕಳಿಗೂ ತಮ್ಮ ಹಕ್ಕುಗಳು ಸಿಗುವಂತಾಗಬೇಕು. ಜಿಲ್ಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣದಲ್ಲಿ ವಿವಿಧ ಇಲಾಖೆ, ಸಂಘ ಸಂಸ್ಥೆ ಮತ್ತು ಸಮುದಾಯದ ಸಹಭಾಗಿತ್ವ ಬಹುಮುಖ್ಯ’ ಎಂದರು.
ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ ಮಾತನಾಡಿ, ‘ಮಕ್ಕಳು ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಸಮಾಜವನ್ನು ಸದೃಢವಾಗಿರಿಸಲು ಸಾಧ್ಯ’ ಎಂದರು.
ದ.ಕ. ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಂಚಾಲಕಿ ನಂದಾ ಪಾಯಸ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಆಶಾ ನಾಗರಾಜ್, ನೇತ್ರಾವತಿ ಮಂಗಳೂರು, ನಯನಾ ರೈ, ಪ್ರವೀಣ್ ಆಚಾರ್ಯ, ಕಸ್ತೂರಿ ಬೋಳುವಾರು, ರಶ್ಮಿ, ಸಿಸ್ಟರ್ ಲೀನಾ ಬೆಥನಿ ಇದ್ದರು.
ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು, ಉಷಾ ನಾಯ್ಕ್ ಸ್ವಾಗತಿಸಿದರು. ಆಶಾ ಸುವರ್ಣ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.