ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಟ್ವಾಳ: ಇಂದಿರಾ ಕ್ಯಾಂಟೀನ್‌ಗೆ ಹೊಸ ಗ್ರಾಹಕರ ದಂಡು

ಮೋಹನ್ ಕೆ.ಶ್ರೀಯಾನ್ ರಾಯಿ
Published 7 ಜುಲೈ 2024, 7:41 IST
Last Updated 7 ಜುಲೈ 2024, 7:41 IST
ಅಕ್ಷರ ಗಾತ್ರ

ಬಂಟ್ವಾಳ: 6 ವರ್ಷಗಳ ಹಿಂದೆ ಬಿ.ಸಿ.ರೋಡು ಮಿನಿ ವಿಧಾನಸೌಧ ಬಳಿ ಆರಂಭಗೊಂಡಿದ್ದ ‘ಇಂದಿರಾ ಕ್ಯಾಂಟೀನ್’ನಲ್ಲಿ ಹೊಸ ಮೆನು ಆರಂಭಗೊಂಡಿದ್ದು, ಜನಾಕರ್ಷಣೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆ ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಜಿಲ್ಲೆಗೆ ತಕ್ಕಂತೆ ಜುಲೈ 1ರಿಂದ ಹೊಸ ಮೆನು ಜಾರಿಗೊಂಡಿದೆ.

ಸೋಮವಾರ ನೀರು ದೋಸೆ ಚಟ್ನಿ ಮತ್ತು ಇಡ್ಲಿ ಸಾಂಬಾರು, ಮಂಗಳವಾರ ಇಡ್ಲಿ ಸಾಂಬಾರು ಮತ್ತು ಸಜ್ಜಿಗೆ -ಅವಲಕ್ಕಿ, ಬುಧವಾರ ಇಡ್ಲಿ ಸಾಂಬಾರು ಮತ್ತು ಪುಂಡಿ ಗಸಿ, ಗುರುವಾರ ಇಡ್ಲಿ ಸಾಂಬಾರು ಮತ್ತು ಪಲಾವ್, ಶುಕ್ರವಾರ ಇಡ್ಲಿ ಸಾಂಬಾರು ಮತ್ತು ಕಡ್ಲೆ- ಅವಲಕ್ಕಿ, ಶನಿವಾರ ಇಡ್ಲಿ ಸಾಂಬಾರು ಮತ್ತು ಬನ್ಸ್ ಭಾನುವಾರ ಇಡ್ಲಿ ಸಾಂಬಾರು ಮತ್ತು ಕೇಸರಿಬಾತ್‌ ಸಿಗುತ್ತಿದೆ.

ಬೆಳಿಗ್ಗೆ 7ರಿಂದ 10ರವರೆಗೆ, ಸಂಜೆ 5ರಿಂದ 7ರವರೆಗೆ ಬಿಸಿ ಬಿಸಿ ತಿಂಡಿ ಕೇವಲ ₹ 5 ರೂಪಾಯಿಗೆ ಸಿಗುತ್ತಿದೆ.‌ ಮಧ್ಯಾಹ್ನ 12.30ರಿಂದ 3 ಗಮಟೆ ವರೆಗೆ ಚಪಾತಿ ಸಹಿತ ಊಟ ಸಿಗುತ್ತಿದೆ. ಈ ಹಿಂದೆ 10 ರೂಪಾಯಿಗೆ ಕುಚಲಕ್ಕಿ ಅನ್ನ ಸಾಂಬಾರ್‌ ಜತೆಗೆ ಉಪ್ಪಿನಕಾಯಿ, ಪಲ್ಯ ಸಿಗುತ್ತಿದ್ದು, ಜುಲೈ 1ರಿಂದ ₹ 10 ರೂಪಾಯಿ ಊಟದ ಜತೆಗೆ ಎರಡು ಚಪಾತಿ ಸಿಗುತ್ತಿದೆ. ಆಲೂಗಡ್ಡೆ ಬಾಜಿ ಬೇಕಿದ್ದರೆ ಹೆಚ್ಚುವರಿ ₹ 10 ಪಾವತಿಸಬೇಕಿದೆ.

ಸೋಮವಾರ, ಗುರುವಾರ ಮತ್ತು ಶನಿವಾರ ಊಟದ ಜತೆಗೆ ಪಾಯಸವೂ ಸಿಗುತ್ತಿದ್ದುಮ ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಐದಾರು ವರ್ಷಗಳಲ್ಲಿ 200 ಮಂದಿ ಮಾತ್ರ ತಿಂಡಿ ಮತ್ತು ಊಟಕ್ಕೆ ಬರುತ್ತಿದ್ದರು. ಈ ಪೈಕಿ ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಜುಲೈ 1ರಿಂದ ಸುಮಾರು 300 ಮಂದಿ ಬರುತ್ತಿದ್ದಾರೆ. ಇದರಿಂದಾಗಿ ಚಪಾತಿ ಬೇಗ ಖಾಲಿಯಾಗುತ್ತಿದೆ. ಇದೀಗ ವಿವಿಧ ಇಲಾಖೆಗಳಿಗೆ ಬರುವ ಗ್ರಾಮೀಣ ಜನರು, ಅಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳೂ ಬರುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ ಆನಂದ ಪೂಜಾರಿ, ಅಬ್ದುಲ್ ರಝಾಕ್.

ಚಪಾತಿ ಸಹಿತ ಅನ್ನ ಸಾಂಬಾರು
ಚಪಾತಿ ಸಹಿತ ಅನ್ನ ಸಾಂಬಾರು

ಇಂದಿರಾ ಕ್ಯಾಂಟೀನ್ ತಿಂಡಿ ಮತ್ತು ಊಟ ಕಡಿಮೆ ದರದಲ್ಲಿ ರುಚಿಕರ ಮತ್ತು ಗುಣಮಟ್ಟ ಕಾಯ್ದುಕೊಂಡಿದ್ದು, ಜುಲೈ 1ರಿಂದ ನಾವೂ ಹೋಗುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಐದಾರು ವರ್ಷಗಳಿಂದಲೂ ನಾಲ್ಕು ಮಂದಿ ಸಿಬ್ಬಂದಿ ಮಾತ್ರ ಇದ್ದೇವೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ರಜೆ ಹಾಕದೆ ದುಡಿದಿದ್ದೇವೆ. ಇದೀಗ ಗ್ರಾಹಕರು ಹೆಚ್ಚಾದಂತೆ ಸಿಬ್ಬಂದಿ ಹೆಚ್ಚಳವೂ ಅಗತ್ಯವಿದೆ. ಇಲ್ಲಿನ ಫ್ರಿಜ್ ಕೆಟ್ಟು ಎರಡು ವರ್ಷ ಕಳೆದರೂ ದುರಸ್ತಿ ಆಗಿಲ್ಲ. ವೇತನ ಹೆಚ್ಚಳದ ಜೊತೆಗೆ ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಒದಗಿಸುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಪೂಜಾರಿ ಮತ್ತು ಚಂದ್ರಾವತಿ ಹೇಳಿದರು.

ದೋಸೆ ಚಟ್ನಿ
ದೋಸೆ ಚಟ್ನಿ

ಕ್ಯಾಂಟೀನ್‌ಗೆ ಸುಣ್ಣ-ಬಣ್ಣ ನೀಡಿ ಸುಂದರಗೊಳಿಸುವ ಅಗತ್ಯವಿದೆ ಎಂಬ ಸಲಹೆಯೂ ಗ್ರಾಹಕರಿಂದ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT