ಕಾರ್ಮೆಲ್ ಹಿಲ್: ಬಾಲ ಯೇಸುವಿನ ವಾರ್ಷಿಕೋತ್ಸವ 14ರಿಂದ

ಮಂಗಳೂರು: ನಗರದ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನಲ್ಲಿರುವ ಬಾಲ ಯೇಸುವಿನ (ಇನ್ಫೆಂಟ್ ಜೀಸಸ್) ಚರ್ಚ್ ವಾರ್ಷಿಕೋತ್ಸವ ಇದೇ 14ರಿಂದ 16ರ ವರೆಗೆ ನಡೆಯಲಿದೆ. ಇದರ ಅಂಗವಾಗಿ ಇದೇ 5ರಿಂದ 13ರ ವರೆಗೆ ನೊವೇನಾ ಪ್ರಾರ್ಥನೆ ನಡೆಯಲಿದೆ ಎಂದು ದೇವಾಲಯದ ನಿರ್ದೇಶಕ ಫಾದರ್ ರೋವೆಲ್ ಡಿಸೋಜಾ ತಿಳಿಸಿದರು.
14ರಂದು ಬೆಳಿಗ್ಗೆ 10.30ಕ್ಕೆ ಎಪಿಸ್ಕೋಪಲ್ ವಿಕಾರ್ ಡ್ಯಾನಿಯಲ್ ವೇಗಸ್ ಮತ್ತು ಸಂಜೆ 6 ಗಂಟೆಗೆ ನವದೆಹಲಿಯ ದೀಪಕ್ ವೆಲೇರಿಯನ್ ತಾವ್ರೊ ಅವರ ನೇತೃತ್ವದಲ್ಲಿ ಮಹೋತ್ಸವ ಸಂಭ್ರಮದ ಬಲಿಪೂಜೆ ನಡೆಯಲಿದ್ದು 15ರಂದು ಬೆಳಿಗ್ಗೆ 10.30ಕ್ಕೆ ರೋಮ್‌ನ ಡಿಫಿನೆಟರ್ ಜನರಲ್ ಪೀಯೂಸ್ ಜೇಮ್ಸ್ ಡಿಸೊಜಾ ಮತ್ತು ಸಂಜೆ 6ಕ್ಕೆ ಮಂಗಳೂರಿನ ಮ್ಯಾಕ್ಸಿಮ್ ನೊರೊನ್ಹಾ ನೇತೃತ್ವದಲ್ಲಿ ಬಲಿಪೂಜೆ ನಡೆಯಲಿದೆ.
ಎರಡೂ ದಿನಗಳಲ್ಲಿ ಇತರ ಬಲಿಪೂಜೆಗಳು ಕನ್ನಡ, ಕೊಂಕಣಿ, ಇಂಗ್ಲಿಷ್, ಮಲಯಾಳಂ ಭಾಷೆಗಳಲ್ಲಿ ನಡೆಯಲಿವೆ. ನೊವೇನಾ ದಿನಗಳಲ್ಲೂ ವಿವಿಧ ಭಾಷೆಗಳಲ್ಲಿ ಬಲಿಪೂಜೆ ಇರುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು.
ವಾರ್ಷಿಕ ಮಹೋತ್ಸವದ ಉದ್ಘಾಟನೆ ನಾಲ್ಕರಂದು ನಡೆಯಲಿದ್ದು ಅಂದು ಸಂಜೆ 4 ಗಂಟೆಗೆ ಎಲ್ಲ ಧರ್ಮದವರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ನೊವೇನಾದ ಎಲ್ಲ ದಿನಗಳಲ್ಲೂ ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ. ಮಹೋತ್ಸವದಲ್ಲಿ ಒಟ್ಟು 90 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ದೇವಾಲಯದ ಗುರುಮಠದ ಮುಖ್ಯಸ್ಥ ಫಾದರ್ ಚಾರ್ಲ್ಸ್ ಸೆರಾವೊ, ಕಾರ್ಮೆಲ್ ಕಿರಣ್ ಮೀಡಿಯಾದ ನಿರ್ದೇಶಕ ಫಾದರ್ ಸ್ಟೀಫನ್ ಲೋಬೊ ಮತ್ತು ಛಾಯಾಗ್ರಾಹಕ ಸ್ಟ್ಯಾನ್ಲಿ ಪಿಂಟೊ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.