ಬುಧವಾರ, ಮಾರ್ಚ್ 29, 2023
30 °C
ಸಂವಾದದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ

ಮಂಗಳೂರು: 15 ದಿನಕ್ಕೊಮ್ಮೆ ಕ್ಲಬ್‌ಹೌಸ್ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಸಾಮಾಜಿಕ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಲು ಯೋಜನೆ ರೂಪಿಸಿದೆ. 15 ದಿನಗಳಿಗೊಮ್ಮೆ ಕ್ಲಬ್‌ ಹೌಸ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಜಂಟಿಯಾಗಿ ಸೋಮವಾರ ಇಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಕಾಡೆಮಿಗೆ 40 ವರ್ಷ ತುಂಬಿರುವ ಸಂದರ್ಭದಲ್ಲಿ 40 ಪುಸ್ತಕ ಪ್ರಕಟಣೆಗೆ ಯೋಜನೆ ರೂಪಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಜತೆಗೆ, ಪತ್ರಕರ್ತರನ್ನು ಸೃಷ್ಟಿಸುವ ಶಿಕ್ಷಕರು, ಪತ್ರಿಕಾ ಮಾಲೀಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಯೋಚಿಸಲಾಗಿದೆ. ಪತ್ರಕರ್ತರ ನಿರೀಕ್ಷೆಗೆ ತಕ್ಕಂತೆ ಅಕಾಡೆಮಿ ಕೆಲಸ ನಿರ್ವಹಿಸಲಿದೆ. ಪತ್ರಕರ್ತರ ಅಗತ್ಯಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ’ ಎಂದರು.

ಪತ್ರಕರ್ತನಲ್ಲಿ ಪ್ರಾಮಾಣಿಕತೆ ಇರಬೇಕು. ಒಳ್ಳೆಯತನ, ಸರಳತೆ, ಸಜ್ಜನಿಕೆ ಮೈಗೂಡಿಸಿಕೊಳ್ಳಬೇಕು. ಭಾಷೆ ಮತ್ತು ಗಡಿ ಮೀರಿ ಬೆಳೆದಾಗ ಪತ್ರಕರ್ತ, ಸಮಾಜವನ್ನು ತಿದ್ದಲು ಸಾಧ್ಯ ಎಂದು ಹೇಳಿದರು. ಸದಾಶಿವ ಶೆಣೈ ಹಾಗೂ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಜಗನ್ನಾಥ್ ಶೆಟ್ಟಿ ಬಾಳ ಅವರನ್ನು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ‘ಪೊಲೀಸರು ಸಾರ್ವಜನಿಕರ ವಿಶ್ವಾಸ ಪಡೆದು ಕೆಲಸ ಮಾಡಿದಾಗ, ಸಮಸ್ಯೆಗಳು ಅನಾಯಾಸವಾಗಿ ಬಗೆಹರಿಯುತ್ತವೆ. ಇದನ್ನು ಸ್ವ ಅನುಭವದಿಂದ ಕಂಡುಕೊಂಡಿದ್ದೇನೆ’ ಎಂದರು.

ಪತ್ರಕರ್ತ ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆರ್. ರಾಮಕೃಷ್ಣ ಇದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ ಸ್ವಾಗತಿಸಿದರು. ಪತ್ರಕರ್ತ ರವೀಂದ್ರ ಶೆಟ್ಟಿ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.