ಮಂಗಳವಾರ, ಅಕ್ಟೋಬರ್ 4, 2022
26 °C

ಮಂಗಳೂರು | ಜಯಾನಂದ ಅಂಚನ್ ನೂತನ ಮೇಯರ್, ಪೂರ್ಣಿಮಾ ಉಪಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ನೂತನ ಮೇಯರ್ ಆಗಿ ಜಯಾನಂದ್ ಆಂಚನ್ ಹಾಗೂ ಉಪಮೇಯರ್‌ ಆಗಿ ಪೂರ್ಣಿಮಾ ಶುಕ್ರವಾರ ಆಯ್ಕೆಯಾದರು.

ಮೇಯರ್‌ ಹುದ್ದೆಗೆ ಬಿಜೆಪಿಯಿಂದ ಜಯಾನಂದ ಅಂಚನ್‌ ಹಾಗೂ ಕಾಂಗ್ರೆಸ್‌ನಿಂದ ಶಶಿಧರ ಹೆಗ್ಡೆ ಹಾಗೂ ಉಪಮೇಯರ್‌ ಹುದ್ದೆಗೆ ಬಿಜೆಪಿಯಿಂದ ಪೂರ್ಣಿಮಾ ಹಾಗೂ ಜೀನತ್‌ ಶಂಸುದ್ದೀನ್‌ ಕಣದಲ್ಲಿದ್ದರು. ಮತದಾನದ ಹಕ್ಕು ಹೊಂದಿರುವ 65 ಸದಸ್ಯರಲ್ಲಿ 62 ಸದಸ್ಯರು ಹಾಜರಿದ್ದರು. ಅಂಚನ್‌ ಹಾಗೂ ಪೂರ್ಣಿಮಾ ಪರವಾಗಿ 46 ಮತಗಳು ಹಾಗೂ ಶಶಿಧರ ಹೆಗ್ಡೆ ಮತ್ತು ಜೀನತ್‌ ಪರವಾಗಿ 14 ಮತಗಳು ಚಲಾವಣೆಯಾದವು. ಎಸ್‌ಡಿಪಿಐನ ಇಬ್ಬರು ಸದಸ್ಯರು ಯಾರಿಗೂ ಮತ ಚಲಾಯಿಸದೇ ತಟಸ್ಥವಾಗಿ ಉಳಿದರು. ಮತದಾನದ ಹಕ್ಕು ಹೊಂದಿದ್ದ ಸಂಸದ ನಳಿನ್ ಕುಮಾರ್‌ ಕಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಅಬ್ದುಲ್ ಫಾರೂಕ್‌ ಚುನಾವಣಾ ಪ್ರಕ್ರಿಯೆಗೆ ಗೈರಾಗಿದ್ದರು.

ಅಭ್ಯರ್ಥಿ ಆಯ್ಕೆ–ಕೊನೆಕ್ಷಣದವರೆಗೂ ಕಸರತ್ತು:  ಕದ್ರಿ (ಪದವು) ವಾರ್ಡ್‌ನ ಜಯಾನಂದ ಹಾಗೂ ಕುಂಜತ್ತಬೈಲ್ ವಾರ್ಡ್‌ನ ಶರತ್‌ ಕುಮಾರ್‌ ಬಂಗ್ರಕೂಳೂರು ವಾರ್ಡ್‌ನ ಕಿರಣ್ ಕುಮಾರ್‌ ಹಾಗೂ ಕೊಡಿಯಾಲ್‌ಬೈಲ್ ವಾರ್ಡ್‌ನ ಸುಧೀರ್ ಶೆಟ್ಟಿ ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಮೊದಲೇ ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಹೆಸರನ್ನು ಗೋಪ್ಯವಾಗಿಟ್ಟಿದ್ದರು. ಶುಕ್ರವಾರ ಬೆಳಿಗ್ಗೆ ವರಿಷ್ಠರು ಪಾಲಿಕೆಯ ಪ್ರಮುಖ ಸದಸ್ಯರ ಜೊತೆ ಸಭೆ ನಡೆಸಿ ಮೇಯರ್ ಹಾಗೂ ಉಪಮೇಯರ್‌ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದರು.

ಮೈಸೂರಿನ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಇದ್ದರು.  

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ತಲಾ 7 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ಸಮಿತಿಯ ಸದಸ್ಯರೇ ನಡೆಸಲಿದ್ದಾರೆ.

ಅನುಭವಕ್ಕೆ ಮಣೆ ಹಾಕಿದ ಬಿಜೆಪಿ
2023ರಲ್ಲಿ ವಿಧಾನ ಸಭಾ ಚುನಾವಣೆಯನ್ನು ಎದುರಿಸಬೇಕಾಗಿರುವುದರಿಂದ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ, ಜಲಸಿರಿ, ಮಹಾತ್ಮಗಾಂಧಿ ನಗರ ವಿಕಾಸ ಸೇರಿದಂತೆ ಅನೇಕ ಯೋಜನೆಗಳಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಮೇಯರ್‌ ಹಾಗೂ ಉಪಮೇಯರ್‌ ಅಭ್ಯರ್ಥಿಗಳ ಆಯ್ಕೆ ವೇಳೆ ಬಿಜೆಪಿ ವರಿಷ್ಠರು ಎಚ್ಚರಿಕೆ ನಡೆ ಇಟ್ಟಿದ್ದಾರೆ. ಮೊದಲ ಬಾರಿ ಆಯ್ಕೆಯಾದವರಿಗೆ ಈ ಹುದ್ದೆ ನೀಡುವ ಬದಲು ಅನುಭವಿಗಳಿಗೆ ಮಣೆ ಹಾಕಿದ್ದಾರೆ.

ಕಳೆದ ಸಾಲಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಂಗಳಾದೇವಿ ವಾರ್ಡ್ ನ ಸದಸ್ಯ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿದ್ದರು. ಹಾಗಾಗಿ ಈ ಬಾರಿ ಬಿಜೆಪಿಯು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರಿಗೆ ಮೇಯರ್ ಹುದ್ದೆ ನೀಡುವ ಮೂಲಕ ಪ್ರಾದೇಶಿಕ ಅಸಮಾನತೆಯ ಆರೋಪ ಬಾರದಂತೆ ಎಚ್ಚರ ವಹಿಸಿದೆ. ಕಳೆದ ಸಲ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿದ್ದ ಪಕ್ಷವು ಈ ಬಾರಿ ಬಿಲ್ಲವ ಸಮುದಾಯದವರಿಗೆ ಮೇಯರ್ ಹುದ್ದೆ ನೀಡಿದೆ.

‘ಪವರ್‌ ಲಿಫ್ಟರ್‌’ ಮೇಯರ್‌
ಮೇಯರ್‌ ಆಗಿ ಆಯ್ಕೆಯಾಗಿರುವ ಜಯಾನಂದ ಅವರು ಹವ್ಯಾಸದಲ್ಲಿ ಪವರ್‌ ಲಿಫ್ಟರ್‌. ಬಿಕರ್ನಕಟ್ಟೆಯ ವೀರಾಂಜನೇಯ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯನಾಗಿದ್ದ ಅವರು ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್‌ ಸ್ಪರ್ಧೆಗಳಲ್ಲೂ ಬಹುಮಾನ ಗೆದ್ದಿದ್ದರು. ಪವರ್‌ಲಿಫ್ಟಿಂಗ್‌ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಸ್ಪರ್ಧೆಯೊಂದರಲ್ಲಿ ‘ಬಲಾಢ್ಯ ವ್ಯಕ್ತಿ‘ ಪ್ರಶಸ್ತಿಗೂ ಭಾಜನರಾಗಿದ್ದರು

‘ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ’
‘ನಗರದಲ್ಲಿ ಸ್ಮಾರ್ಟ್‌ ಸಿಟಿ, ಗೇಲ್‌ ಗ್ಯಾಸ್‌ ಕೊಳವೆ ಅಳವಡಿಕೆ, ಜಲಸಿರಿ ಮೊದಲಾದ ಯೋಜನೆಗಳಡಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಅವುಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡುತ್ತೇನೆ. ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವ ಕನಸು ಇದೆ. ಮಳೆಗಾಲ ಮುಗಿದ ಬಳಿಕ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತೇವೆ. ಮಾಜಿ ಮೇಯರ್‌ಗಳಾದ ದಿವಾಕರ್ ಹಾಗೂ ಪ್ರೇಮಾನಂದ ಶೆಟ್ಟಿ ಹಾಗೂ ಪ್ರತಿಪಕ್ಷ ನಾಯಕರ ಸಹಕಾರ ಪಡೆದು ನಗರದ ಅಭಿವೃದ್ಧಿ ಆರ್ಯಗಳಿಗೆ ಕಾಯಕಲ್ಪ ನೀಡುತ್ತೇನೆ’ ಎಂದು ಜಯಾನಂದ ಅಂಚನ್‌ ತಿಳಿಸಿದರು.

***

ಸಾಮಾನ್ಯ ಮಹಿಳೆಯಾದ ನನಗೆ ಪಕ್ಷವು 2 ಬಾರಿ ಪಾಲಿಕೆ ಸದಸ್ಯೆ, ಒಮ್ಮೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹಾಗೂ ಉಪಮೇಯರ್‌ ಆಗಲು ಅವಕಾಶ ನೀಡಿದೆ. ಇದನ್ನು ಬಳಿಸಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
-ಪೂರ್ಣಿಮಾ, ಉಪಮೇಯರ್‌

ನೂತನ ಮೇಯರ್‌ ಪರಿಚಯ
ಹೆಸರು:
ಜಯಾನಂದ ಅಂಚನ್‌
ವಯಸ್ಸು; 55
ಉದ್ಯೋಗ: ಉದ್ಯಮಿ
ಶಿಕ್ಷಣ: ಐಟಿಐ
ಪ್ರತಿನಿಧಿಸುವ ವಾರ್ಡ್‌: ಕದ್ರಿ (ಪದವು)
ಕೌಟುಂಬಿಕ ವಿವರ: ವೇದಶ್ರೀ (ಪತ್ನಿ), ಲಿಖಿತ್‌ (ಪುತ್ರ), ಲಿಖಿತಾ (ಪುತ್ರಿ)

____________

ನೂತನ ಉಪ ಮೇಯರ್‌ ಪರಿಚಯ
ಹೆಸರು
: ಪೂರ್ಣಿಮಾ
ಗೃಹಿಣಿ
ವಯಸ್ಸು; 39
ಶಿಕ್ಷಣ: ಎಸ್ಸೆಸ್ಸೆಲ್ಸಿ
ಪ್ರತಿನಿಧಿಸುವ ವಾರ್ಡ್‌: ಸೆಂಟ್ರಲ್‌ ಮಾರುಕಟ್ಟೆ
ಕೌಟುಂಬಿಕ ವಿವರ: ಮುರಳೀಧರ (ಪತಿ); ನಿಶಾನ್‌ (ಪುತ್ರ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು