ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಜಿಗ ಸಿನಿಮಾ 13ರಂದು ಬಿಡುಗಡೆ

Published : 12 ಸೆಪ್ಟೆಂಬರ್ 2024, 4:53 IST
Last Updated : 12 ಸೆಪ್ಟೆಂಬರ್ 2024, 4:53 IST
ಫಾಲೋ ಮಾಡಿ
Comments

ಮಂಗಳೂರು: ಕರಾವಳಿಯ ನಟ ಅರ್ಜುನ್‌ ಕಾಪಿಕಾಡ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿರುವ, ಈ ಭಾಗದವರೇ ಆದ ಸುಮನ್‌ ಸುವರ್ಣ ನಿರ್ದೇಶನದ ‘ಕಲ್ಜಿಗ’ ಸಿನಿಮಾ ಇದೇ 13ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಸಿನಿಮಾದ ನಿರ್ದೇಶಕ ಸುಮನ್ ಸುವರ್ಣ, ‘ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್‌ನಲ್ಲಿ ಒಟ್ಟು 14 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಚಿತ್ರದ ಟ್ರೇಲರ್‌ಗೆ ಹಾಗೂ ಪ್ರೀಮಿಯರ್‌ ಶೋಗಳಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಉತ್ಸುಕರಾಗಿದ್ದೇವೆ. ಈ ಸಿನಿಮಾ ಗೆಲ್ಲುವ ವಿಶ್ವಾಸ ಮೂಡಿದೆ’ ಎಂದರು.

‘ಮಂಗಳೂರು ಶೈಲಿಯ ಭಾಷೆ ಬಳಸಿ ಒಳ್ಳೆ‌ಯ ಕನ್ನಡ ಸಿನಿಮಾವನ್ನು ನೀಡಿದ ಹೆಮ್ಮೆ ನಮ್ಮದು. ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಹಾಸನ, ಬೆಳಗಾವಿ, ಮಡಿಕೇರಿಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ’ ಎಂದರು. 

ನಾಯಕ ನಟ ಅರ್ಜುನ್‌ ಕಾಪಿಕಾಡ್‌, 'ಹೊಸ ಅನುಭವ ನೀಡುವ ಸಿನಿಮಾವಿದು.‌ ಕರಾವಳಿಯ ಜನರು ನಿತ್ಯವೂ ಒಂದಲ್ಲ ಒಂದು ಸಂದರ್ಭದಲ್ಲಿ ಕೊರಗಜ್ಜನ ಸ್ಮರಣೆ ಮಾಡುತ್ತಾರೆ. ಮನಸ್ಸಿಗೆ ತಟ್ಟುವ ಕತೆ ಇದೆ.‌ ಕಾಡುವ ಸಿನಿಮಾ ಇದಾಗಲಿದೆ’ ಎಂದರು.

ನಾಯಕಿ ನಟಿ  ಸುಶ್ಮಿತಾ ಭಟ್, 'ಮೊದಲು ಕತೆ ಹೇಳಿದಾಗ ಖುಷಿ ಆಯಿತು. ಚಿತ್ರೀಕರಣ ಸಂದರ್ಭದ ಉತ್ಸಾಹ ನೋಡಿ, ಇದು ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಮೂಡಿದೆ' ಎಂದರು.

ನಿರ್ಮಾಪಕ ಶರತ್ ಕುಮಾರ್ ಎ.ಕೆ., 'ನಾವು ಅತ್ಯಂತ ಶ್ರದ್ಧೆ, ಪ್ರೀತಿಯಿಂದ‌ ಸಿನಿಮಾ ನಿರ್ಮಿಸಿದ್ದೇವೆ.  ಇದಕ್ಕೆ ಪ್ರೇಕ್ಷಕರು ನ್ಯಾಯ ಕೊಡುವ ವಿಶ್ವಾಸವಿದೆ’ ಎಂದರು.

ಹಿಮಾನಿ ಫಿಲಂಸ್ ಬ್ಯಾನರ್‌ನ ಈ ಸಿನಿಮಾಕ್ಕೆ ಸುಮನ್ ಸುವರ್ಣ ಅವರದೇ  ಕಥೆ ಚಿತ್ರಕತೆ, ಸಂಭಾಷಣೆ ಇದೆ. ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್, ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ  ತಾರಾಗಣದಲ್ಲಿದ್ದಾರೆ.  ಪ್ರಸಾದ್ ಕೆ.ಶೆಟ್ಟಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಚಿನ್ ಶೆಟ್ಟಿ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನವಿದೆ. ಸನೀಲ್ ಗುರು ಕ್ರಿಯೇಟಿವ್ ಮುಖ್ಯಸ್ಥರಾಗಿ,  ರಾಧಾಕೃಷ್ಣ ಮಾಣಿಲ ಕಾರ್ಯಕಾರಿ ನಿರ್ಮಾಪಕರಾಗಿ, ಸಂದೀಪ್ ಶೆಟ್ಟಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೈ ಜೋಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT