ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತಜ್ಞರ ಅಭಿಪ್ರಾಯಕ್ಕೆ ಕಾದಿರುವ ಪೊಲೀಸರು

ಕಲ್ಲಡ್ಕ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಅಣಕು ಪ್ರದರ್ಶನ ಪ್ರಕರಣ
Last Updated 6 ಫೆಬ್ರುವರಿ 2020, 10:55 IST
ಅಕ್ಷರ ಗಾತ್ರ

ಮಂಗಳೂರು: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ವಾರ್ಷಿಕ ಕ್ರೀಡೋತ್ಸವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಣಕು ಪ್ರದರ್ಶನ ಮಾಡಿರುವ ಪ್ರಕರಣದಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಮತ್ತು ಇತರರ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಮುಂದಿನ ಕ್ರಮಕ್ಕೆ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದಾರೆ.

ಡಿ.15ರಂದು ನಡೆದ ಸಮಾರಂಭದಲ್ಲಿ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಅವರ ಉಪಸ್ಥಿತಿಯಲ್ಲೇ ಅಲ್ಲಿನ ವಿದ್ಯಾರ್ಥಿಗಳು 15 ನಿಮಿಷಗಳ ಪ್ರಹಸನ ಪ್ರದರ್ಶಿಸಿದ್ದರು. ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಘಟನೆ ಮತ್ತು ರಾಮ ಮಂದಿರ ನಿರ್ಮಾಣದ ಕಾರ್ಯವನ್ನು ಅದರಲ್ಲಿ ಮಕ್ಕಳು ಪ್ರದರ್ಶಿಸಿದ್ದರು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಲ್ಲಡ್ಕ ಘಟಕದ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್‌ ನೀಡಿದ ದೂರನ್ನು ಆಧರಿಸಿ ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಸದಸ್ಯ ಪ್ರಭಾಕರ ಭಟ್‌ ಮತ್ತು ನಾಲ್ವರು ಇತರರ ವಿರುದ್ಧ ಡಿ.17ರಂದು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 295ಎ (ಧಾರ್ಮಿಕ ಭಾವನೆಯನ್ನು ಕೆರಳಿಸುವ ಉದ್ದೇಶದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಸಗುವುದು) ಮತ್ತು ಸೆಕ್ಷನ್‌ 298ರ (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಘಾಸಿ ಉಂಟುಮಾಡುವ ಉದ್ದೇಶದ ಕೃತ್ಯ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಂದೂವರೆ ತಿಂಗಳಾದರೂ ಪೊಲೀಸರು ಆರೋಪಿಗಳು ಮತ್ತು ಸಾಕ್ಷಿಗಳ ವಿಚಾರಣೆ ನಡೆಸಿಲ್ಲ. ಆರೋಪಪಟ್ಟಿ ಸಲ್ಲಿಸುವ ಸಂಬಂಧ ನಿರ್ಧಾರವನ್ನೂ ಕೈಗೊಂಡಿಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್‌, ‘ಪ್ರಹಸನವನ್ನು ಪ್ರದರ್ಶಿಸಿದವರೆಲ್ಲರೂ ಮಕ್ಕಳು. ಈ ಕಾರಣದಿಂದ ಪ್ರಕರಣದ ಮುಂದಿನ ತನಿಖೆ ಮತ್ತು ಆರೋಪಪಟ್ಟಿ ಸಲ್ಲಿಕೆ ಕುರಿತು ಬೆಂಗಳೂರಿನ ಕಾನೂನು ತಜ್ಞರ ಸಲಹೆ ಕೋರಲಾಗಿದೆ. ಅವರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT