ಉಳ್ಳಾಲ: ಶಿಕ್ಷಣದ ಮೂಲಕ ಬಡತನವನ್ನು ನೀಗಿಸುವ ಹಾದಿಯಲ್ಲಿ ಕಣಚೂರು ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಸಮಾಜಕ್ಕೆ ಶಿಕ್ಷಣ ನೀಡಿದಂತೆ ಎಂದು ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಎಚ್.ಎಸ್.ಬಲ್ಲಾಳ್ ಹೇಳಿದರು.
ನಾಟೆಕಲ್ ಕಣಚೂರು ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ನಡೆದ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮೂರನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವೀಧರರಿಗೆ ಪದವಿ ಪ್ರದಾನ, ರ‍್ಯಾಂಕ್ ವಿಜೇತರನ್ನು ಅಭಿನಂದಿಸಿ ಮಾತನಾಡಿದರು.
ವಿವಿಧ ಔಷಧೀಯ ಪದ್ಧತಿಗಳ ವೈದ್ಯರ ಅನುಪಾತ ಗಮನಿಸಿದರೆ ದ.ಕ ಜಿಲ್ಲೆಯಲ್ಲಿ 1 ಸಾವಿರ ಮಂದಿಗೆ ಒಬ್ಬ ವೈದ್ಯನಿದ್ದಾನೆ. ಆದರೆ, ಮುಂಬರುವ ದಿನಗಳಲ್ಲಿ ಅಲೋಪತಿ ಪದ್ಧತಿಯಲ್ಲೇ ಅಂಥ ಅನುಪಾತ ಸಾಧ್ಯವಾಗಲಿದೆ. ಪದವಿ ಪಡೆದು ವೈದ್ಯರಾದವರು ಹಣವೇ ಮುಖ್ಯವಲ್ಲ, ರೋಗಿಗಳ ಆರೈಕೆ ಪ್ರಮುಖ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪದವಿಗಾಗಿ ತ್ಯಾಗಮಾಡಿದ ಪೋಷಕರ ತ್ಯಾಗವನ್ನು ಮನದಲ್ಲಿಟ್ಟುಕೊಂಡು ಬದುಕಬೇಕು ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಸಿಂಡಿಕೇಟ್ ಸದಸ್ಯ ಯು.ಟಿ.ಇಫ್ತಿಕರ್ ಅಲಿ ಮಾತನಾಡಿ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ ಹೆತ್ತವರನ್ನು ಗೌರವಿಸಬೇಕು ಎಂದರು.
ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕೆ.ಕಣಚೂರು ಮೋನು ಮಾತನಾಡಿ, ದೇಶ, ಭಾಷೆ, ಸಂಸ್ಕೃತಿಯನ್ನು ಮರೆಯದೆ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸೇವಾ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.
ಸಂಸ್ಥೆಯ ನಿರ್ದೇಶಕಿ ಝೌಹರಾ ಮೋನು, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಡಾ.ವೆಂಕಟ್ ಪ್ರಭು, ಡಾ.ಮೊಹಮ್ಮದ್ ಇಸ್ಮಾಯಿಲ್, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ರೋಹನ್ ಮೋನಿಸ್ ಭಾಗವಹಿಸಿದ್ದರು.
ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಪ್ರಾಂಶುಪಾಲೆ ಡಾ.ಶಮಿಮಾ, ಫಿಜಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹಮ್ಮದ್ ಸುಹೈಲ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೊಲ್ಲಿ ಸಲ್ದಾನ ಪ್ರತಿಜ್ಞಾವಿಧಿ ನೆರವೇರಿಸಿದರು.
ಕಣಚೂರು ಶಿಕ್ಷಣ ಟ್ರಸ್ಟ್ ನಿರ್ದೇಶಕ ಡಾ.ಅಬ್ದುಲ್ ರಹ್ಮಾನ್ ಸ್ವಾಗತಿಸಿದರು. ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಡಾ. ಯು.ಪಿ.ರತ್ನಾಕರ್ ವಂದಿಸಿದರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದ 50 ವೈದ್ಯಕೀಯ ಕಾಲೇಜುಗಳ ಪೈಕಿ 2018ರ ಬ್ಯಾಚ್‌ನಲ್ಲಿ ಕಣಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ.ಮಧುರಾ ಕೆ.ಐ. ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕ ಪಡೆದಿದ್ದು, ಅವರಿಗೆ ಯು.ಕೆ.ಮೋನು ಪ್ರಶಸ್ತಿ ಹೆಸರಿನಲ್ಲಿ ಎಂಟು ಗ್ರಾಂನ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
‘ಸರ್ಕಾರಿ ಕೋಟಾದಡಿಯಲ್ಲಿ ಕಣಚೂರು ಕಾಲೇಜಿನಲ್ಲಿ ಅವಕಾಶ ಸಿಕ್ಕಿತು. ಇಲ್ಲಿ ಕಲಿತ ಅನುಭವ ಅಪೂರ್ವವಾದುದು. ಎಂಜಿನಿಯರಿಂಗ್ ಪದವಿಗೆ ತೆರಳಿದ್ದ ನಾನು, ವೈದ್ಯಕೀಯ ಸೇವೆಯಲ್ಲಿ ಆಸಕ್ತಿ ವ್ಯಕ್ತಪಡಿಸಿ ಮರಳಿ ನೀಟ್ ಪೂರೈಸಿ ವೈದ್ಯಕೀಯ ಪದವಿ ಪಡೆದುಕೊಂಡಿದ್ದೇನೆ’ ಎಂದು
ಡಾ.ಮಧುರಾ ಕೆ.ಐ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.