ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸ ಸಾಹಿತ್ಯ ಅಪ್ಪಟ ದೇಸಿ ಚಳವಳಿ: ಹಿರಿಯ ಕವಿ ಬಿ.ಆರ್ ಲಕ್ಷ್ಮಣರಾವ್

Last Updated 1 ಫೆಬ್ರುವರಿ 2020, 14:54 IST
ಅಕ್ಷರ ಗಾತ್ರ

ಮುಡಿಪು: ‘ವಚನ ಮತ್ತು ದಾಸ ಸಾಹಿತ್ಯವು ಅಪ್ಪಟ ದೇಸೀ ಚಳವಳಿಗಳು’ ಎಂದು ಹಿರಿಯ ಕವಿ ಬಿ.ಆರ್. ಲಕ್ಷ್ಮಣ ರಾವ್‌ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ಶನಿವಾರ ನಡೆದ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮ ‘ಕನಕ ಕೀರ್ತನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಚನ ಸಾಹಿತ್ಯದ ಸಾಮಾಜಿಕ ಪರಿವರ್ತನೆಯ ಆಶಯವನ್ನು, ದಾಸ ಸಾಹಿತ್ಯವೂ ಸಂಗೀತದ ಮೂಲಕ ಜನರ ಸಾಮಾನ್ಯರ ಬಳಿಗೆ ತಲಪಿಸಿತು. ಕನಕದಾಸರ ಕೀರ್ತನೆಗಳು ಈ ಎರಡು ದೇಸೀ ಸಾಹಿತ್ಯ ಚಳವಳಿಗಳ ಆಶಯಗಳನ್ನು ತುಂಬಿಕೊಂಡು ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಹೊಂದಿದೆ’ ಎಂದು ಅವರು ವಿಶ್ಲೇಷಿಸಿದರು.

‘ಕನ್ನಡದ ಭಾವಗೀತೆಗಳ ಮೇಲೆ ದಾಸ ಸಾಹಿತ್ಯದ ಕೀರ್ತನೆಗಳ ಪ್ರಭಾವ ಬಹಳಷ್ಟಿದೆ. ಕನಕರ ಕೀರ್ತನೆಗಳಲ್ಲಿ ಸಂಗೀತಾಂಶಗಳೂ ಹೇರಳವಾಗಿದ್ದು, ಸಂಗೀತಾಭ್ಯಾಸಿಗಳು, ಹಾಡುಗಾರರು ಈ ಕೀರ್ತನೆಗಳನ್ನು ಜನಪ್ರಿಯಗೊಳಿಸಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ.ಎಂ. ಖಾನ್ ಮಾತನಾಡಿ, ‘ಕನಕರು, ತಮ್ಮ ಚಿಂತನೆಗಳ ಮೂಲಕ ವರ್ತಮಾನದ ಸಾಮಾಜಿಕ ಸಂದರ್ಭದಲ್ಲಿ ಮುಖ್ಯವಾಗುತ್ತಾರೆ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ. ರಮೇಶ್, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಉಪನ್ಯಾಸಕ ನಟೇಶ್ ಆಳ್ವ ಇದ್ದರು.

ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತಾಡಿದರು. ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ, ಕನಕದಾಸ ಕೇಂದ್ರದ ಸಂಶೋಧನ ಸಹಾಯಕ ಆನಂದ ಎಂ. ಕಿದೂರು, ಉಪನ್ಯಾಸಕ ವಿಶ್ವಗಣಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT