ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಯನ್ಸ್ ಕನ್ನಡ ಕಲರವದಲ್ಲಿ ಕನ್ನಡ ಡಿಂಢಿಮ; ಸಂಸ್ಕೃತಿಯ ಘಮ

ಲಯನ್ಸ್ ಜಿಲ್ಲೆ 317, ಮಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ 'ಭಾಷೆಯಿಂದ ಭಾವೈಕ್ಯ' ಕಾರ್ಯಕ್ರಮ
Last Updated 13 ಜನವರಿ 2023, 14:19 IST
ಅಕ್ಷರ ಗಾತ್ರ

ಮಂಗಳೂರು: 'ಘಲ್ಲು ಘಲ್ಲೆನುತ' ಮೋಹಕ ನೃತ್ಯದ ಮೂಲಕ ಜಾನಪದ ಹಾಡಿಗೆ ಜೀವ ತುಂಬಿದ ಯುವತಿಯರ ತಂಡದ ಬೆನ್ನಲ್ಲೇ ಯುವ ಕಲಾವಿದನ ಭರತನಾಟ್ಯದ ಝಲಕ್. ನಂತರ ಯಕ್ಷಗಾನದ ಧೀಂಗಿಣ, ಪಟಕುಣಿತದ ರಿಂಗಣ.

ಲಯನ್ಸ್ ಜಿಲ್ಲೆ 317-ಡಿ ಮತ್ತು ಮಂಗಳೂರು ವಿವಿಯ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ, ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಸಾಂಸ್ಕೃತಿಕ-ಸಾಹಿತ್ಯ ಸಮಾಗಮ 'ಲಯನ್ಸ್ ಕನ್ನಡ ಕಲರವ'ದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ಕಂಡ ಕನ್ನಡ ನಾಡು ನುಡಿಯ ವೈಭವ ಇದು.

'ಭಾಷೆಯಿಂದ ಭಾವೈಕ್ಯ' ಎಂಬ ಧ್ಯೇಯವಾಕ್ಯದೊಂದಿಗೆ ದಿನವಿಡೀ ನಡೆದ ಕಾರ್ಯಕ್ರಮ ವೈವಿಧ್ಯದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿ ಮೇಳೈಸಿತು. ಬೆಳಿಗ್ಗೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಜಾನಪದ ನೃತ್ಯಗಳ ಮೂಲಕ 'ಮಾಯದಂಥ ಮಳೆ' ಸುರಿಸಿದರೆ, ಏಕಪಾತ್ರಾಭಿನಯ, ಕಿರು ಪ್ರಹಸನ, ಕನ್ನಡಕ್ಕೆ ಸಂಬಂಧಪಟ್ಟ ಹಾಡುಗಳ ಸಾಲುಗಳನ್ನು ಜೋಡಿಸಿ ಹೆಣೆದ ಗಾಯನ ಮತ್ತಿತರ ಕಾರ್ಯಕ್ರಮಗಳು ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಸಂಗಮಕ್ಕೆ ವೇದಿಕೆ ಒದಗಿಸುವುದರ ಜೊತೆಯಲ್ಲಿ ಯುವ ಸಮುದಾಯದ ಪ್ರತಿಭೆಯ ಅನಾವರಣ ಮಾಡಿತು.

ಮಧ್ಯಾಹ್ನದ ನಂತರ ನಡೆದ ಪಡುಬಿದ್ರೆ ಚಂದ್ರಕಾಂತ ಆಚಾರ್ಯ ಮತ್ತು ಲಯನ್ಸ್ ಮ್ಯೂಸಿಕ್ ಅಕಾಡೆಮಿಯ ಸ್ವರಕೋಕಿಲ ಕಲರವ, ಸಂಜೆ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ, ಸಹೃದಯರ ಮನಕ್ಕೆ ಕನ್ನಡದ ಕಂಪಿನ ತಂಪೆರೆಯಿತು.

ಸಂಜೆ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಜಿಲ್ಲೆ 317-ಡಿಯ ಗವರ್ನರ್ ಸಂಜೀತ್ ಶೆಟ್ಟಿ, ಕನ್ನಡದ ದೀಪ ಹಚ್ಚೋಣ, ಮನೆ-ಮನ ಬೆಳಗೋಣ ಎಂದರು. ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ ಮಾತನಾಡಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಉಪಾಧ್ಯಕ್ಷ ಧನಂಜಯ ಕುಂಬ್ಳೆ, ಲಯನ್ಸ್‌ ಜಿಲ್ಲಾ ಮುಖ್ಯ ಸಂಪರ್ಕಾಧಿಕಾರಿ ಪ್ರವೀಣ್ ಶೆಟ್ಟಿ, ಸಲಹಾ ಸಮಿತಿ ಮುಖ್ಯಸ್ಥ ಡಾ.ಅಣ್ಣಯ್ಯ ಕುಲಾಲ್, ಜಿಲ್ಲಾ ಸಲಹೆಗಾರ ಪ್ರಸಾದ್ ಕಲ್ಲಿಮಾರು, ಲಯನ್ಸ್ ಮಲ್ಟಿಪಲ್ ಜಿಲ್ಲಾ ಅಧ್ಯಕ್ಷ ವಸಂತಕುಮಾರ್ ಶೆಟ್ಟಿ, ಪ್ರಥಮ ಉಪ ರಾಜ್ಯಪಾಲ ಮೆಲ್ವಿನ್ ಡಿ ಸೋಜ, ಭಾರತಿ ಬಿ.ಎಂ ಇದ್ದರು. ಕಾರ್ಯಕ್ರಮಮದ ಮುಖ್ಯ ಸಂಯೋಜಕ ಎನ್.ಟಿ.ರಾಜ ಸ್ವಾಗತಿಸಿದರು.

ಪೂರ್ಣಪ್ರಜ್ಞ ಕಾಲೇಜು ಪ್ರಥಮ

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಪ್ರಥಮ, ಬಂಟ್ವಾಳ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಮತ್ತು ಪುತ್ತೂರಿನ ಅಕ್ಷಯಾ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿತು. ಪ್ರಥಮ ಬಹುಮಾನವಾಗಿ ₹ 20 ಸಾವಿರ ನಗದು, ಟ್ರೋಫಿ ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನವಾಗಿ ₹ 15 ಸಾವಿರ ನಗದು, ಟ್ರೋಫಿ ಮತ್ತು ಪ್ರಶಸ್ತಿ ಪತ್ರ, ತೃತೀಯ ಬಹುಮಾನವಾಗಿ ₹ 10 ಸಾವಿರ ನಗದು, ಪ್ರಶಸ್ತಿ ಪತ್ರ ನೀಡಲಾಯಿತು.

ಸರ್ಕಾರದಿಂದ ಕನ್ನಡದ ನಿರ್ಲಕ್ಷ್ಯ: ಮೋಹನ ಆಳ್ವ

ಸಂಜೆ ನಡೆದ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅವರು ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ದೂರಿದರು.

ಈ ಬಾರಿ ಬಜೆಟ್‌ನಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ₹ 22 ಸಾವಿರ ಕೋಟಿ ಮೊತ್ತವನ್ನು ತೆಗೆದಿರಿಸಲಾಗಿದೆ. ಆದರೆ ಬಹುತೇಕ ಶಾಲೆಗಳು ದುಃಸ್ಥಿತಿಯಲ್ಲಿವೆ. ತರಗತಿಗೆ ಒಬ್ಬರಂತೆ ಶಿಕ್ಷಕರನ್ನು ನೇಮಕ ಮಾಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ. ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಒಂದರಂತೆ ಮಾದರಿ ಶಾಲೆಗಳನ್ನು ಸ್ಥಾಪಿಸಿದ್ದರು. ನಂತರ ಬಂದ ಮುಖ್ಯಮಂತ್ರಿಗಳೆಲ್ಲರೂ ತಮ್ಮನ್ನು ತಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಂಡರಲ್ಲದೆ ಆ ಶಾಲೆಗಳನ್ನು ಕನ್ನಡ ಶಾಲೆಗಳಾಗಿ ಉಳಿಸಿಕೊಳ್ಳಲು ಮುಂದಾಗಲಿಲ್ಲ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT