ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ನಾಡಿನಲ್ಲಿ ಸಾಂಸ್ಕೃತಿಕ ಕೇಂದ್ರ

ಕೇರಳ ತುಳುಭವನ ಉದ್ಘಾಟನೆ: ತುಳು ಪ್ರೇಮಿಗಳ ಕನಸು ನನಸು
Last Updated 19 ಸೆಪ್ಟೆಂಬರ್ 2020, 16:54 IST
ಅಕ್ಷರ ಗಾತ್ರ

ಮಂಗಳೂರು: ಗಡಿ ನಾಡಿನಲ್ಲಿ ತುಳು ಭಾಷೆ, ಕಲೆ, ಸಂಸ್ಕೃತಿಗೆ ಚೌಕಟ್ಟು ಸಿದ್ಧವಾಗಿದೆ. ಕಾಸರಗೋಡು ಜಿಲ್ಲೆಯ ತುಳು ಪ್ರೇಮಿಗಳ ಕನಸು ನನಸಾಗಿದ್ದು, ಕೇರಳ ತುಳುಭವನ ಉದ್ಘಾಟನೆಯಾಗಿದೆ.

2007ರ ಸೆಪ್ಟೆಂಬರ್‌ 3ರಂದು ಅಂದಿನ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರು ಕೇರಳ ತುಳು ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಮಾಜಿ ಶಾಸಕ ಸಿ.ಎಚ್.ಕುಂಞಂಬು ಅವರು ತುಳು ಅಕಾಡೆಮಿ ಸ್ಥಾಪನೆ, ತುಳು ಭವನ ನಿರ್ಮಾಣ ಇತ್ಯಾದಿ ಚಟುವಟಿಕೆಗಳಿಗೆ ಪ್ರಯತ್ನಿಸಿ ಯಶಸ್ವಿಯಾಗಿದ್ದರು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಒಂದು ಸಾವಿರ ದಿನಗಳ ಆಡಳಿತ ಸರಣಿ ಕಾರ್ಯಕ್ರಮಗಳ ಅಂಗವಾಗಿ ಕಳೆದ ವರ್ಷ ಫೆಬ್ರುವರಿ 27ರಂದು ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರು ತುಳುಭವನದ ಶಿಲಾನ್ಯಾಸ ನಡೆಸಿದ್ದರು. ಮಾರ್ಚ್‌ನಲ್ಲಿಯೇ ಕಟ್ಟಡದ ಉದ್ಘಾಟನೆ ನಡೆಯಬೇಕಿತ್ತು. ಆದರೆ ಕೋವಿಡ್ ಕಟ್ಟುನಿಟ್ಟುಗಳಿಂದಾಗಿ ಉದ್ಘಾಟನೆಯ ದಿನಾಂಕ ಮುಂದೂಡಲಾಗಿತ್ತು ಎಂದು ತಿಳಿಸಿದ್ದಾರೆ.

₹25 ಲಕ್ಷ ವೆಚ್ಚದಲ್ಲಿ, ಒಂದೇ ವರ್ಷದಲ್ಲಿ ತುಳುಭವನದ ಮೊದಲ ಹಂತದ ನಿರ್ಮಾಣ ಪೂರ್ಣಗೊಂಡಿತ್ತು. ಕೇರಳ ತುಳು ಅಕಾಡೆಮಿಯ ಸ್ಥಾಪಕಾಧ್ಯಕ್ಷ, ಹಿರಿಯ ಸಂಶೋಧಕ, ತುಳು ವಿದ್ವಾಂಸ ಡಾ.ವೆಂಕಟರಾಜ ಪುಣಿಂಚತ್ತಾಯ ಅವರ ಹೆಸರಲ್ಲಿ ಈ ಕಟ್ಟಡದಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಸಭೆ ನಡೆಸಲು ಸಭಾಂಗಣ, ಅಕಾಡೆಮಿಯ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಕೊಠಡಿ, ಸಿಬ್ಬಂದಿಯ ಕೊಠಡಿಗಳೂ ಇವೆ.

ಸಂಶೋಧನಾ ಕೇಂದ್ರ, ಮ್ಯೂಸಿಯಂ: ತುಳು ಭವನದ 2ನೇ ಹಂತವಾಗಿ ತುಳು ಸಂಶೋಧನೆ ಕೇಂದ್ರ, ವಸ್ತು ಸಂಗ್ರಹಾಲಯದ ನಿರ್ಮಾಣ ನಡೆಯಲಿದೆ. ಮಂಜೇಶ್ವರದ ಹಿಂದಿನ ಶಾಸಕ ದಿ.ಪಿ.ಬಿ.ಅಬ್ದುಲ್ ರಝಾಕ್ ಅವರ ನಿಧಿಯಿಂದ ₹45 ಲಕ್ಷ ಇದಕ್ಕಾಗಿ ಮಂಜೂರು ಮಾಡಿದ್ದರು.

ಆನ್‌ಲೈನ್ ತುಳು ಲಿಪಿ ಕಲಿಕೆ

ಕೇರಳ ತುಳು ಭವನದ ನೇತೃತ್ವದಲ್ಲಿ ಸಾರ್ವಜನಿಕರಿಗಾಗಿ ತುಳು ಲಿಪಿ ಕಲಿಕೆಗೆ ಆನ್‌ಲೈನ್ ಸೌಲಭ್ಯ ಸಿದ್ಧಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಜೊತೆಯಲ್ಲಿ ತುಳು ಪ್ರೇಮಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಉಮೇಶ್ ಎಂ.ಸಾಲ್ಯಾನ್ ತಿಳಿಸಿದ್ದಾರೆ.

ಸರಳ ವಿಧಾನದ ಪಠ್ಯವನ್ನು ಸಿದ್ಧಗೊಳಿಸಲಾಗುತ್ತಿದೆ. ತುಳುಭವನದ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್‌ಗಳ ಮೂಲಕ ಜಗತ್ತಿನ ಯಾವ ಮೂಲೆಯಲ್ಲೂ ತುಳು ಕಲಿಕೆ ಸುಲಭವಾಗುವ ರೀತಿ ತುಳು ಲಿಪಿ ಕಲಿಕೆಗೆ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಹೇಳಿದ್ದಾರೆ.

***

ತುಳುಭವನದಲ್ಲಿ ಕಲ್ಚರಲ್ ಥಿಯೇಟರ್ ನಿರ್ಮಿಸಲಾಗುತ್ತಿದ್ದು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ಅಡಿಯಲ್ಲಿ ₹1ಕೋಟಿ ಪ್ರಸ್ತಾವವನ್ನು ಸಲ್ಲಿಸಲಾಗಿದೆ.

- ಉಮೇಶ್ ಎಂ.ಸಾಲ್ಯಾನ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT