ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಪೆ | 2 ದಶಕದ ಬಳಿಕ ಕಾಯರ್ ಕಟ್ಟೆ ನೇಮೋತ್ಸವ

Published 4 ಜನವರಿ 2024, 4:38 IST
Last Updated 4 ಜನವರಿ 2024, 4:38 IST
ಅಕ್ಷರ ಗಾತ್ರ

ಬಜಪೆ: ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿದ ದೈವಶಕ್ತಿಗಳ ನಾಲ್ಕು ಗಡುಸ್ಥಳಗಳಲ್ಲಿ ಎರಡನೆಯದಾಗಿರುವ ‘ಕಾಯರ್ ಕಟ್ಟೆ’ ಎಂಬಲ್ಲಿ ಎರಡು ದಶಕಗಳ ಬಳಿಕ ಜ.4ರಂದು ದೊಂಪದ ಬಲಿ, ನೇಮೋತ್ಸವ ನಡೆಯಲಿದೆ.

ಮೂರು ದಶಕಗಳ ಹಿಂದೆ ಎಂಆರ್‌ಪಿಎಲ್ ಕಂಪನಿಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಾಗ ‘ಕಾಯರ್ ಕಟ್ಟೆ’ ಪ್ರದೇಶವು ಆ ವ್ಯಾಪ್ತಿಗೆ ಒಳಪಟ್ಟು ದೈವದ ಗಡು ಪಾಡಿ ನೇಮ ಸ್ಥಗಿತಗೊಂಡಿತ್ತು.

ಎರಡು ವರ್ಷಗಳ ಹಿಂದೆ ಸ್ಥಳೀಯ ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾಮಗಾರಿಯಲ್ಲಿದ್ದ ಉತ್ತರ ಭಾರತ ಮೂಲದ ಮುಸ್ಲಿಂ ಕಾರ್ಮಿಕನ ಮೈಮೇಲೆ ದೈವದ ಆವೇಶ ಬಂದ ಹಿನ್ನೆಲೆಯಲ್ಲಿ ಪ್ರಶ್ನಾ ಚಿಂತನೆ ನಡೆಸಿ ಪ್ರಶ್ನೆಯಲ್ಲಿ ಕಂಡುಬಂದಂತೆ ಮತ್ತು ಸ್ಥಳೀಯ ದೈವಸ್ಥಾನದ ನೇಮೋತ್ಸವದಲ್ಲಿ ಪಿಲ್ಚಂಡಿ ದೈವ ನೀಡಿದ ನುಡಿಗಟ್ಟಿನ ಪ್ರಕಾರ ದೈವದ ಗಡು ಕಾಯರ್ ಕಟ್ಟೆಯನ್ನು ಎಂಆರ್‌ಪಿಎಲ್ ಸಂಸ್ಥೆಯ ಅನುಮತಿ ಮತ್ತು ಸಹಕಾರ ಪಡೆದು ನವೀಕರಣಗೊಳಿಸಲಾಗಿದೆ.

ಕಾಯರ್ ಕಟ್ಟೆ ಗಡುಸ್ಥಳದಲ್ಲಿ ಸುಮಾರು ₹30 ಲಕ್ಷ ವೆಚ್ಚದಲ್ಲಿ ಕಟ್ಟೆ ನಿರ್ಮಾಣ, ಮೆಟ್ಟಿಲುಗಳ ನಿರ್ಮಾಣ, ತಡೆಗೋಡೆ, ಸ್ವಾಗತ ಗೋಪುರ,  ಅವಳಿ ಕಾಯೆರ್ ಮರಗಳಿಗೆ ಕಟ್ಟೆ ನಿರ್ಮಾಣ ಸಹಿತ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ.

 ಗಡುಸ್ಥಳದಲ್ಲಿ ಶುದ್ಧಿ ಪ್ರಕ್ರಿಯೆ, ಧಾರ್ಮಿಕ, ಸಾಂಪ್ರದಾಯಿಕ ವಿಧಿಗಳು ನಡೆದು ಬೆಳಿಗ್ಗೆ 11ಕ್ಕೆ ಪೆರ್ಮುದೆ ಪಾರಳೆಗುತ್ತು ದೈವಸ್ಥಾನದಿಂದ ಕೊಡಮಂತ್ತಾಯ ಹಾಗೂ ಮುಕ್ಕೋಡಿ ವ್ಯಾಘ್ರ ಚಾಮುಂಡಿ ದೈವಸ್ಥಾನದಿಂದ ‘ಪಿಲ್ಚಂಡಿ’ ದೈವದ ಭಂಡಾರ ಆಗಮಿಸುವುದರೊಂದಿಗೆ ‘ದೊಂಪದ ಬಲಿ'’ ನೇಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಕಂಪನಿಯ ಆಸ್ತಿಗೆ ತಾಗಿಕೊಂಡೇ ಈ ಸ್ಥಳ ಇರುವುದರಿಂದ ರಾತ್ರಿಯೊಳಗೆ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ನವೀಕೃತ ಗಡುಸ್ಥಳ
ನವೀಕೃತ ಗಡುಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT