ಸೋಮವಾರ, ಮಾರ್ಚ್ 8, 2021
29 °C

ವರದಿ ಕೈಯಲ್ಲಿದ್ದರೆ ಮಾತ್ರ ರಾಜ್ಯ ಪ್ರವೇಶ: ತಲಪಾಡಿಯಲ್ಲಿ ಕೇರಳಿಗರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಗಳ ಗಡಿಭಾಗ ತಲಪಾಡಿಯಲ್ಲಿ ಆರೋಗ್ಯ ಅಧಿಕಾರಿಗಳ ಪರಿಶೀಲನಾ ಕೇಂದ್ರ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಆರ್ ಟಿ  ಪಿಸಿ ಆರ್  ವರದಿ ಕೈಯಲ್ಲಿದ್ದಲ್ಲಿ ಮಾತ್ರ ನಾಳೆಯಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ಎಂದು ಅಧಿಕಾರಿಗಳು ತಿಳಿಸಿದರು.

ಬೆಳಿಗ್ಗೆ 7 ರಿಂದ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ಬಾಯರಿ, ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದ ತಂಡ ತಲಪಾಡಿ ಗಡಿಭಾಗದಲ್ಲಿ ನಿಂತು ಕೇರಳದಿಂದ ಬರುವವರನ್ನು ತಡೆದು ಟೆಸ್ಟ್ ರಿಪೋಟ್೯ ನೀಡುವಂತೆ ಸೂಚಿಸಿದರು.  ಬಂದಿದ್ದವರ ಪೈಕಿ ಯಾರ ಬಳಿಯೂ ರಿಪೋರ್ಟ್ ಇಲ್ಲದೇ ಇದ್ದು, ನಾಳೆಯಿಂದ ಕಡ್ಡಾಯವಾಗಿ ಆರ್ ಟಿ ಪಿಸಿಆರ್ ವರದಿ  ತರುವಂತೆ ಸೂಚಿಸಿದರು. ನಾಳೆಯಿಂದ ವರದಿ ಇಲ್ಲದೇ ಇದ್ದಲ್ಲಿ ಮಂಗಳೂರು ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಪರೀಕ್ಷೆಗಳ ಆರಂಭವಾಗ್ತಾ ಇದೆ. ಕೆಲಸ ಈಗಷ್ಟೇ ಕೆಲ ದಿನಗಳಿಂದ ಆರಂಭವಾಗಿದೆ. ಆದರೆ ಏಕಾಏಕಿ ಮತ್ತೆ ಕಾನೂನುಗಳನ್ನು ಜಾರಿ ಮಾಡುವುದರಿಂದ  ಗಡಿನಾಡ ಜನ ಸಂಕಷ್ಟಕ್ಕೀಡಾಗಲಿದ್ದಾರೆ‌ ಎಂದು ಕೆಲವರು ಅಳಲು ತೀಡಿಕೊಂಡರು.

ನ್ಯಾಯಾಲಯಕ್ಕೆ ಹೋಗ್ತೇವೆ: ಹರ್ಷಾದ್ ವರ್ಕಾಡಿ

ಕೇಂದ್ರ ಸರಕಾರ ಜನವರಿ ತಿಂಗಳಲ್ಲಿ ಜಾರಿಗೊಳಿಸಿರುವ ಆದೇಶದಲ್ಲಿ ಅಂತರ್ ರಾಜ್ಯ ಗಡಿಗಳಲ್ಲಿ ಯಾವುದೇ ವಾಹನಗಳಿಗೆ ತಡೆಯೊಡ್ಡಬಾರದು ಅನ್ನುವುದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಕೇಂದ್ರದ ಆದೇಶವನ್ನು ರಾಜ್ಯ ಸರಕಾರ ಪಾಲಿಸದಿರುವುದು ದುರಾದೃಷ್ಟಕರ. ಈ ಆದೇಶವನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ. ಭಾನುವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಬರುವ ಸಂದರ್ಭದಲ್ಲಿ ಯಾವುದೇ ಕಾನೂನುಗಳನ್ನು ಜಾರಿ ಮಾಡಿರಲಿಲ್ಲ. ಇದೀಗ ಏಕಾಏಕಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ರಾಜಕೀಯ ಷಡ್ಯಂತ್ರ ಎಂದು ಕಾಸರಗೋಡು ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದರು.

ಒಂದು ಗಂಟೆ ಕಾಲ ರಸ್ತೆ ತಡೆ

ಕೇರಳದಿಂದ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿನಾಡು ಪ್ರದೇಶದ ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಪ್ರತಿಭಟಿಸಿದರು. ಪ್ರತಿಭಟನಾಕಾರರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದ.ಕ ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು. ಈ ನಡುವೆ ರಾ.ಹೆ ಯನ್ನು ತಡೆಯದಂತೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಸ್. ಮುಂದಾದರೂ, ಪ್ರತಿಭಟನಾಕಾರರು ' ಕರ್ನಾಟಕ ಪೊಲೀಸ್ ಗೋ ಬ್ಯಾಕ್ ' ಎಂದು ಕೂಗಿ ವಾಪಸ್ಸು ಕಳುಹಿಸಿದ್ದಾರೆ. 

ಬಳಿಕ ಒಂದು ಗಂಟೆಯವರೆಗೂ ಮುಂದುವರಿದ ಪ್ರತಿಭಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿದರು. ಪ್ರತಿಭಟನಾಕಾರರ ಜತೆಗೆ ಮಾತನಾಡಿದ ಮಂಜೇಶ್ವರ ಸಿ.ಐ ಅರುಣ್ ದಾಸ್ ಕಾಸರಗೋಡು ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾಳೆ ಮತ್ತೆ ಕರ್ನಾಟಕದವರಿಂದ ತೊಂದರೆಯಾದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು