ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ರೋಡ್ ಶೋದಲ್ಲಿ ಮೋದಿಗೆ ಪೇಂಟಿಂಗ್ ಗಿಫ್ಟ್

Published 16 ಏಪ್ರಿಲ್ 2024, 5:36 IST
Last Updated 16 ಏಪ್ರಿಲ್ 2024, 5:36 IST
ಅಕ್ಷರ ಗಾತ್ರ

ಮಂಗಳೂರು: ಚಿತ್ರಕಲೆ ಮತ್ತು ಪ್ರಸಾದನ ಕಲೆಯಲ್ಲಿ ತೊಡಗಿಸಿಕೊಂಡಿರುವ, ರಾಜ್ಯದ ವಿವಿಧ ಕಡೆಯ ದೇವಸ್ಥಾನದ ಗೋಡೆಗಳಲ್ಲಿ ದೇವರ ಚಿತ್ರಗಳನ್ನು ಬಿಡಿಸಿರುವ ಕಿರಣ್‌ ತೊಕ್ಕೊಟ್ಟು ಈಗ ವಿಶೇಷ ಸಂಭ್ರಮದಲ್ಲಿದ್ದಾರೆ. ತಾವು ಬಿಡಿಸಿದ ಚಿತ್ರವನ್ನು ಭಾನುವಾರ ನಗರದಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಅವರು ಕೇಳಿ ಪಡೆದುಕೊಂಡದ್ದರಿಂದ ಕಿರಣ್ ಅವರಲ್ಲಿ ಕೃತಾರ್ಥ ಭಾವ ಮೂಡಿದೆ.

ತೊಕ್ಕೊಟ್ಟು ಅಂಬಿಕಾ ರೋಡ್ ನಿವಾಸಿ ಕಿರಣ್ ಹುಟ್ಟು ಕಲಾವಿದ. ಚಿಕ್ಕವಯಸ್ಸಿನಲ್ಲೇ ಚಿತ್ರ ಬಿಡಿಸುತ್ತ ಬೆಳೆದ ಅವರು, ಔಪಚಾರಿಕ ಕೋರ್ಸ್ ಮಾಡದೇ ಕಲೆಯಲ್ಲಿ ಪಳಗಿದ್ದಾರೆ. ಪೇಂಟಿಂಗ್‌ನಲ್ಲಿ ಅನೇಕ ವ್ಯಕ್ತಿಚಿತ್ರಗಳನ್ನು ಬಿಡಿಸಿರುವ ಅವರು ದೇವಿ, ಕೃಷ್ಣ, ಸಾಯಿಬಾಬ ಮತ್ತಿತರ ಚಿತ್ರಗಳನ್ನು ಕೂಡ ಬಿಡಿಸಿ ಗಮನ ಸೆಳೆದಿದ್ದಾರೆ. 

ಚುನಾವಣೆ ಘೋಷಣೆಯಾದ ನಂತರ, ನರೇಂದ್ರ ಮೋದಿ ಅವರು ಮಂಗಳೂರಿಗೆ ಬರುವ ಸಾಧ್ಯತೆ ಇದೆ ಎಂದು ಗೊತ್ತಾದಂದಿನಿಂದ ಮೋದಿ ಅವರ ತೈಲವರ್ಣದ ಚಿತ್ರ ಬಿಡಿಸಿ ಇಟ್ಟುಕೊಂಡಿದ್ದರು. ಕಳೆದ ವಾರ ಮೋದಿ ಅವರ ಮಂಗಳೂರು ಭೇಟಿ ವಿಷಯ ಘೋಷಣೆ ಆದ ನಂತರ ಚಿತ್ರವನ್ನು ಕೊಡಲು ಸಿದ್ಧರಾಗಿದ್ದರು. ನೇರವಾಗಿ ಮೋದಿ ಅವರಿಗೆ ಕೊಡುವ ಅವಕಾಶ ಒದಗಿಸಲು ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ. ಹೀಗಾಗಿ ಚಿತ್ರವನ್ನು ಹಿಡಿದು ರಸ್ತೆಬದಿಯಲ್ಲಿ ನಿಲ್ಲುವ ಉಪಾಯ ಹೊಳೆಯಿತು. 

ನಾನೊಬ್ಬ ಸಾಮಾನ್ಯ ಜನ. ಮೋದಿಯಂಥ ಮಹಾನ್ ವ್ಯಕ್ತಿ ನನ್ನ ಕಲೆಯನ್ನು ಗುರುತಿಸಿ ಮೆಚ್ಚಿ ಚಿತ್ರವನ್ನು ಪಡೆದುಕೊಂಡಿರುವುದು ಧನ್ಯತೆ ತಂದುಕೊಟ್ಟ ಗಳಿಗೆ. ಕನಿಷ್ಠ 50 ವರ್ಷ ಏನೂ ಆಗದ ತೈಲವರ್ಣ ಚಿತ್ರವದು.
ಕಿರಣ್ ತೊಕ್ಕೊಟ್ಟು ಕಲಾವಿದ

ಪಿವಿಎಸ್‌ ಬಳಿಯ ಎಂಪೈರ್ ಮಾಲ್‌ನ ಮುಂದೆ ಎತ್ತರದ ಜಾಗದಲ್ಲಿ ನಿಂತ ಕಿರಣ್, ರೋಡ್ ಷೋ ಅಲ್ಲಿಗೆ ತಲುಪಿದಾಗ ಪ್ರಧಾನಿಗೆ ಕಾಣುವಂತೆ ಚಿತ್ರವನ್ನು ಎತ್ತಿಹಿಡಿದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರ ಮತ್ತು ಜಗಮಗಿಸುವ ದೀಪಾಲಂಕಾರದ ನಡುವೆ ಚಿತ್ರವನ್ನು ಗಮನಿಸಿದ ಮೋದಿ ಅದನ್ನು ಪಡೆದುಕೊಳ್ಳುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು.

‘ಎಸ್‌ಪಿಜಿ ಕಮಾಂಡೊಗಳು ಚಿತ್ರವನ್ನು ಪಡೆದು ಪರಿಶೀಲಿಸಿದ ನಂತರ ಸೀಲ್ ಹೊಡೆದು ಕಾರಿನಲ್ಲಿ ಇರಿಸಿದರು. ಆ ಕ್ಷಣ ನಾನು ನನ್ನನ್ನೇ ಮರೆತೆ. ಕನಸಿನಲ್ಲೂ ನೆನೆಯದ ಪ್ರಸಂಗ ನಡೆದ ಕಾರಣ ನಾನು ಭಾವುಕನಾಗಿದ್ದೆ. ಈಗಲೂ ಭಾವತುಂದಿಲನಾಗಿದ್ದೇನೆ’ ಎಂದು ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೋದಿ ಅವರು ವಿಶಿಷ್ಟ ವ್ಯಕ್ತಿತ್ವದ ಪ್ರಧಾನಮಂತ್ರಿ. ಅವರ ಕಾರ್ಯವೈಖರಿ, ನಿಲುವುಗಳು ನನಗೆ ಇಷ್ಟ. ಒಂದು ದಶಕದಿಂದ ಆಡಳಿತ ನಡೆಸುತ್ತಿರುವ ಅವರು ದೇಶದ ಕಣ್ಮಣಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕೊಡಲೆಂದೇ ಈ ಚಿತ್ರ ಬಿಡಿಸಿದ್ದೆ. ರೋಡ್ ಶೋ ಸಂದರ್ಭ ಜನಸ್ತೋಮದ ಮಧ್ಯದಲ್ಲಿ ಅದು ಅವರ ಕೈ ಸೇರಿದ್ದು ನನ್ನ ಅದೃಷ್ಟ’ ಎಂದು ಕಿರಣ್ ನುಡಿದರು.

‘ಮುಡಿಪು ಸಮೀಪದ ಕುರುನಾಡು ಸೋಮನಾಥೇಶ್ವರ ದೇವಸ್ಥಾನ, ಕಟೀಲಿನ ಉಳ್ಳಂಜೆ ದೇವಸ್ಥಾನ, ಮಂಗಳೂರು ನಗರದ ಪ್ರಮುಖ ಹೋಟೆಲ್‌ಗಳ ಗೋಡೆಗಳಲ್ಲಿ, ಬೆಂಗಳೂರಿನ ಕನಕಪುರದ ಮನೆಯೊಂದರಲ್ಲಿ ಚಿತ್ರ ಬಿಡಿಸಿದ್ದೇನೆ. ಆ ಸಂದರ್ಭದಲ್ಲೆಲ್ಲ ಲಭಿಸಿದ ಖುಷಿಯಂತೆ ಮಂಗಳೂರಿನ ರೋಡ್ ಶೋದಲ್ಲೂ ಆಯಿತು. ತರಾತುರಿಯಲ್ಲಿ ಚಿತ್ರ ಸಿದ್ಧಪಿಡಿಸಿದ್ದರಿಂದ ಮರದ ಫ್ರೇಮ್ ಹಾಕಲು ಆಗಲಿಲ್ಲ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT