ಮಂಗಳವಾರ, ಜನವರಿ 19, 2021
22 °C
ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ವಿನೂತನ ಚಿಕಿತ್ಸಾ ಪದ್ಧತಿ

ಕ್ಯಾನ್ಸರ್‌ ಚಿಕಿತ್ಸೆ ಅವಧಿ ಶೇ 80 ರಷ್ಟು ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಕ್ಯಾನ್ಸರ್‌ ಚಿಕಿತ್ಸಾ ಅವಧಿಯನ್ನು ಶೇ 80 ರಷ್ಟು ಕಡಿತಗೊಳಿಸುವಲ್ಲಿ ನಮ್ಮ ವೈದ್ಯರ ತಂಡ ಯಶಸ್ವಿಯಾಗಿದೆ’ ಎಂದು ಇಲ್ಲಿನ ಕೆಎಂಸಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಆನಂದ್ ವೇಣುಗೋಪಾಲ್‌ ತಿಳಿಸಿದ್ದಾರೆ.

ಮಲಬದ್ಧತೆಯಿಂದ ಬಳಲುತ್ತಿದ್ದ 60 ವರ್ಷ ವಯಸ್ಸಿನ ವೃದ್ಧರೊಬ್ಬರು ಡಿಸೆಂಬರ್ ಮೊದಲನೇ ವಾರದಲ್ಲಿ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಲವಿಸರ್ಜನೆಯ ಸಮಯದಲ್ಲಿ ಬಹಳ ರಕ್ತಸ್ರಾವ ಮತ್ತು ನೋವಾಗುತ್ತಿತ್ತು. ಈ ಸಮಸ್ಯೆಯು 3– 4 ತಿಂಗಳಿಂದ ಅವರನ್ನು ಕಾಡಿತ್ತು. ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಪ್ರಯೋಜನವಾಗಿರಲಿಲ್ಲ.

ರೋಗಿಯು ಡಿಸೆಂಬರ್ ಮೊದಲ ವಾರದಲ್ಲಿ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಕೊಲೊನೋಸ್ಕೋಪಿ ಮತ್ತು ಬಯಾಪ್ಸಿ ಮೂಲಕ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಗುದನಾಳದಲ್ಲಿ ಮತ್ತಷ್ಟು ಬೆಳೆದಿರುವ ಕಾರ್ಸಿನೋಮ ರೋಗ ಇರುವುದನ್ನು ಪತ್ತೆ ಮಾಡಲಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಡಿಸೆಂಬರ್ ಎರಡನೇ ವಾರದಲ್ಲಿ ನಿಯೋಆ್ಯಜುವೆಂಟ್ ಚಿಕಿತ್ಸೆಯ ಒಂದು ಭಾಗವಾಗಿ ವಿಕಿರಣವನ್ನು ನೀಡಲಾಯಿತು. 3ನೇ ವಾರದಲ್ಲಿ ಅವರಲ್ಲಿ ಚೇತರಿಕೆ ಕಂಡು ಬಂದಿದ್ದು, 4ನೇ ವಾರದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

‘ವೈಜ್ಞಾನಿಕ ಶಿಷ್ಟಾಚಾರ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಂಡು, ಕ್ಯಾನ್ಸರ್‍ ಅನ್ನು ಪತ್ತೆಹಚ್ಚಿದ ಒಂದು ತಿಂಗಳ ಅವಧಿಯೊಳಗಾಗಿ ನಮಗೆ ಸ್ಥಳೀಯ ಚಿಕಿತ್ಸೆಯನ್ನು ಸಮರ್ಥವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು’ ಎಂದು ಕೆಎಂಸಿ ಆಸ್ಪತ್ರೆಯ ಕನ್ಸಲ್ಟಂಟ್ ಸರ್ಜಿಕಲ್ ಆಂಕಾಲಾಜಿಸ್ಟ್ ಡಾ. ಕಾರ್ತಿಕ್ ಕೆ. ಎಸ್. ತಿಳಿಸಿದ್ದಾರೆ.

‘ನಿಯೋಆ್ಯಜುವೆಂಟ್ ರೇಡಿಯೇಷನ್ ಎಂಬುದು ಗುದನಾಳದ ಚಿಕಿತ್ಸೆಯ ಒಂದು ಪ್ರಮುಖ ಅಂಶವಾಗಿದೆ. ನಿಯೋಆ್ಯಜುವೆಂಟ್ ವಿಕಿರಣವಿಲ್ಲದೆಯೇ, ಸ್ಥಳೀಯವಾಗಿ ಮರುಕಳಿಸುವ ಸಾಧ್ಯತೆಗಳು ಶೇ 30-40 ರಷ್ಟು ಹೆಚ್ಚಾಗಿರುತ್ತದೆ. ಸಾಂಪ್ರದಾಯಿಕ ಶಿಷ್ಟಾಚಾರ ನಿಯಮಗಳಡಿ 6 ವಾರಗಳವರೆಗೆ ರೇಡಿಯೇಷನ್ ಚಿಕಿತ್ಸೆಯನ್ನು ನೀಡಿ, ನಂತರ 8-10 ವಾರಗಳ ಅಂತರವನ್ನು ಕಾಯ್ದುಕೊಂಡು, ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಇದರಿಂದಾಗಿ ಚಿಕಿತ್ಸೆಯು ಸುಮಾರು 4-5 ತಿಂಗಳು ತೆಗೆದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

‘ರೇಡಿಯೇಷನ್ ಚಿಕಿತ್ಸೆ ನೀಡಿದ ಭಾಗದ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದು ಸ್ವಲ್ಪ ಜಟಿಲ. ಅದಕ್ಕಾಗಿ ಹೆಚ್ಚಿನ ಪರಿಣತಿಯುಳ್ಳವರ ಅಗತ್ಯವಿದೆ. ಕಿರು ಅವಧಿಯ ರೇಡಿಯೇಷನ್ ಚಿಕಿತ್ಸೆಯಲ್ಲಿರುವ ಹೊಸ ಶಿಷ್ಟಾಚಾರ ಎಂಬುದು ಇತ್ತೀಚಿನ ಬೆಳವಣಿಗೆಯಾಗಿದೆ. ನಿಗದಿತ ರೋಗಿಗಳಿಗೆ ನೀಡಲಾಗುವ ವೈದ್ಯಕೀಯ ಚಿಕಿತ್ಸಾವಧಿಯನ್ನು ಕಡಿತಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ’ ಎಂದು ತಿಳಿಸಿದ್ದಾರೆ.

‘ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳ ಪ್ರಯೋಜನ ನಮ್ಮ ರೋಗಿಗಳಿಗೆ ದೊರೆಯುವಂತಾಗಬೇಕು, ಆ ಮೂಲಕ ಅವರನ್ನು ಆವಿಷ್ಕಾರಗಳ ಫಲಾನುಭವಿಗಳನ್ನಾಗಿ ಮಾಡುವಲ್ಲಿ ನಾವು ಶ್ರಮಿಸುತ್ತಿದ್ದೇವೆ. 4-5 ತಿಂಗಳು ತೆಗೆದುಕೊಳ್ಳುವ ಹಳೆಯ ಸಾಂಪ್ರದಾಯಿಕ ಚಿಕಿತ್ಸೆಗೆ ಹೋಲಿಸಿದರೆ, ಇತ್ತೀಚಿನ ನಿಯೋಆ್ಯಜುವೆಂಟ್ ರೇಡಿಯೇಷನ್ ಚಿಕಿತ್ಸೆಯು ಅತ್ಯಂತ ಕಡಿಮೆ ಅವಧಿಯದ್ದಾಗಿದೆ’ ಎಂದು ಡಾ. ಆನಂದ್ ವೇಣುಗೋಪಾಲ್‍ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.