ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು | ಅಪಾಯದ ಸ್ಥಿತಿಯಲ್ಲಿ ಕೊಂಬೆಟ್ಟು ಕಾಲೇಜು ಕಟ್ಟಡ

ಪುತ್ತೂರು ತಾಲ್ಲೂಕು ಕ್ರೀಡಾಂಗಣದ ಬದಿಯ ಧರೆ ಕುಸಿತ
Published 30 ಜೂನ್ 2024, 14:26 IST
Last Updated 30 ಜೂನ್ 2024, 14:26 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನ ಪಕ್ಕದ ಮೈದಾನದ ಧರೆ ಮತ್ತೆ ಕುಸಿದಿದ್ದು, ಶತಮಾನ ಕಂಡ ಇತಿಹಾಸದ ಕೊಂಬೆಟ್ಟು ಶಾಲಾ ಕಟ್ಟಡ ಅಪಾಯದ ಸ್ಥಿತಿಗೆ ತಲುಪಿದೆ. ಪ್ರತಿ ಮಳೆಗಾಲದಲ್ಲೂ ಇಲ್ಲಿ ಧರೆ ಕುಸಿದು ಸಮಸ್ಯೆ ಎದುರಾಗಿದ್ದರೂ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟವರು ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾಸಂಸ್ಥೆಯ ಕಟ್ಟಡದ ಸುಮಾರು 30 ಅಡಿಯಷ್ಟು ಕೆಳಭಾಗದಲ್ಲಿ ವಿಶಾಲ ಕ್ರೀಡಾಂಗಣವಿದೆ. ಕ್ರೀಡಾಂಗಣವನ್ನು 25 ವರ್ಷಗಳ ಹಿಂದೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸುಪರ್ದಿಗೆ ಪಡೆದುಕೊಂಡಿತ್ತು. ಬಳಿಕ ತಾಲ್ಲೂಕು ಕ್ರೀಡಾಂಗಣವಾಗಿಸಲು ವಿದ್ಯಾಸಂಸ್ಥೆಯ ಕಟ್ಟಡದ ಸಮೀಪದವರೆಗೆ ಧರೆಯನ್ನು ಅಗೆದು ವಿಸ್ತರಿಸುವ ಕಾರ್ಯ ನಡೆದಿತ್ತು. ಇದರಿಂದಾಗಿ ಇತ್ತೀಚಿನ ಕೆಲ ವರ್ಷಗಳಲ್ಲಿ ಆ ಭಾಗದಲ್ಲಿ ಕುಸಿತ ಉಂಟಾಗುತ್ತಿದೆ.

ಧರೆ ಕುಸಿತದ ಪರಿಣಾಮವಾಗಿ ಈ ಹಿಂದೆಯೇ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಕಟ್ಟಡದ ಮೂರು ಕೊಠಡಿಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್‌ ಭಂಡಾರಿ ಪರಿಶೀಲನೆ ನಡೆಸಿದ್ದಾರೆ. ಧರೆ ಕುಸಿತವಾದ ಭಾಗಕ್ಕೆ ಟಾರ್ಪಾಲ್‌ ಹೊದಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದ ಕಾಲೇಜು ಭಾಗದ ಧರೆಗೆ ತಡೆಗೋಡೆ ನಿರ್ಮಿಸಲು ₹ 3 ಕೋಟಿಯ ಪ್ರಸ್ತಾವನೆಯನ್ನು ಈಗಾಗಲೇ ಕ್ರೀಡಾ ಇಲಾಖೆಗೆ ಕಳುಹಿಸಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಕ್ರೀಡಾಂಗಣ ನಿಧಿಯಿಂದ ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿಯನ್ನು ಕೋರಲಾಗುವುದು ಎಂದು ದ.ಕ.ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ತಿಳಿಸಿದರು.

ಧರೆಯ ತಳಭಾಗದಲ್ಲೂ ಮಣ್ಣಿನ ಸವಕಳಿ ಉಂಟಾಗುತ್ತಿರುವುದರಿಂದ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಉಪವಿಭಾಗಾಧಿಕಾರಿ ಗಮನಕ್ಕೆ ತರಲಾಗಿದೆ. ಅವರು ಪರಿಶೀಲನೆ ನಡೆಸಿದ್ದಾರೆ. ಶಾಸಕರ ಗಮನಕ್ಕೂ ಈ ವಿಚಾರವನ್ನು ತರಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಪ್ರಾಂಶುಪಾಲ ಗೋಪಾಲ ಗೌಡ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಧರೆ ಕುಸಿತವಾದ ಭಾಗಕ್ಕೆ ಟಾರ್ಪಾಲ್‌ ಹೊದಿಕೆ ಮಾಡಿ ಧರೆ ಕುಸಿಯದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಧರೆ ಕುಸಿದ ಭಾಗಕ್ಕೆ ಹೊದಿಕೆ ಹಾಕಿರುವುದು
ಧರೆ ಕುಸಿದ ಭಾಗಕ್ಕೆ ಹೊದಿಕೆ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT