ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಹಣದಲ್ಲಿ ಪ್ರಧಾನಿ ನಿಂದಿಸುವ ಸಮಾವೇಶ: ಕೋಟ

Published 28 ಫೆಬ್ರುವರಿ 2024, 6:13 IST
Last Updated 28 ಫೆಬ್ರುವರಿ 2024, 6:13 IST
ಅಕ್ಷರ ಗಾತ್ರ

ಮಂಗಳೂರು: ‘ಸಂವಿಧಾನ ಉಳಿಸುವ‌ ಹೆಸರಿನಲ್ಲಿ ಸಮಾವೇಶ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತಿಸಿ, ಪ್ರಧಾನಿಯನ್ನು ನಿಂದಿಸುವ ಕಾರ್ಯಕ್ರಮ ಮಾಡಿದ್ದಾರೆ’ ಎಂದು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ‌ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ‘ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದು ಅಪಪ್ರಚಾರ ಮಾಡಿ, ಕೇಂದ್ರ ಸರ್ಕಾರವನ್ನು ದೂಷಣೆ ಮಾಡಲು ಕೋಟ್ಯಂತರ ರೂಪಾಯಿ ಸರ್ಕಾರಿ ಹಣ ಖರ್ಚಿನಲ್ಲಿ ಸಮಾವೇಶ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜಕಾರಣಕ್ಕಿಂತ ರಾಷ್ಟ್ರೀಯತೆ, ಸಂವಿಧಾನದ ಕಡೆಗೆ ಗಮನ ಕೊಡಲಿ. ಸಂವಿಧಾನವನ್ನು ರಾಜಕೀಯಗೊಳಿಸುವ ಕೆಲಸ ಬಿಡಲಿ’ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ರಾಜಕಾರಣಿ ‘ಸಂವಿಧಾನಕ್ಕೆ ಧಕ್ಕೆ ಬಂದಿದೆ’ ಎನ್ನುತ್ತಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ತಂದವರು ಯಾರು, ಸಂವಿಧಾನಕ್ಕೆ 80 ಬಾರಿ ತಿದ್ದುಪಡಿ ಮಾಡಿದ್ದು ಯಾರು ಎಂಬುದು ಚರ್ಚೆ ಆಗಬೇಕು. ಅಂಬೇಡ್ಕರ್ ಹೆಸರನ್ನು ರಾಜಕಾರಣಕ್ಕಾಗಿ ಬಳಸಲಾಗುತ್ತಿದೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌ ಎಂಬುದು ಇತಿಹಾಸ ಎಂದರು.

ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಹೊರಟಿದ್ದಾರೆ. ಭಾರತವನ್ನು ಒಡೆದಿದ್ದು ಕಾಂಗ್ರೆಸ್‌ ಎಂದು ಈ ದೇಶದ ಇತಿಹಾಸ ಹೇಳುತ್ತದೆ. ದೇಶವನ್ನು ಒಂದುಗೂಡಿಸಿದ್ದು ನರೇಂದ್ರ ಮೋದಿ ಎಂದು ದಾಖಲೆ ಹೇಳುತ್ತದೆ. ಒಡೆದ ದೇಶವನ್ನು ಜೋಡಿಸಿದ ಮೇಲೆ, ಮತ್ತೆ ಜೋಡಿಸುವ ಯಾತ್ರೆ ನಡೆಸುವುದು ರಾಜಕಾರಣದ ನಾಟಕ ಎಂದು ಶ್ರೀನಿವಾಸ ಪೂಜಾರಿ ಟೀಕಿಸಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ವಸಂತ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT