ಮಂಗಳವಾರ, ಮಾರ್ಚ್ 28, 2023
26 °C
ಕುದ್ಯಾಡಿ: ಕೊಡಮಣಿತ್ತಾಯ ದೈವಸ್ಥಾನ- ಬ್ರಹ್ಮಬೈದರ್ಕಳ ಗರಡಿ

ಧಾರ್ಮಿಕ ಸತ್ಕಾರ್ಯಗಳಿಗೆ ಕೋಟಿ- ಚೆನ್ನಯರು ಪ್ರೇರಣೆ: ಚಿತ್ತರಂಜನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ‘ತುಳುನಾಡಿನ ಆರಾಧ್ಯ ಶಕ್ತಿಗಳಾದ ಕೋಟಿ- ಚೆನ್ನಯರು ಭಕ್ತರ ಮೂಲಕ ಧಾರ್ಮಿಕ ಕಾರ್ಯಗಳನ್ನು, ಸತ್ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಾರೆ’ ಎಂದು ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್ ಹೇಳಿದರು.

ಕುದ್ಯಾಡಿ ಗ್ರಾಮದ ನವೀಕೃತ ಕೊಡಮಣಿತ್ತಾಯ ದೈವಸ್ಥಾನ- ಬ್ರಹ್ಮಬೈದರ್ಕಳ ಗರಡಿ ಇದರ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮಗಳ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಳದಂಗಡಿಯ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಮಾತನಾಡಿ, ‘ತುಳುನಾಡು ದೈವ- ದೇವರ ನೆಲೆವೀಡು. ಅಳದಂಗಡಿ ಸೀಮೆ ದೈವಗಳ ಸೇವೆಯನ್ನು ನಿಯಮಾನುಸಾರ ಕಟ್ಟುನಿಟ್ಟಾಗಿ ನಡೆಸುವ ಸೀಮೆ.‌ ಈ ಸೀಮೆಯ ಕುದ್ಯಾಡಿಯಲ್ಲಿ ಉತ್ತಮ ರೀತಿಯಲ್ಲಿ ಗರಡಿ ಪುನರ್ ನಿರ್ಮಾಣಗೊಂಡಿದೆ’ ಎಂದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ‘ನಾರಾಯಣ ಗುರುಗಳ ಬೋಧ‌ನೆಯಂತೆ ಈ ಊರಿನಲ್ಲಿ ಎಲ್ಲ ಸಮುದಾಯಗಳ ಜನರು ಸೇರಿ ಗರಡಿ ಜೀರ್ಣೋದ್ಧಾರ ಮಾಡಿದ್ದು, ಇದೇ ರೀತಿ ಮುಂದುವರಿಯುವುದು ಅಗತ್ಯ’ ಎಂದರು.

ಮಾಜಿ ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಮಂಗಳೂರಿನ ಶ್ರೀಗುರು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಜಯಾನಂದ ಎಂ, ಬೆಳ್ತಂಗಡಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಧರಣೇಂದ್ರ ಕುಮಾರ್, ಅಳದಂಗಡಿ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್, ಬೆಳ್ತಂಗಡಿ ಶ್ರೀಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಉದ್ಯಮಿ ರವಿ ಕುಮಾರ್ ಮಜಲು, ಶ್ರೀಗುರುನಾರಾಯಣ ಸೇವಾ ಸಂಘ ಅಳದಂಗಡಿ ವಲಯದ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಎನ್.ನಿತ್ಯಾನಂದ ನಾವರ ಇದ್ದರು.

ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು ಪ್ರಾಸ್ತಾವಿಕ ಮಾತನಾಡಿದರು. ಜತೆ ಕಾರ್ಯದರ್ಶಿ ಸಜಿತ್ ಕುಮಾರ್ ಪಿಜತ್ಯರಡ್ಡ ಸ್ವಾಗತಿಸಿದರು. ಕಾರ್ಯದರ್ಶಿ ಸದಾನಂದ ಬಿ. ಬಾಕ್ಯರಡ್ಡ ಸನ್ಮಾನಿತರನ್ನು ಪರಿಚಯಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಎಚ್. ಹಿಮರಡ್ಡ ವಂದಿಸಿದರು. ರಾತ್ರಿ ಬ್ರಹ್ಮ ಬೈದರ್ಕಳ ಹಾಗೂ ಮಾನಿಬಾಲೆ ನೇಮ ನಡೆಯಿತು.

ಪಠ್ಯಪುಸ್ತಕದಲ್ಲಿ ಸೇರಿಸಲು ಸಲಹೆ

‘ಗರಡಿ ವಿಚಾರದಲ್ಲಿ ರಾಜಕೀಯ, ಜಾತಿ ಯಾವುದೂ ಮುಖ್ಯ ಅಲ್ಲ ಎಂಬುದನ್ನು ಕುದ್ಯಾಡಿ ಜನತೆ ಸಾಬೀತುಪಡಿಸಿದೆ. ತುಳು ಜನಪದ ಸಂಸ್ಕೃತಿ ಹಾಗೂ ಕೋಟಿ ಚೆನ್ನಯರ ಬಗ್ಗೆ ಮಕ್ಕಳು ಪಠ್ಯಪುಸ್ತಕದಲ್ಲಿ ಓದುವಂತಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು