ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌: ಬಿಜೆಪಿ ಮುಖಂಡರ ನಡೆಯೇ ಸಂಶಯ- ಸಲೀಂ ಅಹ್ಮದ್ ಆರೋಪ

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪ
Last Updated 13 ಸೆಪ್ಟೆಂಬರ್ 2020, 14:06 IST
ಅಕ್ಷರ ಗಾತ್ರ

ಮಂಗಳೂರು: ‘ಡ್ರಗ್ಸ್ ಜಾಲದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ. ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಲಿ’ ಎಂದು ಕಾಂಗ್ರೆಸ್ ಹೇಳಿದೆ. ಆದರೆ, ಬಿಜೆಪಿ ಮುಖಂಡರು ಹೇಳಿಕೆ ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಶಯ ಮೂಡುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆಗೆ ಸಂಬಂಧಿಸದ ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತಿತರರು ಹೇಳಿಕೆ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದರು.

‘ಹಿಂದಿನ ಸರ್ಕಾರ ಉರುಳಿಸಲು ಡ್ರಗ್ಸ್‌ ಹಣ ಬಳಕೆಯಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮಾತಿನಲ್ಲೇ ಈ ದಂಧೆಯಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗುತ್ತದೆ. ಡ್ರಗ್ಸ್‌ ಕುರಿತ ಸಮಗ್ರ ತನಿಖೆಗೆ ಒತ್ತಾಯಿಸಿ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ’ ಎಂದು ಮಾಹಿತಿ ನೀಡಿದರು.

ಅಧಿವೇಶನ:

‘ಸೆ.21ರಿಂದ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು, ಸುಮಾರು 28 ಮಸೂದೆಗಳನ್ನು ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಕಾಂಗ್ರೆಸ್‌ ಶಾಸಕರು 1,300ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಿದ್ದಾರೆ. ಡಿ.ಜೆ.ಹಳ್ಳಿ ಪ್ರಕರಣ, ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ, ರೈತ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಸೇರಿದಂತೆ ಹಲವು ಜನಪರ ವಿಚಾರಗಳನ್ನು ಕಾಂಗ್ರೆಸ್‌ ಎತ್ತಲಿದೆ. ಸರ್ಕಾರವನ್ನು ಬೆತ್ತಲು ಮಾಡಲಿದ್ದೇವೆ. ಈ ಕುರಿತು ಇದೇ 16ರಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ’ ಎಂದು ವಿವರಿಸಿದರು.

ಹಾನಿ:

‘ನೆರೆ ಹಾವಳಿಯಲ್ಲಿ ಕಳೆದ ವರ್ಷ ₹50 ಸಾವಿರ ಕೋಟಿ ನಷ್ಟವಾಗಿದ್ದು, ಕೇಂದ್ರ ಕೇವಲ ₹1,800 ಕೋಟಿ ನೀಡಿದೆ. ಈ ಬಾರಿ ₹10 ಸಾವಿರಕ್ಕೂ ಹೆಚ್ಚು ನಷ್ಟವಾಗಿದ್ದು, ರಾಜ್ಯವು ₹600 ಕೋಟಿ ಕೇಳಿದೆ. ರಾಜ್ಯದ ಜಿಎಸ್‌ಟಿ ಪಾಲನ್ನೂ ಕೇಂದ್ರ ನೀಡಿಲ್ಲ. ಆದರೆ, ರಾಜ್ಯ ಸರ್ಕಾರ ಹಾಗೂ ರಾಜ್ಯದ 25 ಬಿಜೆಪಿ ಸಂಸದರು ಈ ಬಗ್ಗೆ ಪ್ರಶ್ನಿಸುತ್ತಿಲ್ಲ. ಇವರೆಲ್ಲ ಇಲ್ಲಿ ಹುಲಿಯಂತೆ ಗರ್ಜನೆ ಮಾಡುತ್ತಾರೆ. ದೆಹಲಿಯಲ್ಲಿ ಬೆಕ್ಕಿನಂತೆ ವರ್ತಿಸುತ್ತಾರೆ. ಜನರ ಸಮಸ್ಯೆ ಬಗ್ಗೆ ಚಕಾರವೇ ಎತ್ತುತ್ತಿಲ್ಲ’ ಎಂದು ಲೇವಡಿ ಮಾಡಿದರು.

ಜನಪರ ಕಾಳಜಿ ಇಲ್ಲ:

‘ಆದಾಯ ತೆರಿಗೆ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸುವ ಬಗ್ಗೆ ಸ್ಥಳೀಯ ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಏಕೆ ಪ್ರತಿಭಟಿಸುತ್ತಿಲ್ಲ? ಸಂಸದೆ ಶೋಭಾ ಕರಂದ್ಲಾಜೆ, ಕರಾವಳಿ ಮೂಲದ ಸಚಿವರು, ಕರ್ನಾಟಕದಿಂದ ಆಯ್ಕೆಯಾದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ಗೂ ರಾಜ್ಯದ ಜನರ ಪರ ಕಾಳಜಿ ಇಲ್ಲ’ ಎಂದು ಸಲೀಂ ಅಹ್ಮದ್ ಆಪಾದಿಸಿದರು.

ಕೋರ್‌ ಸಮಿತಿ ರಚನೆ: ಪ್ರತಿ ಜಿಲ್ಲೆಗಳಲ್ಲೂ ಕೋರ್‌ ಸಮಿತಿ ರಚಿಸಲಾಗುವುದು. ಅದಕ್ಕೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರೇ ಮುಖ್ಯಸ್ಥರು. ಅದು ಜಿಲ್ಲಾ ಮಟ್ಟದಲ್ಲಿ ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದೆ. ಈಗ ಗ್ರಾಮ ಪಂಚಾಯಿತಿ ಚುನಾವಣೆಗೆ ಸಜ್ಜಾಗುತ್ತಿದ್ದೇವೆ. ಯುವ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ, ಐವನ್ ಡಿಸೋಜ, ಮುಖಂಡರಾದ ಮಂಜುನಾಥ ಭಂಡಾರಿ, ಮಿಥುನ್‌ ರೈ, ಕವಿತಾ ಸನಿಲ್, ಸದಾಶಿವ ಉಳ್ಳಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT