ಮಂಗಳೂರು: ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಅಕ್ಷಮ್ಯ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಕೃಪಾ ಆಳ್ವಾ ದೂರಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಭಾವುಕರಾಗಿ ಕಾಣುವ ನರೇಂದ್ರ ಮೋದಿ ನಂತರ ಕೇವಲ ಮಾತಿಗೆ ಮಾತ್ರ ಸೀಮಿತರಾಗುತ್ತಾರೆ. ಕ್ರಿಯಾತ್ಮಕವಾಗಿ ಏನನ್ನೂ ಮಾಡುವುದಿಲ್ಲ. ಬೆತ್ತಲೆ ಪ್ರಕರಣದ ಸಂತ್ರಸ್ತೆಯರ ಪೈಕಿ ಒಬ್ಬರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧನ ಪತ್ನಿ. ಯೋಧರ ಬಗ್ಗೆ ಬಗ್ಗೆ ಕಾಳಜಿ ಇದ್ದವರಂತೆ ವರ್ತಿಸುವ ಮೋದಿ ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಉಡುಪಿ ಪ್ರಕರಣಕ್ಕೂ ಮಣಿಪುರದಲ್ಲಿ ನಡೆದ ಘಟನೆಗಳಿಗೂ ವ್ಯತ್ಯಾಸವಿದೆ. ಮಣಿಪುರದಲ್ಲಿ ಮಹಿಳೆಯರ ಮೇಲೆ ಜನರ ಎದುರಲ್ಲೇ ಅತ್ಯಾಚಾರ ಆಗಿದೆ. ಅನೇಕ ಮಂದಿಯನ್ನು ಹತ್ಯೆ ಮಾಡಲಾಗಿದೆ. ಆದರೂ ಉಡುಪಿಗೆ ಮಹಿಳಾ ಆಯೋಗದ ಸದಸ್ಯೆ ಓಡೋಡಿ ಬಂದಿದ್ದಾರೆ ಎಂದು ಅವರು ದೂರಿದರು.
ಚೀನಾ, ಭಾರತದ ಒಳಗೆ ನುಗ್ಗಿ ಬರುತ್ತಿದೆ. ಆದರೂ ಪ್ರಧಾನಮಂತ್ರಿ ಸೊಲ್ಲೆತ್ತುವುದಿಲ್ಲ ಎಂದು ಕೃಪಾ ಉಡುಪಿ ಘಟನೆಯಲ್ಲಿ ಎಫ್‌ಎಸ್‌ಎಲ್ ವರದಿ ಬಂದ ನಂತರ ವಿಡಿಯೊ ಮಾಡಿದ್ದು ಸಾಬೀತಾದರೆ ತೀವ್ರವಾಗಿ ಖಂಡಿಸುವೆ ಎಂದರು.
ಪ್ರಮುಖರಾದ ಕಲಾ, ಗೀತಾ, ಶಶಿಕಲಾ ಹಾಗೂ ಮಲ್ಲಿಕಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.