ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುದ್ಕಾಡಿ ಮನೆ ದರೋಡೆ ಪ್ರಕರಣದ ಸಂಚು: ಪ್ರಮುಖ ಆರೋಪಿ ರವಿ 7 ದಿನ ಪೊಲೀಸ್ ವಶಕ್ಕೆ

Published 9 ನವೆಂಬರ್ 2023, 14:00 IST
Last Updated 9 ನವೆಂಬರ್ 2023, 14:00 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ, ಕಾಸರಗೋಡಿನ ಜಬ್ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೊಳಗಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದ ರವಿ ಎಂಬಾತನನ್ನು ಸಂಪ್ಯ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸರ ಕೋರಿಕೆಯ ಮೇರೆಗೆ ನ್ಯಾಯಾಲಯ ಆರೋಪಿ ರವಿಯನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬಡಗನ್ನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕುದ್ಕಾಡಿಯ ಗುರುಪ್ರಸಾದ್ ರೈ ಅವರ ಮನೆಗೆ ಸೆ.6ರಂದು ತಡರಾತ್ರಿ ಮುಸುಕುಧಾರಿಗಳಾಗಿ ಬಂದು ಮನೆಯ ಹಿಂಬಾಗಿಲು ಮುರಿದು ಮನೆಯೊಳಗೆ ನುಗ್ಗಿದ್ದ ದರೋಡೆಕೋರರು ಗುರುಪ್ರಸಾದ್ ಮತ್ತು ಅವರ ತಾಯಿ ಕಸ್ತೂರಿ ರೈ ಅವರನ್ನು ಕಟ್ಟಿಹಾಕಿ ಮನೆಯಿಂದ ₹2.40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹ 30 ಸಾವಿರ ನಗದು ದರೋಡೆ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದರೋಡೆಕೋರರಾದ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಕಿಣಿಯರ ಪಾಲು ನಿವಾಸಿ ಸುಧೀರ್ ಕುಮಾರ್ ಯಾನೆ ಕಬಡ್ಡಿ ಸುಧೀರ್ (38), ಕಾಸರಗೋಡಿನ ಪೈವಳಿಕೆ ಸಮೀಪದ ಮಂಜೇಶ್ವರ ಗ್ರಾಮದ ಅಟ್ಟೆಗೋಳಿ ಮಂಜಳ್ತೋಡಿ ನಿವಾಸಿ ಕಿರಣ್ ಟಿ. (29), ಕಾಸರಗೋಡು ಜಿಲ್ಲೆಯ ಕಾಂಞಗಾಡ್ ಸಮೀಪದ ಮೂವರಿಕುಂಡ ಕಂಡತ್ತೀಲ್ ವೀಡು ನಿವಾಸಿ ಸನಾಲ್ ಕೆ.ವಿ (34), ಕಾಸರಗೋಡು ತಾಲ್ಲೂಕಿನ ಎಡನಾಡು ಗ್ರಾಮದ ಮುಗು ಸೀತಂಗೋಳಿ ರಾಜೀವ ಗಾಂಧಿ ಕಾಲೊನಿ ನಿವಾಸಿ ಮಹಮ್ಮದ್ ಫೈಝಲ್ (37), ಸೀತಂಗೋಳಿ ರಾಜೀವ ಗಾಂಧಿ ಕಾಲೊನಿಯ ನಿವಾಸಿ ಅಬ್ದುಲ್ ನಿಝಾರ್ (21), ಮಂಜೇಶ್ವರ ತಾಲ್ಲೂಕಿನ ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ ಎಂ. (31) ಎಂಬುವರನ್ನು ಸೆ.29ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೇರಳದ ಇಚಿಲಂಕೋಡು ಕುಂಪಲದ ಪಚ್ಚಂಬಳ ನಿವಾಸಿ ಸುಬ್ಬ ಮಡಿವಾಳ ಎಂಬುವರ ಪುತ್ರ ರವಿ ಈ ದರೋಡೆ ಪ್ರಕರಣದ ಸಂಚು ರೂಪಿಸಿದ್ದ ಪ್ರಮುಖ ಆರೋಪಿ. ಜಬ್ಬಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆತ ಪೆರೋಲ್ ರಜೆಯಲ್ಲಿ ಜೈಲಿನಿಂದ ಹೊರಬಂದು, ಬಂಧಿತ ಆರು ಆರೋಪಿಗಳೊಂದಿಗೆ ದರೋಡೆ ಮಾಡಿದ್ದ. ದರೋಡೆ ಮಾಡಿದ ಬಳಿಕ ಪೆರೋಲ್ ರಜೆ ಮುಗಿಸಿ ಮತ್ತೆ ಕಣ್ಣೂರು ಸೆಂಟ್ರಲ್ ಜೈಲು ಸೇರಿಕೊಂಡಿದ್ದ.

ಆರೋಪಿ ರವಿ
ಆರೋಪಿ ರವಿ

ಪುತ್ತೂರು ಗ್ರಾಮಾಂತರ ಸಿಪಿಐ ರವಿ ಬಿ.ಎಸ್. ನೇತೃತ್ವದಲ್ಲಿ ಎಸ್.ಐ.ಧನಂಜಯ ಅವರು ಆರೋಪಿ ರವಿಯ ವಿಚಾರಣೆಗಾಗಿ 5 ದಿನ ಪೊಲೀಸ್ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ನ.15ರವರೆಗೆ 7 ದಿನ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT