ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಜಿ ಕೇಂದ್ರಕ್ಕೆ 21 ಸಂತ್ರಸ್ತರ ಸ್ಥಳಾಂತರ

ಭೂಕುಸಿತ, ಭಾರಿ ಮಳೆಯಿಂದ ನಲುಗಿದ ಸುಳ್ಯದ ಹಲವು ಗ್ರಾಮಗಳು: ಸಂಪರ್ಕ ಕಡಿತದಿಂದ ನಾಗರಿಕರ ಪರದಾಟ
Last Updated 5 ಆಗಸ್ಟ್ 2022, 2:51 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಭೂಕುಸಿತ ಹಾಗೂ ಭಾರಿ ಮಳೆಗೆ ನಲುಗಿರುವ ಸುಳ್ಯ ತಾಲ್ಲೂಕಿನ ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನತೆ ಇದೀಗ ಸಂಜೆ ಹೊತ್ತು ಸಣ್ಣ ಪ‍್ರಮಾಣದಲ್ಲಿ ಮಳೆಯಾದರೂ ಆತಂಕಗೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿರುವ ಮನೆಯವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಬುಧವಾರ ಸಂಜೆಯ ಭಾರಿ ಮಳೆಗೆ ಆ ಭಾಗದಲ್ಲಿ ಮತ್ತೆ ಹಾನಿ ಮುಂದುವರಿದಿದೆ. ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದ ನಗರ ಬಟ್ಟೆಮಜಲು ಸಂಪರ್ಕ ರಸ್ತೆಯ ಸೇತುವೆ ಪೂರ್ತಿ ಮುರಿದುಬಿದ್ದು, ಸಂಪರ್ಕ ಕಡಿತಗೊಂಡಿದೆ. ಸುಬ್ರಹ್ಮಣ್ಯ ಗ್ರಾಮದ ಅರಂಪಾಡಿ ಎಂಬಲ್ಲಿ ಮೋರಿ ಮಣ್ಣು ಕೊಚ್ಚಿಹೋಗಿ ಸಂಪರ್ಕ ಕಡಿತವಾಗಿದೆ.

ಬಳ್ಪ ಗ್ರಾಮದಲ್ಲಿ ತೋಡಿನ ಮೋರಿ ಕೊಚ್ಚಿಹೋಗಿ ಸಂಪರ್ಕ ಕಡಿತವಾಗಿದೆ. ಐನೆಕಿದು ಗ್ರಾಮದ ದಾಮೋದರ ಗೌಡ ಕೂಜಿಗೋಡು ಕಟ್ಟೆಮನೆ ಅವರ ಮನೆ ಹಿಂಬದಿ ಗುಡ್ಡಕುಸಿದು ಮನೆಗೆ ಹಾನಿಯಾಗಿದೆ.

ಕೊಲ್ಲಮೊಗ್ರುವಿನಲ್ಲಿ ಸಂಜೆ ಸುರಿಯುವ ಭಾರಿ ಮಳೆಗೆ ಮನೆ ಯೊಂದಕ್ಕೆ ನೀರು ನುಗ್ಗಿದ್ದು ಅಲ್ಲಿದ್ದವ ರನ್ನು ಸ್ಥಳಾಂತರ ಮಾಡಲಾಗಿದೆ. ಈ ವೇಳೆ ವೃದ್ಧೆಯೊಬ್ಬರನ್ನು ಸ್ಥಳೀಯರು ಎತ್ತಿಕೊಂಡು ರಕ್ಷಣೆ ಮಾಡಿದ್ದಾರೆ.

ಕಾಳಜಿ ಕೇಂದ್ರ ಆರಂಭ: ಕಲ್ಮಕಾರು ಗ್ರಾಮದ ಗುಳಿಕಾನದ ಸುಮಾರು 9 ಮನೆಯವರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚಿಸಲಾಗಿತ್ತು. ಮೂರು ಕುಟುಂಬಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಉಳಿದ ಆರು ಕುಟುಂಬಗಳ 21 ಜನರನ್ನು ಕಲ್ಮಕಾರಿನ ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಗುರುವಾರ ಸೇರಿಸಲಾಯಿತು. ಕಂದಾಯ ನಿರೀಕ್ಷಕ ಶಂಕರ್, ಪಿಡಿಒ, ಗ್ರಾಮ ಪಂಚಾಯತಿ ಸದಸ್ಯರು ಅಲ್ಲಿನ ನಿವಾಸಿಗಳನ್ನು ಮನವೊಲಿಸಿ ಕಾಳಜಿ ಕೇಂದ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಳಜಿ ಕೇಂದ್ರಕ್ಕೆ ಜಿಲ್ಲಾ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿದರು. ಕಾಳಜಿ ಕೇಂದ್ರದ ಜನರಿಗೆ ಆಹಾರ ಸಾಮಗ್ರಿ ಪೂರೈಸಲು ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೋಟ ನೀರುಪಾಲು: ಮಳೆಯಿಂದಾಗಿ ಕೊಲ್ಲಮೊಗ್ರದ ದೋಲನಮನೆ ಲಲಿತಾ ಎಂಬುವರ ಮನೆ ಕುಸಿದಿದ್ದು, ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಅಲ್ಲಿಯೇ ಸಮೀಪ ಹೊಳೆಯ ಕೊರೆತಕ್ಕೆ ಸಿಲುಕಿ ಅಪಾರ ಪ್ರಯಾಣದಲ್ಲಿ ಹಾನಿಯಾದ ಕೃಷಿ ಭೂಮಿಯನ್ನು ವೀಕ್ಷಿಸಿ ಪರಿಹಾರದ ಭರವಸೆ ನೀಡಿದರು. ಕಂದಾಯ ನಿರೀಕ್ಷಕ ಎಂ.ಎಲ್‌.ಶಂಕರ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಹಾನಿಯಾದ ಅನೇಕ ಕೃಷಿ ತೋಟಗಳಿಗೆ, ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಪಡೆದರು.

ಕೃಷಿ ಜಮೀನು ಮಾಯ: ಕೊಲ್ಲಮೊಗ್ರ ದೋಲನಮನೆ ಎಂಬಲ್ಲಿ ಹೊಳೆ ಕೊರತಕ್ಕೆ ಸಿಲುಕಿ ಸುಮಾರು 2.5 ಎಕರೆ ಪ್ರದೇಶದಲ್ಲಿ ಸುಮಾರು 500 ಮಿಕ್ಕಿ ಅಡಿಕೆ ಮರ, ಅಡಿಕೆ ಗಿಡಗಳು ನೀರುಪಾಲಾಗಿದೆ. ಈ ಪ್ರದೇಶ ಸಮುದ್ರದಂತಾಗಿದೆ. ಕೃಷಿ ಪಂಪ್ ಸೆಟ್, ಪೈಪ್‌ಗಳು ಹೊಳೆ ಪಾಲಾಗಿದೆ. ಹೊಳೆಯಲ್ಲಿ ಕೊಚ್ಚಿ ಬಂದ ಭಾರಿ ಗಾತ್ರದ ಮರಗಳು ತೋಟದ ಒಳಗೆ ನುಗ್ಗಿದ್ದು ಅಡಿಕೆ ಮರ, ಗಿಡಗಳಿಗೆ ಹಾನಿ ಮಾಡಿದೆ. ಅತ್ಯಂತ ಸಣ್ಣ ಕೃಷಿ ಭೂಮಿಯನ್ನು ಹೊಂದಿರುವ ಇಲ್ಲಿಯ ಕೃಷಿಕರಿಗೆ ಮುಂದಿನ ಭವಿಷ್ಯದ ಚಿಂತೆ ಕಾಡುತ್ತಿದೆ.

‘2018ರಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಹೊಳೆಯಲ್ಲಿ ಮರಗಳು ಕೊಚ್ಚಿ ಬಂದು, ಒಂದೆಡೆ ಸಿಲುಕಿಕೊಂಡು ದೋಲನಮನೆ ಎಂಬಲ್ಲಿ ಹೊಳೆ ಹರಿವಿನ ದಿಕ್ಕು ಬದಲಾಯಿಸಿ ಕೃಷಿ ಜಮೀನಿನಲ್ಲಿ ಹರಿಯಲಾರಂಭಿಸಿತು. ಈ ಕೊಲ್ಲಮೊಗ್ರ ಗ್ರಾಮ ಪಂಚಾಯಿತಿಗೆ ತಡೆಗೋಡೆ ರಚಿಸುವಂತೆ ಫಲಾನುಭವಿಗಳಾದ ಮಧುಸೂದನ, ಜನಾರ್ದನ, ಹೊನ್ನಮ್ಮ ಮೊದಲಾದವರು ಮನವಿ ಸಲ್ಲಿಸಿದ್ದರು. ಸಚಿವರ ಮತ್ತು ಕಂದಾಯ ಇಲಾಖೆಯ ಗ್ರಾಮ ವಾಸ್ತವ್ಯದಲ್ಲೂ ಈ ಕುರಿತು ಮನವಿ ಮಾಡಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಪರಿಹಾರ ದೊರಕದೆ ಇಡೀ ಕೃಷಿ ಭೂಮಿ ಹೊಳೆ ಪಾಲಾಗುತ್ತಿದೆ. ಈ ವರ್ಷ ಕೂಡ ಕೊಲ್ಲಮೊಗ್ರ ಗ್ರಾಮ ಪಂಚಾಯಿತಿಗೆ, ತಹಶೀಲ್ದಾರ್, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳು, ಇಲಾಖೆಯವರು ಇದಕ್ಕೆ ಸೂಕ್ತ ಪರಿಹಾರ ಒದಗಿಸಿ ಸಂಕಷ್ಟಕ್ಕೆ ಪರಿಹಾರ ನೀಡಬೇಕಾಗಿದೆ’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕರ ನಡೆಗೆ ಅಸಮಾಧಾನ: ಸುಬ್ರಹ್ಮಣ್ಯದ ಹರಿಹರ ಪಲ್ಲತ್ತಡ್ಕ ಭಾಗ ಮಳೆಹಾನಿ ಪ್ರದೇಶಗಳ ಪರಿಶೀಲನೆಗೆ ಬುಧವಾರ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮಲೆಯಾಲ-ಐನೆಕಿದು ಹದಗೆಟ್ಟ ರಸ್ತೆಗೆ ಬಾರದಂತೆ ಸ್ಥಳೀಯ ಬಿಜೆಪಿ ನಾಯಕರು ತಪ್ಪಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಸುಬ್ರಹ್ಮಣ್ಯದಿಂದ ಐನೆಕಿದು-ಹರಿಹರ ಪಲ್ಲತ್ತಡ್ಕ ಭಾಗಕ್ಕೆ ಮಲೆಯಾಲ-ಮೂಲಕ ಸಂಚರಿಸಬೇಕಿದ್ದ ಉಸ್ತುವಾರಿ ಸಚಿವರನ್ನು, ನಡುಗಲ್ಲು ಮೂಲಕ ಸುಮಾರು 20 ಕಿ.ಮೀ. ಸುತ್ತು ಬಳಸಿ ಕರೆದೊಯ್ಯಲಾಗಿದೆ. ಇದರಿಂದಾಗಿ ಸಚಿವರಿಗೆ ಇಲ್ಲಿನ ನೈಜ ಪರಿಸ್ಥಿತಿ ತಿಳಿದುಕೊಳ್ಳುವುದು ಅಸಾಧ್ಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT