ಸೋಮವಾರ, ಜನವರಿ 24, 2022
21 °C
ಕುಕ್ಕೆ ದೇವಸ್ಥಾನದ ಬ್ರಹ್ಮರಥಕ್ಕೆ ಶಿಖರ ಮುಹೂರ್ತ: ಶಿಖರ ಅಳವಡಿಕೆ

ಸುಬ್ರಹ್ಮಣ್ಯನ ಪಂಚಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಪ್ರಯುಕ್ತ ಚೌತಿಯ ದಿನವಾದ ಮಂಗಳವಾರ ಪಂಚಮಿ ರಥ ಮತ್ತು ಬ್ರಹ್ಮರಥಕ್ಕೆ ಶಿಖರ ಮುಹೂರ್ತ ನಡೆಯಿತು. ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ವೈದಿಕ ವಿದಿವಿಧಾನಗಳ ಮೂಲಕ ಶಿಖರ ಮುಹೂರ್ತ ನೆರವೇರಿಸಿದರು.

ಬಳಿಕ ಮೂಲನಿವಾಸಿ ಮಲೆಕುಡಿಯ ಜನಾಂಗದವರು ನೂತನ ಶಿಖರವನ್ನು ನೂತನ ಬ್ರಹ್ಮರಥಕ್ಕೆ ಅಳವಡಿಸಿದರು. ಇದೇ ವೇಳೆ ಪಂಚಮಿ ರಥಕ್ಕೆ ಕೂಡಾ ಶಿಖರ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ, ಶಿಷ್ಟಾಚಾರ ವಿಭಾಗದ ಕೆ.ಎಂ.ಗೋಪಿನಾಥ್ ನಂಬೀಶ, ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಐತಪ್ಪ ಅರಿಗುಡಿ, ಸಹಗುರಿಕಾರ ದಿನಕರ ಕುಲ್ಕುಂದ ಕಾಲನಿ, ಪ್ರಮುಖರಾದ ರಾಜೇಶ್ ಎನ್.ಎಸ್ ಮತ್ತು ಭಕ್ತರು ಇದ್ದರು.

ತೈಲಾಭ್ಯಂಜನ: ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಮಾರ್ಗಶೀರ ಶುದ್ಧ ಪಂಚಮಿಯ ದಿನವಾದ ಬುಧವಾರ ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ. ಮಧ್ಯಾಹ್ನ ಪಲ್ಲಪೂಜೆ ನಡೆಯಲಿದೆ. ರಾತ್ರಿ ವಿಶೇಷ ಪಲ್ಲಕ್ಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿವೆ. ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ ‘ಕುಕ್ಕೆಬೆಡಿ’ ಪ್ರದರ್ಶಿತವಾಗಲಿದೆ. ಮಧ್ಯಾಹ್ನ ಷಣ್ಮುಖ ಪ್ರಸಾದ ಮಾತ್ರವಲ್ಲದೇ, ಆದಿ ಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಕೂಡಾ ಭೋಜನ ಪ್ರಸಾದ ವಿತರಿಸಲಾಗುತ್ತದೆ.

ಪಾರ್ಕಿಂಗ್‌ಗೆ ವ್ಯವಸ್ಥೆ

ಚಂಪಾಷಷ್ಠಿ ಜಾತ್ರೆ ಪ್ರಯುಕ್ತ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಗುರುವಾರ ಸಂಜೆ 4 ಗಂಟೆಯವರೆಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸುಬ್ರಹ್ಮಣ್ಯ ಸಬ್‌ ಇನ್‌ಸ್ಪೆಕ್ಟರ್‌ ಜಂಬುರಾಜ್ ಮಹಾಜನ್ ತಿಳಿಸಿದ್ದಾರೆ.

ಪುತ್ತೂರು, ಕಡಬ, ಗುಂಡ್ಯ ಕಡೆಯಿಂದ ಬರುವ ಲಘು ವಾಹನಗಳಿಗೆ ಕುಮಾರಧಾರಾ ಬಳಿಯ ಹೆಲಿಪ್ಯಾಡ್, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ವಲ್ಲೀಶ ಸಭಾಭವನದ ಬಳಿ, ದ್ವಿಚಕ್ರ ವಾಹನಗಳಿಗೆ ಕೆ.ಎಸ್.ಎಸ್ ಕಾಲೇಜು ಮೈದಾನ ಮತ್ತು ಪೊಲೀಸ್ ಕವಾಯುತು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಸುಳ್ಯ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಸವಾರಿ ಮಂಟಪ ಬಳಿ ಇರುವ ಪಾರ್ಕಿಂಗ್ ಸ್ಥಳ, ಸುಳ್ಯ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಸವಾರಿ ಮಂಟಪ ಬಳಿ ಇರುವ ಪಾರ್ಕಿಂಗ್ ಸ್ಥಳ, ಲಘು ವಾಹನಗಳಿಗೆ ವಲಯ ಅರಣ್ಯಾಧಿಕಾರಿ ಕಚೇರಿ ಬಳಿ ಮತ್ತು ಇಂಜಾಡಿ ಬಳಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕಡಬ ಗುಂಡ್ಯ ಕಡೆಯಿಂದ ಬರುವ ಸುಳ್ಯ ಕಡೆಗೆ ಹೋಗುವ ಎಲ್ಲ ಖಾಸಗಿ ವಾಹನಗಳು ಕುಮಾರಧಾರಾ ಮೂಲಕ ಪಂಜ ಮಾರ್ಗವಾಗಿ ಸಂಚರಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು