ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ನಿಧನ

ಮಂಗಳೂರು: ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88 ವರ್ಷ) ಅವರು ಬುಧವಾರ ನಿಧನರಾಗಿದ್ದಾರೆ.
ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು.
1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.
ಸುಂದರ್ ರಾವ್ ಅವರು, ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಗುರುವಾರ ನೆರವೇರಲಿದೆ.
ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ಮನೆಯಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಸುಂದರ್ ರಾವ್ ಅವರ ಅಗಲುವಿಕೆಗೆ ಯಕ್ಷಗಾನ ಕಲಾರಂಗದ ಇಡೀ ತಂಡ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.