ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ಕಂಪು ಪಸರಿಸಿದ ಕುಣಿತ ಭಜನೆ

ಕರಾವಳಿಯ ಧಾರ್ಮಿಕ ವೈಭವದಲ್ಲಿ 13ಕ್ಕೂ ಹೆಚ್ಚು ತಂಡಗಳು ಭಾಗಿ
Published 8 ಸೆಪ್ಟೆಂಬರ್ 2023, 5:25 IST
Last Updated 8 ಸೆಪ್ಟೆಂಬರ್ 2023, 5:25 IST
ಅಕ್ಷರ ಗಾತ್ರ

–ಅಶ್ವಿನಿ ಎಚ್‌.

ಮಂಗಳೂರು: ‘ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ..ಡೀಡೀ ಆಡ್ಯಾನೇss ರಂಗ..’ ಎಂದು ಹಾಡುತ್ತ ಬಾಲೆಯರು ‘ನಂದಗೋಕುಲ’ದಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಪ್ರೇಕ್ಷಕರು ಭಾವಪರವಶರಾಗಿ ತಲೆದೂಗುತ್ತಿದ್ದರು.

ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಸಂಭ್ರಮದಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿಯು ನಗರದ ಕದ್ರಿ ಮಂಜುನಾಥ ದೇವಸ್ಥಾನದ ‘ನಂದಗೋಕುಲ’ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಕುಣಿತ ಭಜನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಭಕ್ತಿಭಾವದ ಅಲೆಯೆಬ್ಬಿಸಿದರು.

ಎಂಟು ವರ್ಷದ ಚಿಣ್ಣರಿಂದ 18 ವರ್ಷದ ಯುವಕ–ಯುವತಿಯರು ತಂಡದಲ್ಲಿದ್ದರು. ಸರಸ್ವತಿ ಭಜನಾ ಕುಣಿತ ಭಜನಾ ಮಂಡಳಿ, ಶ್ರೀರಾಮ ಮಕ್ಕಳ ಕುಣಿತ ಭಜನಾ ಮಂಡಳಿ, ಬಾಲ ವಿಕಾಸ ಭಜನಾ ಮಂಡಳಿ, ಸುಬ್ರಹ್ಮಣ್ಯ ಭಜನಾ ಮಂಡಳಿ, ಹರೇಕೃಷ್ಣ ಭಜನಾ ಮಂಡಳಿ, ಮಯೂರ ಮಹಿಳಾ ಮಂಡಳಿ, ಜಗದಾಂಬಿಕಾ ಭಜನಾ ಮಂಡಳಿ, ಯುವವಾಹಿನಿ, ಶೇಷ ಶಯನ ಕುಣಿತ ಭಜನ ಮಂಡಳಿ, ಶ್ರೀರಾಮ ಮಕ್ಕಳ ಕುಣಿತ ಭಜನಾ ಮಂಡಳಿ, ಧರ್ಮಶಾಸ್ತ್ರ ಭಕ್ತ ವೃಂದ ಕಲ್ಲುರ್ಟಿ ಕ್ಷೇತ್ರ, ಪಂಜಿಮೊಗರು ಭಜನಾ ಮಂಡಳಿ, ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಘಟಕ ಸೇರಿದಂತೆ 13 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು.

ಮಕ್ಕಳು ಕೈ ತಾಳಕ್ಕೆ ಹೆಜ್ಜೆ ಹಾಕುತ್ತ ನರ್ತಿಸುವ ಸೊಬಗು ನೋಡಗರ ಮನದಲ್ಲಿ ಭಕ್ತಿರಸವನ್ನು ಉಕ್ಕುತ್ತಿತ್ತು. ನಾ ಮುಂದು ತಾ ಮುಂದು ಎಂಬಂತೆ ಗೋಪಾಲನನ್ನು ಕರೆದಂತೆ ಭಾಸವಾಗುತ್ತಿತ್ತು.

‘ಸಂಜೆ ಶಾಲೆಯಿಂದ ಬಂದ ಮೇಲೆ ನಿತ್ಯವೂ ಮೂರು ತಾಸು ಕುಣಿತ ಭಜನೆ ಅಭ್ಯಾಸ ಮಾಡುತ್ತೇನೆ. ಇದು ದೈನಂದಿನ ಚಟುವಟಿಕೆಯ ಭಾಗವಾಗಿದೆ. 15–20 ಭಜನೆಗಳು ಬರುತ್ತವೆ’ ಎಂದು ನೀರುಮಾರ್ಗದಿಂದ ಬಂದಿದ್ದ ಎಂಟನೇ ತರಗತಿಯ ಬಾಲಕ ಅಕ್ಷಯ್ ಹೇಳಿದನು. ಆತನ ಜೊತೆಗೆ ಮೂರನೇ ತರಗತಿ ಓದುತ್ತಿರುವ ಅಂಚಿತ ಕೂಡ ಕುಣಿತ ಭಜನೆಯಲ್ಲಿ ಭಾಗವಹಿಸಲು ಉತ್ಸುಕತೆಯಿಂದ ಬಂದಿದ್ದ.

ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಕದ್ರಿಯ ಅಧ್ಯಕ್ಷ ಗೋಕುಲ್ ಕದ್ರಿ, ಕಾರ್ಯದರ್ಶಿ ಆನಂದ ದೇವಾಡಗ, ಕೋಶಾಧಿಕಾರಿ ಸಂದೀಪ್ ಕದ್ರಿ ಕಂಬಳ, ಕೇಶವನಾಥ ಕದ್ರಿ ಇದ್ದರು.

ವಿಜೇತರಿಗೆ ಪ್ರಥಮ ಬಹುಮಾನ ₹3,333, ದ್ವಿತೀಯ ₹2,222, ತೃತೀಯ ₹1,111 ನೀಡಲಾಯಿತು. ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಎಸ್‌.ಎಲ್. ಶೇಟ್ ಜ್ಯುವೆಲರಿಯವರು ಸಹಕಾರ ನೀಡಿದರು.

ನಿರೀಕ್ಷೆ ಮೀರಿ ಸ್ಪಂದನೆ

ಸೌಹಾರ್ದ ಮೂಡಿಸುವ ನಿಟ್ಟಿನಲ್ಲಿ ಕುಣಿತ ಭಜನೆ ಸ್ಪರ್ಧೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಕುಳಿತು ಹಾಡುವ ಭಜನೆಗಿಂತ ಕುಣಿದು ಹಾಡುವ ಭಜನೆ ಬಗ್ಗೆ ಯುವ ಸಮೂಹ ಒಲವು ತೋರುತ್ತಿದೆ. ನಿರೀಕ್ಷೆಗಿಂತ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು’ ಎಂದು ಭಜನೆ ಸ್ಪರ್ಧೆ ನಿರ್ವಾಹಕ ಸುಧಾಕರ್ ರಾವ್ ಪೇಜಾವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT