ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮುದ್ರಪಾಲಾಗುತ್ತಿದ್ದ ಮೂವರ ರಕ್ಷಣೆ, ಮಹಿಳೆ ಸಾವು

ಮೊಗವೀರಪಟ್ಣ ಕಡಲ ಕಿನಾರೆಯಲ್ಲಿ ದುರ್ಘಟನೆ
Published 12 ಜೂನ್ 2024, 6:51 IST
Last Updated 12 ಜೂನ್ 2024, 6:51 IST
ಅಕ್ಷರ ಗಾತ್ರ

ಉಳ್ಳಾಲ: ಇಲ್ಲಿಗೆ ಸಮೀಪದ ಮೊಗವೀರಪಟ್ಣ ಬಳಿಯ ಕಡಲ ಕಿನಾರೆಗೆ ವಿಹಾರಕ್ಕೆ ಬಂದಿದ್ದ ನಾಲ್ವರು ಪ್ರವಾಸಿಗರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಅವರಲ್ಲಿ ನಾಲ್ವರನ್ನು ಸ್ಥಳೀಯರು ಮತ್ತು ವಿಹಾರಕ್ಕೆ ಬಂದಿದ್ದ ಪ್ರವಾಸಿಗರು ರಕ್ಷಿಸಿದ್ದಾರೆ. ಸಮುದ್ರದಲ್ಲಿ ನೀರಿನಲ್ಲಿ ಮುಳುಗಿದ್ದ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.

ಮೃತ ಮಹಿಳೆಯನ್ನು ತೆಲಂಗಾಣದ ಕೊಂಡಾಪುರದ ಸೆರಿಲಿಂಗಪಲ್ಲಿ ನಿವಾಸಿ ಪಿ.ಎಲ್.ಪ್ರಸನ್ನ ಅವರ ಪತ್ನಿ ಪರಿಮೀ ರತ್ನ ಕುಮಾರಿ (57) ಎಂದು ಗುರುತಿಸಲಾಗಿದೆ. ನೀರುಪಾಲಾದ ಇತರ ಮೂವರು ಪ್ರಥಮ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.  ‌

ತೆಲಂಗಾಣದ ಆರು ಮಹಿಳೆಯರು ಹೈದರಬಾದ್‍ನಿಂದ ವಿಮಾನ ಮೂಲಕ  ಮೈಸೂರಿಗೆ ಬಂದು ಅಲ್ಲಿಂದ ಬಾಡಿಗೆ ಇನ್ನೋವಾ ಕಾರಿನಲ್ಲಿ ತೆರಳಿ ಕೊಡಗಿನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ್ದರು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮುಗಿಸಿ ಮಂಗಳೂರಿಗೆ ಬಂದಿದ್ದರು. ಇಲ್ಲಿನ ಮೊಗವೀರಪಟ್ಣ ಕಿನಾರೆಯಲ್ಲಿ ಆಡುತ್ತಿದ್ದಾಗ ಭಾರಿ ಗಾತ್ರದ ಅಲೆಯೊಂದು ಅಪ್ಪಳಿಸಿತ್ತು. ಅಲೆಯ ಸೆಳೆತಕ್ಕೆ ಸಿಲುಕಿದ ರತ್ನ ಕುಮಾರಿ ಸೇರಿದಂತೆ ನಾಲ್ವರು ಕೊಚ್ಚಿ ಹೋಗಿದ್ದರು. ಸ್ಥಳೀಯರು ಮತ್ತು ಸಮುದ್ರ ತೀರಕ್ಕೆ ಬಂದಿದ್ದ ಪ್ರವಾಸಿಗರು ನಾಲ್ವರನ್ನು ರಕ್ಷಿಸಿದ್ದರು. ನೀರಿನಲ್ಲಿ ಮುಳುಗಿ ಗಂಭೀರ ಸ್ಥಿತಿಯಲ್ಲಿದ್ದ ಪರಿಮೀ ರತ್ನ ಕುಮಾರಿ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಈ ಬಗ್ಗೆ  ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮೃತದೇಹವನ್ನು ಸಂಬಂಧಿಕರು ಮಂಗಳವಾರ ತೆಲಂಗಾಣಕ್ಕೆ ಕೊಂಡೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT