ಕುಕ್ಕೆ ಸುಬ್ರಹ್ಮಣ್ಯ: ಭಕ್ತಿ ಸಡಗರದ ಲಕ್ಷದೀಪೋತ್ಸವ

7
temple

ಕುಕ್ಕೆ ಸುಬ್ರಹ್ಮಣ್ಯ: ಭಕ್ತಿ ಸಡಗರದ ಲಕ್ಷದೀಪೋತ್ಸವ

Published:
Updated:
Deccan Herald

ಸುಬ್ರಹ್ಮಣ್ಯ: ಸಾಲು ಸಾಲು ಹಣತೆಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ಗುರುವಾರ ರಾತ್ರಿ ನೆರವೇರಿತು.

ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು. ರಥ ಬೀದಿಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಶ್ರೀ ದೇವರ ಉತ್ಸವ ನೆರವೇರಿತು. ದೀಪಾಲಂಕಾರಗಳ ನಡುವೆ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವವು ನೆರವೇರಿತು.

ಹೊರಾಂಗಣದ ಸುತ್ತಲೂ ಹಣತೆಗಳ ಸಾಲಿನ ದೀಪಾಲಂಕಾರದ ಜತೆಗೆ, ವಿದ್ಯುತ್ ಅಲಂಕಾರದಿಂದ ದೇವಸ್ಥಾನ ವಿಶೇಷವಾಗಿ ಕಂಗೊಳಿಸುತ್ತಿತ್ತು. ರಥ ಬೀದಿಯಿಂದ ಕಾಶಿಕಟ್ಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳಗಿದ ಹಣತೆಗಳು ಲಕ್ಷದೀಪೋತ್ಸವಕ್ಕೆ ವಿಶೇಷ ಮೆರುಗು ನೀಡಿದ್ದವು. ಈ ಭಕ್ತಿಭಾವದ ಸನ್ನಿವೇಶದಲ್ಲಿ ಸಹಸ್ರಾರು ಭಕ್ತರು ಚಂದ್ರಮಂಡಲ ರಥದಲ್ಲಿ ಉತ್ಸವ ಸ್ವೀಕರಿಸಿದ ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು. ದೇವಳದ ಹಾಗೂ ಸಾರ್ವಜನಿಕ ಭಕ್ತರ ಸಹಕಾರದಿಂದ ಲಕ್ಷ ಹಣತೆ ಬೆಳಗಿತು. ಇದು ಉತ್ಸವಕ್ಕೆ ವಿನೂತನ ಕಳೆ ನೀಡಿತು.

ಈ ಮೊದಲು ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ ನಡೆಯಿತು. ಆ ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇರಿತು. ಮಹಾಪೂಜೆ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ಹೇಳಿದ ಬಳಿಕ ದೈವದ ನರ್ತನ ಸೇವೆ ನೆರವೇರಿತು. ನಂತರ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರಿತು.

ಬಳಿಕ ಚಂದ್ರಮಂಡಲ ರಥದಲ್ಲಿ ಶ್ರೀ ದೇವರ ಉತ್ಸವವು ಕಾಶಿಕಟ್ಟೆ ತನಕ ನಡೆಯಿತು. ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಶ್ರೀ ದೇವರ ಗುರ್ಜಿ ಪೂಜೋತ್ಸವ ನಡೆಯಿತು. ಈ ಮೊದಲು ಕಾಶಿಕಟ್ಟೆ ಮಹಾಗಣಪತಿಗೆ ದೀಪಾರಾಧನೆ ಯುಕ್ತ ರಂಗಪೂಜೆ ನಡೆದು ಬಳಿಕ ಸವಾರಿ ಮಂಟಪದಲ್ಲಿ ಪೂಜೆ ನೆರವೇರಿತು. ಕ್ಷೇತ್ರ ದೈವ ಹೊಸಳಿಗಮ್ಮನ ದೈವದರ್ಶನ ಮತ್ತು ನರ್ತನ ಸೇವೆ ಜರುಗಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !