ಮಂಗಳವಾರ, ಡಿಸೆಂಬರ್ 6, 2022
21 °C

ಮನಸುಗಳನ್ನು ಕಟ್ಟುವ ಗ್ರಂಥಾಲಯ: ಸಂಕಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಜನರ ಮನಸುಗಳನ್ನು ಕಟ್ಟುತ್ತಾ ಸಮಾಜವನ್ನು ಒಂದುಗೂಡಿಸುತ್ತಾ ಬಂದಿರುವ ಗ್ರಂಥಾಲಯಗಳು ಬಹುಮುಖಿ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕ ಡಾ.ಗಣೇಶ್‌ ಅಮೀನ್‌ ಸಂಕಮಾರ್‌ ಅಭಿಪ್ರಾಯಪಟ್ಟರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ನಗರಕೇಂದ್ರ ಗ್ರಂಥಾಲಯದ ಆಶ್ರಯದಲ್ಲಿ ಇಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾನಸಿಕ ಆರೋಗ್ಯವನ್ನು ಕಾಪಾಡಲು ಪುಸ್ತಕ ಓದುವುದು ಪ್ರಯೋಜನಕಾರಿ. ಬರವಣಿಗೆಯು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಗ್ಯಾಜೆಟ್‌ ಬಳಕೆ ಹೆಚ್ಚಿದಂತೆ ಜನರಲ್ಲಿ ಪುಸ್ತಕ ಓದುವ ಹಾಗೂ ಬರೆಯುವ ಪ್ರವೃತ್ತಿ ಕಡಿಮೆ ಆಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನಗರ ಗ್ರಂಥಾಲಯ ಪ್ರಾಧಿಕಾರದ ಉಪನಿರ್ದೇಶಕ ರಾಘವೇಂದ್ರ ಕೆ.ವಿ., ‘ಇಲ್ಲಿ ಸಭಾಂಗಣವನ್ನೂ ಒಳಗೊಂಡ ನೂತನ ಕಟ್ಟಡ ನಿರ್ಮಾಣವಾಗಲಿದೆ. ಅದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಲೇಖಕರ ಜೊತೆ ಸಂವಾದ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗುತ್ತದೆ’ ಎಂದರು.

ಸಪ್ತಾಹವನ್ನು ಮೇಯರ್ ಜಯಾನಂದ ಅಂಚನ್‌ ಉದ್ಘಾಟಿಸಿದರು. ನಗರದ ವಿವಿಧ ಗ್ರಂಥಾಲಯಗಳ ಉತ್ತಮ ಓದುಗರನ್ನು ಗೌರವಿಸಲಾಯಿತು.

ಸಪ್ತಾಹದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಾದ ಸ್ತುತಿ ಕಾರ್ಕಳ, ಆರ್‌.ವಿ ಲಕ್ಷ್ಮಣ್‌,  ಅಭಯ್‌ ಎಚ್. ನಾಯಕ್‌, ಜ್ಞಾಪಕಶಕ್ತಿ ಸ್ಪರ್ಧೆಯ ವಿಜೇತರಾದ ಸಂಗೀತಾ ಮಾಸ್ತರ್, ಧೃತಿ, ಶಿವಾನಿ ಶೆಟ್ಟಿ, ಕನ್ನಡ ಪುಸ್ತಕ ಓದುವ ಸ್ಪರ್ಧೆಯ ವಿಜೇತರಾದ ವಸುಂಧರಾ ಡಿ.ಎಂ, ಶಮಂತ್ ಜಿ.ಬಿ, ಅನಸೂಯಾ ಭಟ್‌, ಪುಸ್ತಕ ವಿಮರ್ಶೆ ಸ್ಪರ್ಧೆಯ ವಿಜೇತರಾದ ಅಹಮದ್‌ ಎಫ್‌.ಎಚ್‌, ಮಯೂರ್‌ ಕೆ ಹಾಗೂ ಅಮೃತ್‌ ವಿ. ಅವರಿಗೆ ಬಹುಮಾನ ವಿತರಿಸಲಾಯಿತು.  

ಪಾಲಿಕೆ ಸದಸ್ಯೆಯರಾದ ಲೀಲಾವತಿ, ಜೆಸಿಂತಾ ವಿಜಯ ಆಲ್ಫ್ರೆಡ್‌, ನಗರ ಗ್ರಂಥಾಲಯ ಪ್ರಾಧಿಕಾರದ  ಸದಸ್ಯರಾದ ಎವರೆಸ್ಟ್‌ ಕ್ರಾಸ್ತಾ, ಅರೆಹೊಳೆ ಸದಾಶಿವ ರಾವ್‌, ಸಾಹಿತಿ ರೂಪಕಲಾ ಆಳ್ವ, ನಗರಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಗಾಯತ್ರಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು