ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಸುವಾಸನೆಯ ಕಾಟು ಮಾವು ಕಣ್ಮರೆ

Published 17 ಮೇ 2024, 6:58 IST
Last Updated 17 ಮೇ 2024, 6:58 IST
ಅಕ್ಷರ ಗಾತ್ರ

ಮಂಗಳೂರು: ಮೇ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಹಳದಿ ಬಣ್ಣ, ಬೊಗಸೆ ಗಾತ್ರದ ವಿದೇಶಿ ತಳಿಗಳು, ಹೈಬ್ರಿಡ್ ಮಾವಿನ ಹಣ್ಣುಗಳ ನಡುವೆ ತನ್ನ ಸುವಾಸನೆಯಿಂದಲೇ ಗ್ರಾಹಕರನ್ನು ಸೆಳೆಯುವ ಉಂಡೆ ಗಾತ್ರದ ಹಸಿರು ಬಣ್ಣ ಕಾಟು ಮಾವು ಕಣ್ಮರೆಯಾಗಿದೆ.

ದೊಡ್ಡ ಮಳಿಗೆಗಳಲ್ಲೂ ಮಲ್ಲಿಕಾ, ಆಲ್ಫಾನ್ಸೊ, ಬಾದಾಮಿ, ಫೈರಿ, ಬಂಗನಪಲ್ಲಿ, ನೀಲಂ ಜಾತಿಯ ಹಣ್ಣುಗಳ ಸಾಲಿನಲ್ಲಿ ಕೆಳಗಿನ ಬುಟ್ಟಿಯಲ್ಲಿ ಒಪ್ಪವಾಗಿ ಕೂರುತ್ತಿದ್ದ ಪುಟ್ಟ ಪುಟ್ಟ ಹಸಿರು ಬಣ್ಣದ ಕಾಟು ಮಾವು ಪೇಟೆಯಲ್ಲಿ ವಿರಳವಾಗಿದೆ. ಇಡೀ ಮಾರುಕಟ್ಟೆ ಸುತ್ತಿದರೆ ಒಂದೆರಡು ಕಡೆಗಳಲ್ಲಿ ಮಾತ್ರ ಕಾಟು ಮಾವು ಮಾರಾಟ ಕಂಡುಬಂತು. 

‘ಮಾವಿನ ಹಂಗಾಮಿನಲ್ಲಿ ಬಿ.ಸಿ.ರೋಡ್, ಮೂಲ್ಕಿ, ಮೂಡುಬಿದಿರೆ, ಮಂಗಳೂರು ಸುತ್ತಮುತ್ತಲಿನ ಹಳ್ಳಿಗರು ಕಾಟು ಮಾವನ್ನು ತಂದು ಕೊಡುತ್ತಿದ್ದರು. ಈ ಬಾರಿ ಒಮ್ಮೆ ಕೂಡ ನಾಡತಳಿಯ ಮಾವು ಮಾರಾಟ ಮಾಡಿಲ್ಲ. ಕಾಟು ಮಾವನ್ನು ಕೇಳಿಕೊಂಡು ಬರುವ ಅನೇಕ ಗ್ರಾಹಕರು ಇದ್ದಾರೆ. ಸಾಮಾನ್ಯವಾಗಿ ಈ ಹಣ್ಣು ದುಬಾರಿಯೇ. ಕೆ.ಜಿ.ಯೊಂದಕ್ಕೆ ₹100 ದರ ಇದ್ದರೂ ಖರೀದಿಸುತ್ತಾರೆ’ ಎನ್ನುತ್ತಾರೆ ಹಂಪನಕಟ್ಟೆಯ ಫ್ರೂಟ್ಸ್‌ ಜಂಕ್ಷನ್‌ನ ಅದ್ದು ಆಝ್.

‘ನಾವೇ ಹಳ್ಳಿಗಳಿಗೆ ಹೋಗಿ ಕಾಟು ಮಾವು ಮರವನ್ನು ಗುತ್ತಿಗೆ ಹಿಡಿದು ಹಣ್ಣನ್ನು ತಂದು ಮಾರಾಟ ಮಾಡುತ್ತಿದ್ದೆವು. ಈ ಬಾರಿ ಇಳುವರಿ ಕಡಿಮೆ ಇರುವ ಕಾರಣ ಗುತ್ತಿಗೆ ಮರವೇ ಸಿಗಲಿಲ್ಲ. ಮಹಿಳೆಯರು ಮಾರುಕಟ್ಟೆಗೆ ಬಂದರೆ ಸಾಮಾನ್ಯವಾಗಿ ಈ ಹಣ್ಣು ಖರೀದಿಸದೆ ಹೋಗುವುದೇ ಇಲ್ಲ. ಕಾಟು ಮಾವಿನ ಮರಗಳ ಸಂಖ್ಯೆ ಕ್ಷೀಣಿಸಿದೆ. ಎತ್ತರಕ್ಕೆ, ವಿಶಾಲವಾಗಿ ಬೆಳೆಯುವ ಮರದಿಂದ ಹಣ್ಣು ಕೀಳುವುದು ಕಷ್ಟ, ಹೆಚ್ಚು ಜಾಗವನ್ನು ನುಂಗುತ್ತದೆ ಎಂಬ ಕಾರಣಕ್ಕೆ ಹಲವರು ಮರಗಳನ್ನೇ ಕಡಿಯುತ್ತಿದ್ದಾರೆ’ ಎನ್ನುತ್ತಾರೆ ಸೆಂಟ್ರಲ್ ಮಾರುಕಟ್ಟೆಯ ಮಾವು ವ್ಯಾಪಾರಿ ಮುಸ್ತಫಾ.

‘ಉಪ್ಕರಿ, ಮೆಣಸ್ಕಾಯಿ, ಗೊಜ್ಜು, ಸಾಂಬಾರು ಮಾಡಲು ಹುಳಿ–ಸಹಿ ಮಿಶ್ರಿತ ಕಾಟು ಮಾವು ಯೋಗ್ಯ. ಈ ಬಾರಿ ಭಾನುವಾರದ ಸಂತೆಯಲ್ಲಿ ಒಮ್ಮೆ ಮಾತ್ರ ಕಾಟು ಮಾವು ಸಿಕ್ಕಿತು’ ಎಂದು ತರಕಾರಿ ಖರೀದಿಗೆ ಬಂದಿದ್ದ ಮಣ್ಣಗುಡ್ಡದ ಸುಮಿತ್ರಾ ಹೇಳಿದರು.

ದರ ತುಸು ಇಳಿಕೆ: ಹಣ್ಣುಗಳ ರಾಜ ಮಾವಿನ ಎದುರು ಉಳಿದ ಹಣ್ಣುಗಳ ಬೇಡಿಕೆ ತಗ್ಗಿದೆ. ಮಾವಿನ ಹಣ್ಣಿನ ದರ ಏಪ್ರಿಲ್‌ಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ. ಬೇಡಿಕೆಯಷ್ಟು ಪೂರೈಕೆಯೂ ಇಲ್ಲ. ಈ ಬಾರಿ ಬರದ ಹೊಡೆತಕ್ಕೆ ಎಲ್ಲ ಹಣ್ಣುಗಳ ಗಾತ್ರವೂ ಚಿಕ್ಕದಾಗಿದೆ. ಗುಣಮಟ್ಟವೂ ಉತ್ಕೃಷ್ಟವಾಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ತರಕಾರಿ ದರದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ. ಬೆಳ್ಳುಳ್ಳಿ, ಈರುಳ್ಳಿ ದರವೂ ಒಂದು ತಿಂಗಳಿನಿಂದ ಒಂದೇ ರೀತಿಯಲ್ಲಿದೆ. ಲಿಂಬೆ ಹಣ್ಣಿನ ದರ ಏರಿಕೆಯಾಗಿದ್ದು, ಕೆ.ಜಿ.ಗೆ ₹200ಕ್ಕೆ ತಲುಪಿದೆ.

ನೆಗೆತದತ್ತ ಅನಾನಸ್

ಅನಾನಸ್ ಬೆಲೆಗೆ ಒಂದೇಸವನೆ ಏರಿಕೆಯಾಗಿದೆ. ಸಾಮಾನ್ಯವಾಗಿ ಕೆ.ಜಿ.ಯೊಂದಕ್ಕೆ ₹40ರಿಂದ ₹45 ಇರುತ್ತಿದ್ದ ಅನಾನಸ್ ಈಗ ಕೆ.ಜಿ.ಗೆ ₹70ಕ್ಕೆ ಮಾರಾಟವಾಗುತ್ತಿದೆ. ‘ಸಗಟು ಮಳಿಗೆಗಳಲ್ಲಿ ಅನಾನಸ್ ಕೆ.ಜಿ.ಗೆ ₹60ರಿಂದ ₹65ಕ್ಕೆ ಲಭ್ಯವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೇರಳದ ಮೋರಿಸ್ ಭಾಗದಿಂದ ಸಾಮಾನ್ಯವಾಗಿ ಇಲ್ಲಿ ಅನಾನಸ್ ಪೂರೈಕೆಯಾಗುತ್ತದೆ. ನೀರಿನ ಕೊರತೆಯಿಂದ ಈಗ ಪೂರೈಕೆಯಾಗುತ್ತಿರುವ ಅನಾನಸ್ ಗಾತ್ರವೂ ಚಿಕ್ಕದಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಅದ್ದು ಆಝ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT