ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 7ರಿಂದ ಸಂಜೆ 7ರ ತನಕ ಅವಕಾಶ

ಲಾಕ್‌ಡೌನ್ ಸಡಿಲಿಕೆ ಅವಧಿ, ಸೇವೆಗಳನ್ನು ಹೆಚ್ಚಿಸಿದ ಜಿಲ್ಲಾಡಳಿತ
Last Updated 4 ಮೇ 2020, 9:56 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಲಾಕ್‌ಡೌನ್ ಸಡಿಲಿಕೆ ಅವಧಿಯನ್ನು ಬೆಳಿಗ್ಗೆ 7ರಿಂದ ಸಂಜೆ 7 ಗಂಟೆ ತನಕ ವಿಸ್ತರಿಸಿದ್ದು, ಷರತ್ತು ಬದ್ಧವಾಗಿ ವಿವಿಧ ಸೇವೆ, ವ್ಯಾಪಾರ, ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಸದ್ಯ ಎಂಟು ನಿರ್ಬಂಧಿತ (ಕಂಟೈನ್‌ಮೆಂಟ್) ವಲಯಗಳಿದ್ದು, ಇಲ್ಲಿಗೆ ಈ ವಿನಾಯಿತಿಗಳು ಅನ್ವಯವಾಗುವುದಿಲ್ಲ. ಅಲ್ಲದೇ, ವಿನಾಯಿತಿ ನೀಡಲಾದ ವಲಯದಲ್ಲೂ ಕೋವಿಡ್‌–19 ನಿಯಂತ್ರಣದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಅವಕಾಶ ಇಲ್ಲ

ಅನುಮತಿ ಇಲ್ಲದೇ ವಿಮಾನ, ರೈಲು, ಬಸ್ ಸೇರಿದಂತೆ ಸಾರಿಗೆ ಸಂಚಾರಕ್ಕೆ ಅವಕಾಶವಿಲ್ಲ. ಆತಿಥ್ಯ ನೀಡುವ ಹೋಟೆಲ್‌ ಇತ್ಯಾದಿಗಳು, ಜನ ಸೇರುವ ಸಿನಿಮಾ ಮಂದಿರ, ಜಿಮ್, ಕ್ರೀಡಾ ಸಮುಚ್ಚಯ, ಬಾರ್, ಕ್ಲಬ್, ಈಜುಕೊಳ, ಮನೋ ರಂಜನಾ ಪಾರ್ಕ್, ಸಭಾಂಗಣ, ಕಲ್ಯಾಣ ಮಂಟಪ, ಸ್ಪಾ, ಕ್ಷೌರ, ಜವಳಿ ಅಂಗಡಿಗಳಿಗೆ ಅವಕಾಶ ಇಲ್ಲ. ಯಾವುದೇ ರೀತಿಯ ಜನ ಸೇರುವ ಕಾರ್ಯಕ್ರಮ, ಸಭೆಗಳನ್ನು ನಡೆಸ ಬಾರದು. ಅವಶ್ಯಕ ವಲ್ಲದ ಸರಕುಗಳ ವ್ಯಾಪಾರದ ಮಾಲ್, ಮಾರುಕಟ್ಟೆಗಳಿಗೆ ಅವಕಾಶವಿಲ್ಲ.ಸಕಾರಣವಿಲ್ಲದೇ ಸುತ್ತಾಡಬಾರದು.

ಏನೇನು ಅವಕಾಶ

ಆಸ್ಪತ್ರೆಯ ಹೊರ ರೋಗಿ ವಿಭಾಗ (ಒಪಿಡಿ) ತೆರೆಯಲು ಅವಕಾಶ ನೀಡಲಾಗಿದೆ.

ನಗರದಲ್ಲಿರುವ ವಿಶೇಷ ಆರ್ಥಿಕ ವಲಯ, ರಫ್ತು ಘಟಕಗಳು, ಕೈಗಾರಿಕಾ ವಸಾಹತುಗಳು, ಕೈಗಾರಿಕಾ ಟೌನ್‌ಶಿಫ್‌ ಹಾಗೂ ಗ್ರಾಮೀಣ ಭಾಗದ ಎಲ್ಲ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ. ಅಗತ್ಯ ಪದಾರ್ಥಗಳ ಉತ್ಪಾದನೆ, ವೈದ್ಯಕೀಯ ಉತ್ಪನ್ನಗಳ ತಯಾರಿ, ಐಟಿ ಹಾರ್ಡ್‌ವೇರ್, ಸೆಣಬು ಕಾರ್ಖಾನೆಗಳಿಗೆ ಅವಕಾಶ.

ಸ್ಥಳೀಯವಾಗಿ ಲಭ್ಯ ಇರುವ ಕಾರ್ಮಿಕರನ್ನು ಬಳಸಿಕೊಂಡು ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ.

ಪುನರ್‌ ಬಳಕೆ ಇಂಧನಗಳ ಯೋಜನೆಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೆಲಸ, ಆಹಾರ ಸಂಸ್ಕರಣೆ, ಇಟ್ಟಿಗೆ ತಯಾರಿಗೆ ಅವಕಾಶ. ಹಾಲು ಇತ್ಯಾದಿಗಳ ಸಣ್ಣಪುಟ್ಟ ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಅವಶ್ಯ ಸಾಮಗ್ರಿಗಳ ಇ–ಕಾಮರ್ಸ್ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ.

ಶೇಕಡ 33 ಸಿಬ್ಬಂದಿಯೊಂದಿಗೆ ಖಾಸಗಿ ಕಚೇರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಸಂಸ್ಥೆ ರೂಪಿಸಬೇಕು ಎಂದು ನಿರ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT