ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸಂಪ್ಯ, ತುಂಬೆ ಕಂಟೇನ್ಮೆಂಟ್‌ನಿಂದ ಹೊರಕ್ಕೆ

Last Updated 4 ಮೇ 2020, 16:16 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌–19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದ ಪುತ್ತೂರು ತಾಲ್ಲೂಕಿನ ಸಂಪ್ಯ ಮತ್ತು ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮಗಳನ್ನು ಕಂಟೇನ್ಮೆಂಟ್‌ ವಲಯಗಳ ಪಟ್ಟಿಯಿಂದ ಕೈಬಿಟ್ಟು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಸೋಮವಾರ ಸಂಜೆ ಆದೇಶ ಹೊರಡಿಸಿದ್ದಾರೆ.

ಈ ಎರಡೂ ಗ್ರಾಮಗಳನ್ನು ಕಂಟೇನ್ಮೆಂಟ್‌ ವಲಯಗಳನ್ನಾಗಿ ಘೋಷಿಸಿ ಏಪ್ರಿಲ್‌ 17ರಂದು ಅಧಿಸೂಚನೆ ಹೊರಡಿಸ ಲಾಗಿತ್ತು. ಆ ಬಳಿಕ ಈ ಗ್ರಾಮಗಳನ್ನು ಸಂಪೂರ್ಣವಾಗಿ ಸೀಲ್‌ ಡೌನ್‌ ಮಾಡಲಾಗಿತ್ತು. 28 ದಿನಗಳಿಂದ ಕೋವಿಡ್‌– 19 ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗದ ಕಾರಣದಿಂದ ಕಂಟೇನ್ಮೆಂಟ್‌ ವಲಯಗಳಿಂದ ಈ ಪ್ರದೇಶಗಳನ್ನು ಕೈಬಿಡಲಾಗಿದೆ.

11 ಮಂದಿ ಆಸ್ಪತ್ರೆಗೆ ದಾಖಲು

ಜಿಲ್ಲೆಯಲ್ಲಿ ಸೋಮವಾರ 49 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಕೋವಿಡ್‌– 19 ಸೋಂಕಿನ ಶಂಕಿತ ಲಕ್ಷಣಗಳುಳ್ಳ 11 ಜನರನ್ನು ಹೆಚ್ಚಿನ ವೈದ್ಯಕೀಯ ನಿಗಾ ಇಡುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಐಸೋಲೇಷನ್‌ ವಾರ್ಡ್‌ಗಳಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿರುವ 12 ಜನರಲ್ಲಿ ಉಸಿರಾಟದ ತೀವ್ರ ತೊಂದರೆಯ (ಎಸ್‌ಎಆರ್‌ಐ) ಲಕ್ಷಣಗಳು ಕಂಡುಬಂದಿವೆ. ಈ ರೋಗಿಗಳ ಮೇಲೂ ನಿಗಾ ಇರಿಸಲಾಗಿದೆ. ರೋಗಿಗಳ ಸ್ಥಿತಿ ಕುರಿತು ನಿಯಮಿತವಾಗಿ ವರದಿ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

75 ವರದಿಗಳು ನೆಗೆಟಿವ್

ಕೋವಿಡ್‌–19 ಸೋಂಕು ಪತ್ತೆಗಾಗಿ ಕಳುಹಿಸಿದ್ದ 75 ಜನರ ಗಂಟಲಿನ ದ್ರವದ ಮಾದರಿಗಳ ವರದಿ ಸೋಮವಾರ ಲಭಿಸಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ. ಸೋಮವಾರ 28 ಜನರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಒಟ್ಟು 330 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧೆಡೆ ಆರಂಭಿಸಿರುವ ಜ್ವರ ಕ್ಲಿನಿಕ್‌ಗಳಲ್ಲಿ ಸೋಮವಾರ 207 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈವರೆಗೆ ಒಟ್ಟು 2,339 ಜನರು ಜ್ವರ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 40,206 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. 3,14,512 ಮನೆಗಳಿಗೆ ಭೇಟಿ ನೀಡಿರುವ ಆಶಾ ಕಾರ್ಯಕರ್ತರು ಮತ್ತು ಮಲೇರಿಯ ನಿಯಂತ್ರಣ ಕಾರ್ಯಕರ್ತರು, ಜ್ವರಸಂಬಂಧಿ ರೋಗಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT