ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಫ್‌ಡೌನ್ ಕಥೆಗಳು | ಕೇಳುತ್ತಿಲ್ಲ ಮಲೆ ಮಕ್ಕಳ ಅಳಲು

ಹುಟ್ಟಿನಿಂದಲೇ ಲಾಕ್‌ಡೌನ್‌ನಲ್ಲೇ ಜೀವನ– ಮೂಲಸೌಕರ್ಯವಿಲ್ಲದೆ ನರಕಯಾತನೆ
Last Updated 25 ಜೂನ್ 2020, 2:24 IST
ಅಕ್ಷರ ಗಾತ್ರ

ಕುತ್ಲೂರು (ಮಂಗಳೂರು): ‘ಹುಟ್ಟಿನಿಂದ ಈತನಕ ದಟ್ಟ ಕಾಡಿನ ಮಧ್ಯೆ ಯಾವುದೇ ಮೂಲಸೌಕರ್ಯವಿಲ್ಲದೆ ಹೇಗೋ ಬದುಕು ಸವೆಸಿದ್ದೇವೆ. ಈ ನರಕಯಾತನೆ ನಮ್ಮ ಜೀವನಕ್ಕೆ ಕೊನೆಯಾಗಬೇಕು. ಮಕ್ಕಳ ಕಾಲಕ್ಕೆ ಆಧುನಿಕ ಪ್ರಪಂಚದ ಕೆಲವು ಸೌಲಭ್ಯವಾದರೂ ದೊರೆತರೆ ಅಷ್ಟೇ ಸಾಕು’ ಎನ್ನುವ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ಪೂವಪ್ಪ ಮಲೆಕುಡಿಯ ಅವರ ಮಾತಿನಲ್ಲಿ ಹತಾಶೆ, ಅಸಹಾಯಕತೆ ಮತ್ತು ವ್ಯವಸ್ಥೆಯ ವಿರುದ್ಧ ಆಕ್ರೋಶವೂ ಅಡಗಿತ್ತು.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಅಲಂಬ, ಕುರಿಯಾಡಿ, ಮಡಿಕೆ ಮತ್ತು ಪಂಜಾಲ್‌ ಪ್ರದೇಶದಲ್ಲಿ 30 ಕುಟುಂಬಗಳು (170 ಜನ) ಹಲವು ದಶಕಗಳಿಂದ ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡಿವೆ. ಕೃಷಿ, ಕೂಲಿ, ಕಾಡುತ್ಪತ್ತಿ (ದಾಲ್ಚಿನ್ನಿ, ಜೇನು, ಮಂತ್‌ ಹುಳಿ, ಕಾನಟೆ) ಇವರ ಜೀವನಕ್ಕೆ ಆಧಾರ. ಇಲ್ಲಿ ವಿದ್ಯುತ್‌, ರಸ್ತೆ, ಸಾರಿಗೆ ವ್ಯವಸ್ಥೆ, ಮೊಬೈಲ್‌ ಸಂಪರ್ಕ, ಅಂಗಡಿ ಇವು ಯಾವುದೂ ಇಲ್ಲ. ಅಲ್ಲೊಂದು ಇಲ್ಲೊಂದು ಬಿಡಿಬಿಡಿಯಾಗಿ ಮನೆಗಳಿವೆ. ಸುತ್ತಮುತ್ತ ಹಳ್ಳಗಳು ಹರಿಯುವುದರಿಂದ ನೀರಿಗೆ ಮಾತ್ರ ಬರವಿಲ್ಲ. ಶೇ 90ರಷ್ಟು ಮಲೆಕುಡಿಯ ಜನಾಂಗದವರೇ ಇರುವ ಈ ಪ್ರದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದ ಲಾಕ್‌ಡೌನ್‌ನ ಯಾವುದೇ ಬಿಸಿ ತಟ್ಟಿಲ್ಲ. ಯಾಕೆಂದರೆ ಇವರ ಜೀವನವೇ ಲಾಕ್‌ಡೌನ್‌ನ ಸ್ಥಿತಿಯಲ್ಲಿದೆ.

‘ಈ ಪ್ರದೇಶದಲ್ಲಿ ದಶಕಗಳ ಹಿಂದೆ ನಕ್ಸಲರ ಚಟುವಟಿಕೆ ಇದ್ದುದರಿಂದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಸರ್ಕಾರದಿಂದ ಬಂದಿತ್ತು. ಅದನ್ನು ನಮ್ಮ ಭಾಗಕ್ಕೆ ಬಳಸಿದ್ದರೆ ‘ಲಾಕ್‌ಡೌನ್‌’ನಿಂದ ಯಾವತ್ತೋ ಮುಕ್ತಿ ದೊರೆಯುತ್ತಿತ್ತು. ‘ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬಂತೆ ಬಂದ ಅನುದಾನದಲ್ಲಿ ಸ್ವಲ್ಪ ಭಾಗ ಮಾತ್ರ ಈ ಭಾಗಕ್ಕೆ ಬಳಸಲಾಗಿದೆ. ಇನ್ನೂ ಅದಕ್ಕೆ ಯಾರನ್ನೂ ದೂಷಿಸಿ ಪ್ರಯೋಜನ ಇಲ್ಲ. ನನಗೆ ಮೂವರು ಮಕ್ಕಳಿದ್ದು, ಅವರು ಬೆಳೆಯುವಷ್ಟರಲ್ಲಿ ಕನಿಷ್ಠ ರಸ್ತೆ, ವಿದ್ಯುತ್‌ ಸಂಪರ್ಕ ಸಿಕ್ಕರೆ ಅದೇ ಸಮಾಧಾನ’ ಎನ್ನುತ್ತಾರೆ 45 ವರ್ಷದ ಪೂವಪ್ಪ.

ಕುಕ್ಕುಜೆ ಕ್ರಾಸ್‌ನಿಂದ ಅಲಂಬವರೆಗೆ 7 ಕಿ.ಮೀ. ದೂರವಿದ್ದು, ಈ ರಸ್ತೆಗೆ 45 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿದೆ. ನಂತರದ ದಿನಗಳಲ್ಲಿ ಕಾಡಬಾಗಿಲು ಗೇಟ್‌ (4 ಕಿ.ಮೀ) ತನಕ ಮಾತ್ರ ದುರಸ್ತಿ ಕಾಮಗಾರಿ ಮಾಡಲಾಗುತ್ತಿದೆ. ಉಳಿದ ರಸ್ತೆಯ ಕೆಲಸಕ್ಕೆ ಅರಣ್ಯ ಇಲಾಖೆಯ ಆಕ್ಷೇಪ ಇದೆ. ಹೀಗಾಗಿ, 3 ಕಿ.ಮೀ. ರಸ್ತೆಯಲ್ಲಿ ಜಲ್ಲಿಕಲ್ಲುಗಳು ಮಾತ್ರ ಕಾಣಸಿಗುತ್ತದೆ. ಮಳೆಗಾಲದಲ್ಲಿ ರಸ್ತೆ ಮಧ್ಯೆಯೇ ನೀರಿನ ಬುಗ್ಗೆ ಏಳುವುದರಿಂದ ವಾಹನಗಳ ಚಕ್ರ ಹೂತು ಹೋಗುವುದು ಮಾಮೂಲಿ. ಇದೇ ರಸ್ತೆಯಲ್ಲಿ ಕುಕ್ಕುಜೆ ಬಳಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡು ಕೆಲ ದಿನಗಳ ಹಿಂದೆ ಕುಸಿದಿದ್ದು, ಇಲ್ಲಿನ ನಿವಾಸಿಗಳ ಸಂಕರ್ಪ ಕಡಿತವಾಗಿತ್ತು. ಇದೀಗ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಡಬಾಗಿಲು ಬಳಿಯ ಸೇತುವೆಯಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು, ಅದು ಕುಸಿದರೆ ಈ ಭಾಗದ ಸಂಪರ್ಕಕ್ಕೆ ದೊಡ್ಡ ಹೊಡೆತ ಬೀಳಲಿದೆ.

ದುರ್ಗಮ ರಸ್ತೆ: ಅಲಂಬದಿಂದ ಕುರಿಯಾಡಿ, ಮಡಿಕೆ, ಪಂಜಾಲ್‌ ಹೋಗುವ ಹಾದಿ ದುರ್ಗಮವಾಗಿದೆ. ಹೀಗಾಗಿ, ವಾಹನಗಳು ಬಾಡಿಗೆಗೆ ಬಂದರು ದುಪ್ಪಟ್ಟು ಹಣ ನೀಡಬೇಕು. ಕಲ್ಲು–ಗುಂಡಿ ಹಾಗೂ ಏರು– ಇಳಿಜಾರಿನಿಂದ ಕೂಡಿರುವ ಈ ಹಾದಿಯನ್ನು ಇಲ್ಲಿನ ನಿವಾಸಿಗಳೇ ಶ್ರಮದಾನದಲ್ಲಿ ದುರಸ್ತಿ ಮಾಡುತ್ತಾರೆ. ಆದರೆ, ಒಂದಿಂಚು ಅಗಲ ಮಾಡುವಂತಿಲ್ಲ. ಮಳೆಗಾಲ ಮುಗಿಯುವಷ್ಟರಲ್ಲಿ ಪೊದೆಗಳು ಹಾದಿಯನ್ನು ಆವರಿಸಿರುತ್ತದೆ. ಅದೇ ಕಚ್ಚಾರಸ್ತೆಯಲ್ಲಿ ಜನರು ಪಡಿತರ ಹಾಗೂ ಇನ್ನಿತರ ಸಾಮಗ್ರಿಗಳನ್ನು ಹೊತ್ತುಕೊಂಡೇ ಸಾಗಬೇಕಿದೆ. ತುರ್ತು ಸಂದರ್ಭದಲ್ಲಿ (ಗರ್ಭಿಣಿಯರು, ಅನಾರೋಗ್ಯ, ವೃದ್ಧರು) ದೇವರೇ ಗತಿ. ದಶಕಗಳ ಹಿಂದೆ ಮೃತದೇಹವನ್ನು ಬಡಿಗೆಯಲ್ಲಿ ಕಟ್ಟಿ ಐದಾರು ಕಿ.ಮೀ. ದೂರ ಹೆಗಲುಕೊಟ್ಟು ಕೊಂಡೊಯ್ದ ಉದಾಹರಣೆಗಳಿವೆ.

ಇಲ್ಲಿನ ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ. ಮೆಸ್ಕಾಂನಿಂದ ಪ್ರತಿ ಮನೆಗೆ ಸೋಲಾರ್‌ ಘಟಕ ನೀಡಿದ್ದರೂ, ಎರಡೇ ತಿಂಗಳಿಗೆ ದೀಪಗಳು ಉರಿಯುತ್ತಿಲ್ಲ ಎಂಬ ದೂರು ಇದೆ. ಮಳೆಗಾಲದಲ್ಲಂತೂ ಒಂದೇ ದೀಪದಲ್ಲಿ ರಾತ್ರಿ ಕಳೆಯಬೇಕಿದೆ. ಹರಳೆಣ್ಣೆ ದೀಪ, ಕ್ಯಾಂಡಲ್‌ ಇವರಿಗೆ ಆಪತ್‌ಕಾಲದ ಬಂಧು. ಸೋಲಾರ್‌ನಲ್ಲಿ ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದ್ದರೂ ನೆಟ್‌ವರ್ಕ್‌ಗಾಗಿ ಬೆಟ್ಟ ಏರುವುದು, ಮರ ಹತ್ತುವ ದೃಶ್ಯ ಸಾಮಾನ್ಯವಾಗಿದೆ. ಬಿಎಸ್‌ಎನ್‌ಎಲ್‌ ಸಿಮ್‌ ಇದ್ದರೂ ವಿದ್ಯುತ್‌ ಸ್ಥಗಿತಗೊಂಡಾಗ ನೆಟ್‌ವರ್ಕ್‌ ನಾಪತ್ತೆಯಾಗುತ್ತದೆ.

ಇಲ್ಲಿನ ಮಕ್ಕಳು ಶಿಕ್ಷಣ ಪಡೆಯುವುದೆಂದರೆ ದೊಡ್ಡ ತಪಸ್ಸು ಮಾಡಿದಂತೆ. ಕುತ್ಲೂರು ಸರ್ಕಾರಿ ಶಾಲೆ 8 ಕಿ.ಮೀ. ದೂರದಲ್ಲಿದೆ. ಮನೆಯಿಂದಲೇ ಶಾಲಾ– ಕಾಲೇಜಿಗೆ ಹೋಗುವುದು ಕನಸಿನ ಮಾತು. ಹೀಗಾಗಿ, 1ನೇ ತರಗತಿಗೆ ಹಾಸ್ಟೆಲ್‌ ಅಥವಾ ಸಂಬಂಧಿಕರ ಮನೆಯನ್ನು ಆಶ್ರಯಿಸಬೇಕು. ಇದೇ ಕಾರಣಕ್ಕಾಗಿ ಇಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆಯಿದೆ. ಬಹುತೇಕ ಮಂದಿ ಪ್ರಾಥಮಿಕ ಹಂತದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ ದೂರದ ಬೆಳ್ತಂಗಡಿ, ಕಾರ್ಕಳ, ಮಂಗಳೂರು, ಮೂಡುಬಿದಿರೆಗೆ ಹೋಗಬೇಕಿರುವುದರಿಂದ ಇಲ್ಲಿ ಪದವಿ ಪಡೆದವರು ಐದಾರು ಮಂದಿ ಮಾತ್ರ ಸಿಗುತ್ತಾರೆ.

ಇಲ್ಲಿನ ನಾಲ್ಕೈದು ಕುಟುಂಬದವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಿರು ಜಲವಿದ್ಯುತ್‌ ಘಟಕ ಹಾಕಿಕೊಂಡಿದ್ದಾರೆ. ಆ ಮನೆಗಳಲ್ಲಿ ಟಿ.ವಿ. ಕಾಣಸಿಗುತ್ತದೆ. ಯಾವುದೇ ಮನೆಗಳಲ್ಲಿ ದಿನಪತ್ರಿಕೆ, ದೂರವಾಣಿ ಇಲ್ಲ. ನ್ಯೂಸ್‌ಗಾಗಿ ಬಹುತೇಕ ಕುಟುಂಬಗಳು ಆಕಾಶವಾಣಿಯನ್ನು ಅವಲಂಬಿಸಿವೆ. ಶೇ 95ರಷ್ಟು ಮನೆಗಳಲ್ಲಿ ಗ್ಯಾಸ್‌ ಸಂಪರ್ಕವಿಲ್ಲ. ಸೌದೆಯನ್ನೇ ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಉಂಬಳ ಕಾಟ ಜಾಸ್ತಿಯೇ ಇದೆ. ಕಾಡುಪ್ರಾಣಿಗಳು ಇಲ್ಲಿದ್ದರೂ ಬೆಳೆಹಾನಿ, ಜೀವ ಹಾನಿ ಮಾಡಿದ್ದು ಕಡಿಮೆ. ಆದರೆ, ಸಾಕುಪ್ರಾಣಿಗಳು ನಾಪತ್ತೆಯಾದ ದೂರುಗಳಿವೆ.

ಕುರಿಯಾಡಿ ಅಂಗನವಾಡಿ ಕೇಂದ್ರದಲ್ಲಿ 10ಕ್ಕೂ ಅಧಿಕ ಪುಟಾಣಿಗಳು ಇದ್ದಾರೆ. ಆದರೆ, ಮಳೆ ಬಂದಾಗ ಹಳ್ಳಗಳು ಮೈತುಂಬುವುದರಿಂದ ಏಳೆಂಟು ಪುಟಾಣಿಗಳಿಗೆ ಬರಲು ಕಷ್ಟವಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಗೆ ತಾಲ್ಲೂಕು ಕೇಂದ್ರದಲ್ಲಿ ಮೀಟಿಂಗ್‌ ಇದ್ದರೆ ಅರ್ಧ ದಿನ ನಡೆಯುವುದರಲ್ಲೇ ಕಳೆಯಬೇಕಿದೆ. ಅಂಗನವಾಡಿಗೆ ಬೇಕಿರುವ ಪೌಷ್ಟಿಕ ಆಹಾರವನ್ನು ಇಲ್ಲಿನ ನಿವಾಸಿಗಳು ರೊಟೇಷನ್‌ ಮಾದರಿಯಲ್ಲಿ 5 ಕಿ.ಮೀ. ದೂರದಲ್ಲಿರುವ ನೇಲ್ಯಪಲ್ಕೆಯಿಂದ ಹೊತ್ತು ತರುತ್ತಾರೆ. ಗರ್ಭಿಣಿಯರ ಹೆರಿಗೆಯ ದಿನಾಂಕ ಮಳೆಗಾಲದ ಮಧ್ಯೆ ಇದ್ದರೆ ಅವರು ಐದಾರು ತಿಂಗಳಿಗೆ ಸಂಬಂಧಿಕರ ಮನೆಗೆ ಹೋಗುವುದು ಅನಿವಾರ್ಯವಾಗಿದೆ.

‘ಪಕ್ಕದ ಅಳದಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯಾನದ ಒಳಗೆ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಭೂಮಿಯ ಅಡಿ ತಂತಿಹಾಕಿ ಎಳೆದು, ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಿದ ಉದಾಹರಣೆಗಳಿವೆ. ಅದೇ ರೀತಿ ನಮ್ಮೂರಿಗೂ ಅವಕಾಶ ಕೊಡಿ ಎಂದು ಅರಣ್ಯ ಇಲಾಖೆಗೆ ಲೆಕ್ಕವಿಲ್ಲದಷ್ಟು ಮನವಿ ಕೊಟ್ಟಿದ್ದೇವೆ. ಪ್ರತಿ ಬಾರಿಯೂ ತಿರಸ್ಕಾರವಾಗುತ್ತಲೇ ಇದೆ. ಹಾಗಾದರೆ ನಮಗೆ ನ್ಯಾಯಯುತವಾಗಿ ಬದುಕುವ ಹಕ್ಕು ಇಲ್ಲವೇ?’ ಎಂಬುದು ಇಲ್ಲಿನ ನಾಗರಿಕರ ಪ್ರಶ್ನೆ.

ವಧು–ವರ ಹುಡುಕುವುದು ಸವಾಲು

ಇಲ್ಲಿನ ನಿವಾಸಿಗಳಿಗೆ ವಧು–ವರನನ್ನು ಹುಡುಕುವುದು ದೊಡ್ಡ ಸವಾಲು. ಇಲ್ಲಿನ ಮೂಲಸೌಕರ್ಯದ ಕೊರತೆಯ ಕಾರಣಕ್ಕಾಗಿ ಹಲವು ಸಂಬಂಧಗಳು ಕೊನೆಯ ಕ್ಷಣದಲ್ಲಿ ತಪ್ಪಿದ ಉದಾಹರಣೆಗಳಿವೆ. ಹುಡುಗರಿಗಿಂತಲೂ ಹುಡುಗಿಯರಿಗೆ ವರ ಹುಡುಕುವುದು ಕಷ್ಟದ ಕೆಲಸ. ಕೆಲವರಿಗೆ ಯೌವನದಲ್ಲಿ ಕಂಕಣ ಕೂಡಿ ಬರದೆ, ಹುಟ್ಟಿದ ಮನೆಯಲ್ಲಿಯೇ ವೃದ್ಧರಾಗಿರುವವರು ಇದ್ದಾರೆ. ಹುಡುಗರು ಊರೂರು ಸುತ್ತಿ 50ಕ್ಕೂ ಹೆಚ್ಚು ವಧುಗಳನ್ನು ನೋಡಿದ ದಾಖಲೆಯೂ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

***

ಕುಕ್ಕುಜೆ ಸೇತುವೆಯಲ್ಲಿ ಈಗ ಘನ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಹೀಗಾಗಿ, 10 ಕಿ.ಮೀ. ದೂರದಿಂದ ಪಡಿತರ ಸಾಮಗ್ರಿ ತರಲು ಒಂದು ದಿನ ವ್ಯಯಿಸಬೇಕಿದೆ.

-ಪೂವಪ್ಪ ಮಲೆಕುಡಿಯ, ಸ್ಥಳೀಯ ಕೃಷಿಕ

***

ಶ್ರಮಪಟ್ಟು ಪದವಿ ಪಡೆದೆ. ಪ್ರತಿದಿನ ಮಂಗಳೂರಿಗೆ ಹೋಗಿ– ಬಂದು 2 ವರ್ಷ ಉದ್ಯೋಗ ಮಾಡಿದೆ. ತುಂಬಾ ಕಷ್ಟವಾದ ಕಾರಣ ಅದನ್ನು ಬಿಟ್ಟು ಕೃಷಿ ಮಾಡುತ್ತಿದ್ದೇನೆ.

-ಪ್ರವೀಣ್‌ ಮಲೆಕುಡಿಯ, ಸ್ಥಳೀಯ ಕೃಷಿಕ

***

ಹೈನುಗಾರಿಕೆ ಮಾಡಿ ಡೈರಿಗೆ ಹಾಲು ಹಾಕುತ್ತಿದ್ದೆ. ಅದರ ಆದಾಯಕ್ಕಿಂತ ಬೈಕ್‌ನ ಪೆಟ್ರೋಲ್‌ಗೆ ಹೆಚ್ಚು ಖರ್ಚಾಗುತ್ತಿತ್ತು. ಹೀಗಾಗಿ, ಕೃಷಿಯತ್ತ ಗಮನ ಹರಿಸಿದ್ದೇನೆ.

-ರಂಜಿತ್‌, ಸ್ಥಳೀಯ ಯುವಕ

***

ನಾನು ಬಿಎ ಪದವೀಧರೆ. ನಮ್ಮೂರಿನಲ್ಲಿ ಯಾವುದೇ ನೆಟ್‌ವರ್ಕ್‌ ಸಿಗುವುದಿಲ್ಲ. ಹೀಗಾಗಿ, ಉದ್ಯೋಗ ಮಾಹಿತಿ ಲಭಿಸುವುದಿಲ್ಲ. ಆನ್‌ಲೈನ್‌ ಅರ್ಜಿ ಹಾಕಲು ನಾರಾವಿ ಪೇಟೆಗೆ ಹೋಗಬೇಕು.

-ವಿಜಯಾ, ಸ್ಥಳೀಯ ನಿರುದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT