ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲೆಯಿಂದ 7 ಮಂದಿ ಗಡಿಪಾರು

Published 18 ಮಾರ್ಚ್ 2024, 2:23 IST
Last Updated 18 ಮಾರ್ಚ್ 2024, 2:23 IST
ಅಕ್ಷರ ಗಾತ್ರ

ಮಂಗಳೂರು: ಲೋಕಸಭಾ ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಾರ್ವಜನಿಕ ಶಾಂತಿ ಕಾಪಾಡುವ ಸಲುವಾಗಿ, ಪದೇ ಪದೇ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಏಳು ಮಂದಿಯನ್ನು ಗಡಿಪಾರು ಮಾಡಿ ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಆದೇಶ ಮಾಡಿದ್ದಾರೆ.‌

‘ಅಶೋಕನಗರದ ಕೋಡಿಕಲ್‌ ಅಂಗಡಿಗುಡ್ಡೆಯ ಪ್ರೀತಂ ಅಲಿಯಾಸ್‌ ಅಭಿಲಾಷ್‌, ಉರ್ವದ ಸಿಪಿಸಿ ಕಂಪೌಂಡ್‌ ಬಳಿಯ ನಿವಾಸಿ ಹೇಮಂತ್‌ ಅಲಿಯಾಸ್‌ ಸೋನು, ಕೋಟೆಕಾರ್‌ ಕುಂಪಲದ ಶಿವರಾಜ್‌ ಅಲಿಯಾಸ್‌ ಶಿವು, ಸೋಮೇಶ್ವರ ಪಿಲಾರ್‌ನ ಎಡ್ವಿನ್‌ ರಾಹುಲ್‌ ಡಿಸೋಜ ಅಲಿಯಾಸ್‌ ರಾಹುಲ್‌, ಉಳ್ಳಾಲ ಮೇಲಂಗಡಿಯ ಇಬ್ರಾಹಿಂ, ಕೋಡಿಕಲ್‌  ನಿವಾಸಿ ಪ್ರವೀಣ್‌ ಪೂಜಾರಿ, ದೇರಳಕಟ್ಟೆಯ ಮೊಹಮ್ಮದ್‌ ಮುಸ್ತಾಫ ಅಲಿಯಾಸ್‌ ಮುಸ್ತಾಫ ಗಡಿಪಾರಿಗೆ ಒಳಗಾದವರು. ಈ ಏಳು ಮಂದಿ ಮೂರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಉರ್ವ, ಕಾವೂರು, ಕದ್ರಿ ಠಾಣೆಗಳಲ್ಲಿ ದಾಖಲಾಗಿರುವ ಮಾರಕಾಸ್ತ್ರ ಬಳಸಿ ಹಲ್ಲೆ, ಸಾರ್ವಜನಿಕ ಶಾಂತಿ ಭಂಗ, ಬೆದರಿಕೆ, ಸ್ವತ್ತು ಹಾನಿಯೂ ಸೇರಿದಂತೆ ಒಟ್ಟು ಆರು ಪ್ರಕರಣಗಳಲ್ಲಿ ಪ್ರೀತಂ ಆರೋಪಿ. ಉರ್ವ ಠಾಣೆಯಲ್ಲಿ ದಾಖಲಾಗಿರುವ ಸ್ವತ್ತು ಹಾನಿ, ಬೆದರಿಕೆ, ವಂಚನೆ, ಹಲ್ಲೆ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಹೇಮಂತ್‌ ಆರೋಪಿ. ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ ಅಕ್ರಮ ಕೂಟ ರಚನೆ, ಮಾರಕಾಸ್ತ್ರದಿಂದ ಹಲ್ಲೆ, ಕೊಲೆ ಯತ್ನ, ಅಕ್ರಮ ಬಂಧನ, ಮಹಿಳೆಯ ಮಾನಭಂಗ ಯತ್ನ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಶಿವರಾಜ್‌ ಆರೋಪಿ., ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ ಅಕ್ರಮ ಕೂಟ ರಚನೆ, ಹಲ್ಲೆ, ಕೊಲೆ ಯತ್ನ, ಸಾರ್ವಜನಿಕ ಶಾಂತಿಭಂಗಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಎಡ್ವಿನ್‌ ರಾಹುಲ್‌ ಡಿಸೋಜ ಆರೋಪಿ. ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ ಅಕ್ರಮ ಕೂಟ ರಚನೆ, ಹಲ್ಲೆ, ಬೆದರಿಕೆ, ಮಾದಕ ದ್ರವ್ಯ ಕಳ್ಳಸಾಘನೆ, ಕೊಲೆ ಯತ್ನ, ಮಹಿಳೆಯ ಮಾನಭಂಗ ಯತ್ನ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಇಬ್ರಾಹಿಂ ಆರೋಪಿ. ಮಂಗಳೂರು ಪೂರ್ವ, ಕಾವೂರು, ಮಂಗಳೂರು ದಕ್ಷಿಣ, ಮೈಸೂರು ಆಲನಹಳ್ಳಿ ಠಾಣೆಗಳಲ್ಲಿ ದಾಖಲಾಗಿರುವ ಅಕ್ರಮ ಕೂಟ ರಚನೆ, ಸಾರ್ವಜನಿಕ ಶಾಂತಿಭಂಗ, ಕೊಲೆಯತ್ನ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಪ್ರವೀಣ್‌ ಪೂಜಾರಿ ಆರೋಪಿ. ಉಪ್ಪಿನಂಗಡಿ, ಬಜ್ಪೆ, ಮೂಡುಬಿದಿರೆ, ಕೊಣಾಜೆ, ಠಾಣೆಗಳಲ್ಲಿ ದಾಖಲಾಗಿರುವ ಜಾನುವಾರು ಕಳ್ಳಸಾಗಣೆ, ಕಳವು, ಗುಂಪುಕಟ್ಟಿಕೊಂಡು ಡಕಾಯಿತಿ ನಡೆಸಿರುವುದು, ಕೊಲೆಯತ್ನ ಸಹಿತ ಆರು ಪ್ರಕರಣಗಳಲ್ಲಿ ಮಹಮ್ಮದ್ ಮುಸ್ತಾಫ ಆರೋಪಿ’ ಎಂದು ಪೊಲೀಸ್‌ ಕಮಿಷನರ್‌ ಮಾಹಿತಿ ನೀಡಿದ್ದಾರೆ.

‘ಪದೇ ಪದೇ ಅಪರಾಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಒಟ್ಟು 286 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಂಡು ಭದ್ರತಾ ಠೇವಣಿ ಪಡೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT