ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಪಕ್ಷೇತರರಾಗಿ ಪುತ್ತಿಲ ಸ್ಪರ್ಧೆ ಘೋಷಣೆ

ಬಿಜೆಪಿ ಸೇರ್ಪಡೆ: ಮುರಿದುಬಿದ್ದ ಮಾತುಕತೆ
Published 29 ಫೆಬ್ರುವರಿ 2024, 14:40 IST
Last Updated 29 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ಸೋಲಿಗೆ ಕಾರಣರಾಗಿದ್ದ ಹಿಂದುತ್ವವಾದಿ ಕಾರ್ಯಕರ್ತ ಅರುಣ್‌ಕುಮಾರ್ ಪುತ್ತಿಲ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರರರಾಗಿ ಸ್ಪರ್ಧಿಸುವ ಘೋಷಣೆ ಹೊರಬಿದ್ದಿದೆ.

ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಅರುಣ್ ಕುಮಾರ್ ಪುತ್ತಿಲ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

‘ಪುತ್ತಿಲ ಅವರು ಬಿಜೆಪಿ ಸೇರುವ ಕುರಿತು ಪಕ್ಷದ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿದ್ದವು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಇತ್ತೀಚೆಗೆ ಪುತ್ತಿಲ ಭೇಟಿ ಮಾಡಿದ ಮೇಲೆ, ಪುತ್ತಿಲ ಪರಿವಾರವು ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂದು ಪುತ್ತಿಲ ಆಪ್ತರು ಬಹಿರಂಗವಾಗಿ ಹೇಳಿಕೊಂಡಿದ್ದರು. ಬಿಜೆಪಿಯಲ್ಲಿ ಪುತ್ತಿಲ ಅವರಿಗೆ ನಿರ್ದಿಷ್ಟ ಸ್ಥಾನ ನೀಡಬೇಕು ಎಂಬುದು ಅವರ ಬೆಂಬಲಿಗರ ಬೇಡಿಕೆಯಾಗಿತ್ತು. ಆದರೆ, ಸಾಮಾನ್ಯ ಕಾರ್ಯಕರ್ತರಾಗಿ ಸೇರ್ಪಡೆಯಾಗಬೇಕು ಎಂದು ಬಿಜೆಪಿ ಮುಖಂಡರು ಹೇಳಿದ್ದರಿಂದ ಮಾತುಕತೆ ವಿಫಲವಾಗಿದೆ’ ಎಂದು ಪುತ್ತಿಲ ಬೆಂಬಲಿಗರೊಬ್ಬರು ತಿಳಿಸಿದರು.

ಎಲ್ಲರಿಗೂ ಹಕ್ಕು:

‘ಪುತ್ತಿಲ ಪರಿವಾರ ಸ್ವತಂತ್ರ ಸಂಘಟನೆ. ಅವರ ಮನವೊಲಿಸಲು ಪಕ್ಷ ಪ್ರಯತ್ನ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಹತ್ತಾರು ಸಂದರ್ಭಗಳಲ್ಲಿ ಈ ರೀತಿಯ ಸಮಸ್ಯೆ ಉದ್ಭವಿಸಿದ್ದವು. ಎಲ್ಲ ಸವಾಲುಗಳ ಮಧ್ಯೆಯೂ ಬಿಜೆಪಿ ಗೆಲುವು ಸಾಧಿಸುತ್ತಲೇ ಬಂದಿದೆ. ಈ ಬಾರಿಯೂ ಮತದಾರರು ಬಿಜೆಪಿ ಗೆಲ್ಲಿಸುತ್ತಾರೆ’ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು.

‘ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಅಜಗಜಾಂತರ ವ್ಯತ್ಯಾಸ ಇದೆ. ಆಗ ಇರುವ ಸಮಸ್ಯೆಗಳೇ ಬೇರೆ ಈಗ ಇರುವ ವಿಚಾರಗಳೇ ಬೇರೆ. ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತದೆ. ಅಭ್ಯರ್ಥಿ ಯಾರೆಂಬುದನ್ನು ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ಬದ್ಧರಾಗಿರುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT