ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಇಲಾಖೆ ಅಧಿಕಾರಿ ಸುರೇಶ್‌ಗೆ 4 ವರ್ಷ ಜೈಲು, ₹ 4 ಲಕ್ಷ ದಂಡ

ಕಾರ್ಖಾನೆ ಮಾಲೀಕರಿಂದ ಲಂಚ ಪಡೆದ ಆರೋಪ ಸಾಬೀತು
Last Updated 3 ಡಿಸೆಂಬರ್ 2022, 11:47 IST
ಅಕ್ಷರ ಗಾತ್ರ

ಮಂಗಳೂರು: ಅಧಿಕಾರ ದುರುಪಯೋಗ ಪಡಿಸಿಕೊಂಡು, ಕಾರ್ಖಾನೆಗಳ ಮಾಲೀಕರಿಂದ ಪಡೆದ ಲಂಚದ ಹಣದ ಸಮೇತ 2016ರಲ್ಲಿ ಸಿಕ್ಕಿಬಿದ್ದಿದ್ದ ಕಾರ್ಖಾನೆಗಳ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಸುರೇಶ್‌ಗೆ ನಾಲ್ಕು ವರ್ಷ ಸಜೆ ಹಾಗೂ ₹ 4 ಲಕ್ಷ ದಂಡ ವಿಧಿಸಿ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಮತ್ತು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ದಂಡ ಕಟ್ಟಲು ವಿಫಲನಾದರೆ ಮತ್ತೆ ಆರು ತಿಂಗಳು ಸಾದಾ ಸಜೆ ಅನುಭವಿಸಬೇಕು ಎಂದೂ ನ್ಯಾಯಾಧೀಶರರಾದ ಬಿ.ಬಿ.ಜಕಾತಿ ಅವರು ಆದೇಶ ಮಾಡಿದ್ದಾರೆ.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪವಿಭಾಗ–2ರಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಎಚ್‌.ಸುರೇಶ್‌ ನಗರದ ಕೊಟ್ಟಾರದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕಾರ್ಖಾನೆಗಳಿಗೆ ಪರವಾನಗಿ ನೀಡಲು, ಪರವಾನಗಿ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡಲು ಕಾರ್ಖಾನೆ ಮಾಲೀಕರನ್ನು ಲಂಚಕ್ಕಾಗಿ ಪೀಡಿಸುತ್ತಿದ್ದ ಬಗ್ಗೆ ಭ್ರಷ್ಟಾಚಾರ ನಿಗ್ರಹದಳದಲ್ಲಿ(ಎಸಿಬಿ) ದೂರು ದಾಖಲಾಗಿತ್ತು. ಎಸಿಬಿ ಅಧಿಕಾರಿಗಳು 2016ರ ನ. 30ರಂದು ಅವರ ಕಚೇರಿಗೆ ದಾಳಿ ನಡೆಸಿದಾಗ ₹ 3,49,515 ನಗದು ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಸಂಸ್ಥೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಲಕ್ಷ್ಮೀ ಗಣೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದ ಎಸಿಬಿ ಠಾಣೆಯ ಇನ್‌ಸ್ಪೆಕ್ಟರ್‌ ಯೋಗೀಶ್‌ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ರವೀಂದ್ರ ಮುನ್ನಿಪಾಡಿ ಅವರು ಎಸಿಬಿ ಹಾಗೂ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಾದ ಮಂಡಿಸಿದ್ದರು.

ಎಚ್‌.ಸುರೇಶ್‌ ಪ್ರಸ್ತುತ ಕಾರ್ಖಾನೆ ಇಲಾಖೆಯ ಮೈಸೂರಿನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT