ಮಂಗಳೂರು: ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಜುಲೈ 22 ಮತ್ತು 23ರಂದು ವೈದ್ಯಕೀಯ ವೃತ್ತಿಪರರಿಗಾಗಿ ಏರ್ಪಡಿಸಿದ್ದ ‘ಮ್ಯಾರಥಾನ್ ಯೋಗ ತರಬೇತಿ’ಯು ಎರಡು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ಗಳನ್ನು ನಿರ್ಮಿಸಿದೆ ಎಂದು ಕಾಲೇಜಿನ ಉಪಪ್ರಾಂಶುಪಾಲ ಡಾ.ಪ್ರಕಾಶ್ ಸಲ್ಡಾನ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಈ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಯೋಗ ಶಿಕ್ಷಕ ಕುಶಾಲಪ್ಪ ಗೌಡ ಅವರು ಸುದೀರ್ಘ 25 ಗಂಟೆ ಸತತವಾಗಿ ಯೋಗ ತರಬೇತಿ ನೀಡಿರುವುದು ಹಾಗೂ ವೈದ್ಯಕೀಯ ವೃತ್ತಿಪರರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿರುವುದು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ದಾಖಲಾಗಿದೆ. ಸಂಸ್ಥೆಯವರು ಸೆ.3ರಂದು ಈ ಕುರಿತ ಪ್ರಮಾಣಪತ್ರವನ್ನು ನಮ್ಮ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ’ ಎಂದು ತಿಳಿಸಿದರು.
ಯೋಗ ಶಿಕ್ಷಕ ಕುಶಾಲಪ್ಪ ಗೌಡ, ‘ಈ ಮ್ಯಾರಥಾನ್ ಯೋಗ ತರಬೇತಿಯಲ್ಲಿ ಏಳು ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ವಿದ್ಯಾರ್ಥಿಗಳು ಸೇರಿ 2,693 ಮಂದಿ ಭಾಗವಹಿಸಿದ್ದರು. ಒಟ್ಟು 17 ತಂಡಗಳಿಗೆ ನಿರಂತರ ತರಬೇತಿ ನೀಡಿದ್ದೇನೆ. ಯೋಗವನ್ನು ಜನಪ್ರಿಯಗೊಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮೂಸಬ್ಬ, ಹಿರಿಯ ಮಾರುಕಟ್ಟೆ ಅಧಿಕಾರಿ ವಿಜಯಾನಂದ ಭಾಗವಹಿಸಿದ್ದರು.