ಬುಧವಾರ, ಫೆಬ್ರವರಿ 19, 2020
28 °C
ಯುವಕ– ಯುವತಿಯನ್ನು ಸುತ್ತುವರಿದಿದ್ದ ಬಜರಂಗ ದಳ ಕಾರ್ಯಕರ್ತರು

ರಾತ್ರಿ ವಿಹರಿಸುತ್ತಿದ್ದ ಯುವ ಜೋಡಿ ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸೋಮವಾರ ತಡರಾತ್ರಿ ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿ ಒಟ್ಟಾಗಿ ವಿಹರಿಸುತ್ತಿದ್ದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನನ್ನು ಬಜರಂಗ ದಳ ಕಾರ್ಯಕರ್ತರು ಸುತ್ತುವರಿದು, ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಹಾಸನದ ಯುವತಿ ಮತ್ತು ಮಂಜೇಶ್ವರದ ಯುವಕ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾಗಿದ್ದರು. ಇಬ್ಬರಿಗೂ ಗೆಳೆತನ ಬೆಳೆದಿತ್ತು. ಹಾಸನದಿಂದ ನಗರಕ್ಕೆ ಬಂದಿದ್ದ ಯುವತಿ, ಮಂಜೇಶ್ವರದಿಂದ ಬಂದ ಯುವಕನನ್ನು ಭೇಟಿ ಮಾಡಿದ್ದಳು. ರಾತ್ರಿ 11.30ರ ಸುಮಾರಿಗೆ ಬಸ್‌ ನಿಲ್ದಾಣದಲ್ಲಿ ಜೊತೆಯಾಗಿ ಓಡಾಡುತ್ತಿದ್ದರು.

ವಿಷಯ ತಿಳಿದ ಬಜರಂಗ ದಳ ಸದಸ್ಯರ ಗುಂಪೊಂದು ಸ್ಥಳಕ್ಕೆ ಬಂದು ಇಬ್ಬರನ್ನೂ ಸುತ್ತುವರಿದು ಪ್ರಶ್ನಿಸಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ಬರ್ಕೆ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನೂ ಕರೆದೊಯ್ದಿದ್ದರು. ಯುವಕನನ್ನು ಪೊಲೀಸ್‌ ಠಾಣೆಯಲ್ಲೇ ಇರಿಸಿಕೊಳ್ಳಲಾಗಿತ್ತು. ಯುವತಿಯನ್ನು ಪ್ರಜ್ಞಾ ಕೌನ್ಸೆಲಿಂಗ್‌ ಕೇಂದ್ರಕ್ಕೆ ಕಳುಹಿಸಲಾಗಿತ್ತು.

‘ಯುವಕ ಮತ್ತು ಯುವತಿ ಇಬ್ಬರೂ ವಯಸ್ಕರು. ಇಬ್ಬರೂ ಸ್ವ ಇಚ್ಛೆಯಿಂದಲೇ ಬಂದವರು. ಯಾವುದೇ ಬಲವಂತದ ವಿಚಾರ ಇರಲಿಲ್ಲ. ಯುವತಿಯನ್ನು ಆಕೆಯ ಅಣ್ಣ ಬಂದು ಕರೆದೊಯ್ದಿದ್ದಾರೆ. ಯುವಕನನ್ನು ಬಿಟ್ಟು ಕಳುಹಿಸಲಾಗಿದೆ. ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದು ಬರ್ಕೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಉಮೇಶ್‌ ಉಪ್ಪಳಿಗೆ ತಿಳಿಸಿದರು.

ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಹಾಜರಾತಿ ಕೊರತೆಯ ಕಾರಣದಿಂದ ಆಕೆಯನ್ನು ಡಿಬಾರ್‌ ಮಾಡಲಾಗಿತ್ತು ಎಂಬ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಲಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)