ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ತುದಿಯಲ್ಲಿ ನೀರು ಹುಡುಕಿದ ಅಮೈ ಮಹಾಲಿಂಗ ನಾಯ್ಕರ ಸಾಹಸಗಾಥೆ

ಸುರಂಗ ತೋಡಿ ಗೆದ್ದ ಸಾಹಸಿ ರೈತನಿಗೆ ಪ್ರಶಸ್ತಿಯ ಗೌರವ
Last Updated 23 ಡಿಸೆಂಬರ್ 2018, 10:54 IST
ಅಕ್ಷರ ಗಾತ್ರ

ಮಂಗಳೂರು ಪ್ರೆಸ್‌ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಆಯ್ಕೆಯಾಗಿದ್ದಾರೆ. ಈ ಬರಹದಲ್ಲಿ ಮಹಾಲಿಂಗ ನಾಯ್ಕ ಅವರ ಜೀವನ ಸಾಹಸವನ್ನುಪತ್ರಕರ್ತ ಶ್ರೀಪಡ್ರೆ ಕಟ್ಟಿಕೊಟ್ಟಿದ್ದಾರೆ.

–––

‘ಮಣ್ಣ್ ಗರ್ಪುನೆಲಾ ಯಾನ್, ತುಂಬುನೆಲಾ ಯಾನ್. ಮಣ್ಣ್‌ತಕಾಂಟ್ಯ ಮೊರಂಪುತ ಮಿತ್ತ್ ದೀವೊಂತು ಸಾಗ್‍ಸಾತೇ ಈ ತಟ್ಟ್‌ಕ್ಳೆನ್ಪೂರಾ ಮಲ್ತೆ ತೂಲೆ’( ಮಣ್ಣು ಅಗೆಯುವುದೂ ನಾನೇ, ಹೊರುವುದೂ ನಾನೇ. ಮಣ್ಣಿನಬುಟ್ಟಿ ಮೊಣಕಾಲ ಮೇಲಿಟ್ಟು ಸಾಗಿಸಿಯೇ ಈ ಎಲ್ಲಾ ತಟ್ಟುಗಳನ್ನೂ ಮಾಡಿದ್ದೇನೆನೋಡಿ).

ಭೂರಹಿತ ಕೃಷಿ ಕಾರ್ಮಿಕನಾಗಿದ್ದ ತಾನು ರೈತತಂಡಗಳು ನೋಡಬರುವ ಮಾದರಿ ಕೃಷಿಕನಾದುದರ ಹಿಂದಿನ ಕತೆಯನ್ನು ಐವತ್ತಾರರ ಅಮೈ ಮಹಾಲಿಂಗ ನಾಯ್ಕ ಬಣ್ಣಿಸುತ್ತಾರೆ.ಮೂರು ದಶಕಗಳ ಸಾಹಸಗಾಥೆ ಅದು. ಏಕವ್ಯಕ್ತಿ ಸೈನ್ಯದ ಸಾಧನೆ.

ಎತ್ತರದ ಗುಡ್ಡದ ಭಾರೀ ಇಳಿಜಾರಿನ ಭೂಮಿ. ನೆಲ ಸಮತಟ್ಟು (ಲೆವೆಲಿಂಗ್) ಮಾಡದೆ ಕೃಷಿ ಅಸಾಧ್ಯ. ನಾಯ್ಕರದು ಇರುವೆಯಂತೆ, ಜೇನ್ನೊಣದಂತೆ ಪುಟ್ಟಪುಟ್ಟ ಹೆಜ್ಜೆಗಳಿಂದ ಮಾಡಿದ ದೊಡ್ಡ ಸಾಧನೆ. ದಿನ, ವಾರ, ತಿಂಗಳುಗಳ ಕಾಲ ಮಣ್ಣು ಅಗೆದು, ಹರಡಿ ‘ಹತ್ತು ಅಡಿಕೆ ಗಿಡ ನಿಲ್ಲುವಷ್ಟು ಜಾಗ’ ಆದಾಗ ಗಿಡ ನಾಟಿ.

ಅಗೆದ ಮಣ್ಣನ್ನು ಹರಡುತ್ತಾ ಹೋದರೆ ಸಾಲದು. ಕೆಳ ಅಂಚಿನಲ್ಲಿ ಕಲ್ಲಿನ ಕಟ್ಟಹುಣಿ(ಕಲ್ಲಿನ ಗೋಡೆ) ಕಟ್ಟಿದರಷ್ಟೇ ಈ ಮಣ್ಣು ಮಳೆಗಾಲದಲ್ಲಿ ಉಳಿಯುತ್ತದೆ. ಇಲ್ಲವಾದರೆ ನೀರಿನೊಂದಿಗೆ ಕರಗಿ ಹೋದೀತು. 3,500 ಮಿ.ಮೀ. ಮಳೆಯ ಪ್ರದೇಶವಿದು.

ಮಹಾಲಿಂಗ ನಾಯ್ಕ ತನ್ನ ಎರಡೆಕರೆ ಜಮೀನಿನ ಭಾಗವನ್ನು ಐದು ಪುಟ್ಟಪುಟ್ಟ ತಟ್ಟುಗಳಾಗಿಸಿ ತೋಟ ಎಬ್ಬಿಸಿದ್ದಾರೆ. ಎಲ್ಲ ತಟ್ಟುಗಳ ಕೆಳ ಅಂಚಿನಲ್ಲೂ ಕಟ್ಟಹುಣಿ. ಕೆಲವೊಂದೆಡೆ ಇವು ಒಂದಾಳಿಗಿಂತಲೂ ಎತ್ತರ - ಮೂರು ಮೀಟರ್ – ಇದೆ. ಜಮೀನಿನ ತಗ್ಗಿನ ಭಾಗದಲ್ಲಿ ಒಂದು ಸಾರ್ವಜನಿಕ ದಾರಿ. ಇಲ್ಲಿ ದಾರಿಯ ಕೆಳಗೆ ಮತ್ತು ಮೇಲೆ, ಹೀಗೆ ಎರಡು ಕಟ್ಟಹುಣಿ.

ಸರಾಸರಿ ಎರಡು ಮೀಟರ್ ಎತ್ತರದ, ಕಡಿಮೆ ಎಂದರೂ 250 ಮೀಟರ್ ಉದ್ದದ ಕಟ್ಟಹುಣಿ ಕಟ್ಟಿದ್ದಾರೆ. ಇಂದಿನ ಆಳು ಮಜೂರಿಯಲ್ಲಿ ಒಂದೂವರೆ ಲಕ್ಷ ರೂ.ಗಿಂತಲೂ ಹೆಚ್ಚು ಖರ್ಚಾಗಬಹುದು.

ಈ ಜಮೀನು ಇರುವುದು ಎತ್ತರದ ಗುಡ್ಡದ ಮೇಲೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಕಾಸರಗೋಡಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕುದ್ದುಪದವಿನಿಂದ (ಇಲ್ಲಿಂದ ನೇರ ಮುಂದೆ ಸಾಗಿದರೆ ಅಡ್ಯನಡ್ಕ ಎರಡೂವರೆ ಕಿಲೋಮೀಟರ್) ಎಡಕ್ಕೆ ಮಣ್ಣ ಮಾರ್ಗ ಹಿಡಿಯಬೇಕು.

ಈ ರಸ್ತೆಯಲ್ಲಿ ಒಂದು ಕಿ.ಮೀ ಸಾಗಿ ಬಲಕ್ಕೆ ತಿರುಗಿ ಗುಡ್ಡ ಏರಬೇಕು. ಸ್ವಲ್ಪದರಲ್ಲಿ ‘ಎಂಎನ್‍ಎ’(ಮಹಾಲಿಂಗ ನಾಯ್ಕ ಅಮೈ) ಎಂದು ಬರೆದ ಕಬ್ಬಿಣದ ಗೇಟು ಎದುರಾಗುತ್ತದೆ. ಅಗಲ ಕಿರಿದಾದ ಈ ರಸ್ತೆ ಏರಿದರೆ ನಾಯ್ಕರ ಜಮೀನು. ದೂರ ದಿಗಂತದಲ್ಲಿ ಅಂದಾಜು 250 ಡಿಗ್ರಿ ಸುತ್ತಲೂ ಗುಡ್ಡಗಳ ಸಾಲು. ನಡುವೆ ಉದ್ದಕ್ಕೂ ಆಳದ ಕಣಿವೆಯಲ್ಲಿ ಅಡಿಕೆ ತೋಟಗಳು.

ಪುಟ್ಟಪುಟ್ಟ ಹೆಜ್ಜೆಗಳು

ನಾಯ್ಕರ ಕಟ್ಟಹುಣಿಗಳಿಗೆ ಸಾವಿರಗಟ್ಟಲೆ ಕಲ್ಲು ಬಳಕೆಯಾಗಿದೆ. ಇಷ್ಟು ಎತ್ತರದಲ್ಲಿ ಇಷ್ಟೊಂದು ಕಲ್ಲು ಹೇಗೆ ಸಂಗ್ರಹಿಸಿದರು? ಇವರದು ಮರ ಏರಿ ಅಡಿಕೆ, ತೆಂಗು ಕೊಯ್ಯುವ ಕೌಶಲ ಬೇಡುವ ಕೆಲಸ. ಅಪ್ಪ ವೆಂಕಪ್ಪ ನಾಯ್ಕ, ಅಮ್ಮ ಅಕ್ಕು. ತೋಟಗಳೆಲ್ಲಾ ಇರುವುದು ಗುಡ್ಡಗಳ ತಪ್ಪಲಿನ ಕಣಿವೆ ಪ್ರದೇಶದಲ್ಲಿ. ವೃತ್ತಿ ನಿರ್ವಹಣೆಗೆಗಾಗಿ ದಿನನಿತ್ಯ ಒಂದು ಯಾ ಎರಡು ಬಾರಿಗುಡ್ಡ ಏರಿಳಿಯುವುದು ಅನಿವಾರ್ಯ. ಕೆಲಸ ಮುಗಿಸಿ ಬಸವಳಿದು ಮೇಲೇರಿ ಬರುವಾಗ ಖಾಲಿ ಬಂದದ್ದೇ ಇಲ್ಲ. ಪ್ರತಿ ಸಲವೂ ತಲೆಯ ಮೇಲೊಂದು ಕಲ್ಲು.

ದಿನಕ್ಕೆರಡು ಕಲ್ಲು. ಅಂದಾಜು ಎರಡು ವಾರಕ್ಕೆ ಮೂವತ್ತು. ಸುಮಾರು ಮೂವತ್ತು ಕಲ್ಲು ಆದಾಗ ಅದರಲ್ಲಿ ಆದಷ್ಟು ಕಟ್ಟಹುಣಿಯ ಕೆಲಸ.ಇಂಚಿಂಚು ಅಭಿವೃದ್ಧಿ. ಆದರೆ ಕೆಲಸದಲ್ಲಿ ರಾಜಿಯಿಲ್ಲ. ದಣಿಯಿತೆಂದು ಬಿಡುವೂ ಇಲ್ಲ! ನಾಯ್ಕರ ತಾಳ್ಮೆ, ಛಲ ಮತ್ತು ಆಶಾವಾದಗಳ ಕಲ್ಪನೆ ಕೊಡಲು ಕಟ್ಟಹುಣಿ ಕಟ್ಟಿದ ರೀತಿ ತಿಳಿದುಕೊಂಡರೆ.

ಹಾಗೆ ನೋಡಿದರೆ ಒಬ್ಬ ಅದ್ಭುತ ಛಲವಾದಿಯಲ್ಲದ ಯಾರೇ ಆದರೂ ಇಲ್ಲಿ ತೋಟ ಎಬ್ಬಿಸುವ ಹಂತಕ್ಕೇ ತಲುಪುತ್ತಿರಲಿಲ್ಲ. ಗುಡ್ಡದ ತುದಿಯ ಈ ಜಾಗ ಕೃಷಿಗೆ ಹೇಳಿದ್ದಲ್ಲ ಎಂಬುದೇ ಎಲ್ಲರ ಅಭಿಪ್ರಾಯವಾಗಿತ್ತು. ಅಮೈ ಮಹಾಬಲ ಭಟ್ಟರ ಬೆಂಬಲದಿಂದ ಈ ಗುಡ್ಡದ ತುದಿಯಲ್ಲಿ ದರ್ಖಾಸ್ತು ಪಡೆದು ಇಲ್ಲಿಗೆ ಬರುವುದಕ್ಕೆ ಮುನ್ನ ನಾಯ್ಕರೂ ನೀರಿನ ಬಗ್ಗೆ ಯೋಚಿಸಿರಲಿಲ್ಲ.

ಆಗ ಇಲ್ಲಿ ಒಂದೇ ಒಂದು ಪೊದರುಗಿಡವೂ ಇದ್ದಿರಲಿಲ್ಲ. ಹತ್ತು ಕಟ್ಟ ಮುಳಿ ಒಣಹುಲ್ಲು ಮಾತ್ರ ಸಿಗುತ್ತಿತ್ತಂತೆ. ನಾಯ್ಕರು ನಾಲ್ಕು ಕಂಬ ಊರಿ ಜೋಪಡಿ ಕಟ್ಟಿ ಇಲ್ಲಿ ವಾಸಿಸಲು ತೊಡಗಿದರು. ನಾಲ್ಕು ಪರ್ಲಾಂಗ್ ಕೆಳಗಿನಿಂದ ನೀರು ಹೊತ್ತು ತರಬೇಕಿತ್ತು. ಕುಡಿಯಲು ಮಾತ್ರವಲ್ಲ, ಎಲ್ಲಾ ಕೆಲಸಗಳಿಗೂ. ಮಕ್ಕಳು ಚಿಕ್ಕವರು. ಗುಡ್ಡದ ಮೇಲ್ತುದಿಯಾದ ಕಾರಣ ತೆರೆದ ಬಾವಿಯಲ್ಲಿ ನೀರು ಸಿಗುವ ಸಾಧ್ಯತೆ ಇರಲಿಲ್ಲ.

ಉಳಿದದ್ದು ಸುರಂಗ ಮಾರ್ಗ

ಏನು ಮಾಡಬಹುದು ಎಂದುಯೋಚಿಸುತ್ತಾ ಹೋದಾಗ ನಾಯ್ಕರಿಗೆ ಹೊಳೆದದ್ದು ಸುರಂಗ. ಸುರಂಗ ತೋಡಲು ಆಳುಗಳ ತಂಡವೇ ಬೇಡ. ಹೊಟ್ಟೆ ಹೊರೆಯುವ ದಿನಗೂಲಿ ಮಾಡುತ್ತಾ ಮಾಡುತ್ತಾ ಎಡೆಹೊತ್ತು, ರಾತ್ರಿ ಕೂಡಾ ಮಾಡಬಹುದು. ಯೋಚನೆ ಬಂದದ್ದೇ ತಡ, ಕೆಲಸ ಸುರು.

ಕೊಯ್ಲಿನ ಕೆಲಸ ಸಾಮಾನ್ಯವಾಗಿ ಅರ್ಧ ಹೊತ್ತಿನದು. ಮಧ್ಯಾಹ್ನಕ್ಕೇಮುಕ್ತಾಯ. ಮಧ್ಯಾಹ್ನದ ನಂತರ ಬಿಡುವಿದ್ದರೆ ಆಗಲೇ ಸುರಂಗದ ಕೆಲಸ ಸುರು. ರಾತ್ರಿ ಚಿಮಿಣಿದೀಪ ಇಟ್ಟು ಮುಂದುವರಿಕೆ. ಮಧ್ಯರಾತ್ರಿ ಹನ್ನೊಂದರವರೆಗೂ ಮುಂದುವರಿದದ್ದಿದೆ. ನಂತರ ಕೆಳಗಿನಿಂದ ತಂದಿಟ್ಟ ನೀರಲ್ಲಿ ಸ್ನಾನ, ಊಟ. ಒಮ್ಮೆ ಅಮ್ಮ, ‘ತಡರಾತ್ರಿವರೆಗೆ ನೀನೊಬ್ಬನೇ ಸುರಂಗದೊಳಗೆ ಕೆಲಸ ಮಾಡಬೇಡ’ಎಂದು ಗದರಿದ ನಂತರ ರಾತಿ ಸ್ವಲ್ಪ ಬೇಗನೇ ಕೆಲಸ ಮುಕ್ತಾಯ. ಬೆಳಗ್ಗೆ ಕೆಲಸಕ್ಕಾಗಿ ಗುಡ್ಡ ಇಳಿಯುವ ಮೊದಲು ಒಂದೆರಡು ಗಂಟೆ ಸುರಂಗದ ಮಣ್ಣು ಅಗೆದಿಟ್ಟು ಹೋಗುವುದೂ ಇತ್ತು. ಕಮ್ಮಿ ಅಂದರೂ ದಿನಕ್ಕೆ ಆರು ಗಂಟೆಯ ಕಠಿಣ ಶ್ರಮ.

ಮಳೆಗಾಲದಲ್ಲಿ ಸುರಂಗ ತೋಡಲು ಸಾಧ್ಯವಿಲ್ಲ. ಏನಿದ್ದರೂ ಷಷ್ಠಿಯ – ಡಿಸೆಂಬರ್ - ನಂತರವೇ. ಸುರಂಗವನ್ನು ಕೋಲುಗಳಲ್ಲಿ ಅಳೆಯುತ್ತಾರೆ. ಒಂದು ಕೋಲು ಅಂದರೆ ಎರಡೂವರೆ ಅಡಿ - ಮುಕ್ಕಾಲು ಮೀಟರ್. ಸುರಂಗ ಉದ್ದವಾಗುತ್ತಾ ಹೋದಂತೆ ದಿನವಹಿ ಕೆಲಸ ಆಗುವುದು ಕಡಿಮೆ. ಮಣ್ಣು ಹೆಚ್ಚು ಗಟ್ಟಿಯಾದರೆ ಇನ್ನೂ ಕಮ್ಮಿ.

ಮೊದಲ ಸುರಂಗದಲ್ಲಿ 40 ಕೋಲು ಹೋಗಿಯೂ ನೀರಿನ ಸುಳಿವೇ ಇರಲಿಲ್ಲ. ‘ಇದರಲ್ಲಿ ನೀರು ಸಿಗದು’ ಎಂದು ಬಿಟ್ಟುಬಿಡುವ ಹೊತ್ತಿಗೆ ಒಂದು ವರ್ಷ ಕಳೆದಿತ್ತು. ‘ಆ ಗುಡ್ಡದ ತುದಿಯಲ್ಲಿ ನೀರೆಲ್ಲಿಂದ? ಇವರಿಗೆ ಬೇರೆ ಕೆಲಸ ಇಲ್ಲ’ ಎಂದು ಊರವರು ಆಡಿಕೊಳ್ಳುತ್ತಿದ್ದದ್ದು ಈಗ ಇವರ ಕಿವಿಗೂ ಬೀಳತೊಡಗಿತು.

ಆದರೆ ಮಹಾಲಿಂಗ ನಾಯ್ಕರು ಜಗ್ಗಲಿಲ್ಲ. ‘ಎಲ್ಲೋ ಜಾಗ ತಪ್ಪಿದೆ. ಇನ್ನೊಂದೆಡೆ ಸುರಂಗ ತೆಗೆದರೆ ನೀರು ಸಿಗಬಹುದು’ ಎನ್ನುತ್ತಿತ್ತು ಅವರ ಒಳಮನಸ್ಸು. ಮುಂದಿನ ವರ್ಷ ಎರಡನೆಯ ಸುರಂಗ ತೋಡತೊಡಗಿದರು. ಇದಕ್ಕಾಗಿ ಐದು ಕೋಲು ಆಳದ ಬಾವಿ ಮಾಡಿ ಅದರೊಳಗಿಂದ ಸುರಂಗ ನಿರ್ಮಾಣ. ನಲುವತ್ತೈದು ಕೋಲು ಹೋದಾಗ ಬೆವರಿನಂಥ ನೀರ ಪಸೆಸಿಕ್ಕಿತು. ಇಡೀ ಸುರಂಗವನ್ನು ಒಂದು ಕೋಲು ಆಳ ಮಾಡಿ ನೋಡಿದರು. ಊಹೂಂ. ಫಲವಿಲ್ಲ.

ಎರಡು, ಮೂರು, ನಾಲ್ಕು ಸುರಂಗಗಳಾಗುವ ಹೊತ್ತಿಗೆ ವರ್ಷವೂ ಅಷ್ಟೇ ಕಳೆದಿತ್ತು. ಕುಡಿಯಲು ಒಂದಷ್ಟು ನೀರೂ ಸಿಗಲಿಲ್ಲ. ಟೀಕಿಸುವವರಿಗೆ ತಮ್ಮ ಕಣಿಸತ್ಯ ಎಂದು ಮನದಟ್ಟಾಯಿತು. ‘ಮೂಳು ನೀರು ತಿಕ್ಕೊಡಾಂಟ ಪಟಿಕ್ಕೆ ಮೈಪ್ಪೊಡಾತೆ’(ಇಲ್ಲಿ ನೀರು ಸಿಗಬೇಕಿದ್ದರೆ ಮೂತ್ರ ಹೊಯ್ಯಬೇಕಷ್ಟೇ) ಎಂದು ಒಬ್ಬರು ಇವರ ಕಿವಿಗೆ ಬೀಳುವಂತೆಯೇ ಆಡಿದ್ದೂ ಆಯಿತು.

ನಾಯ್ಕರು ಸಿಟ್ಟಾಗಲಿಲ್ಲ. ಪ್ರತಿಕ್ರಿಸಲೂ ಇಲ್ಲ. ಮನಸ್ಸಿಗಾದ ಕಹಿಯನ್ನವರು ಹಟವಾಗಿಸಿಕೊಂಡರು. ಇನ್ನಷ್ಟು ಉತ್ಸಾಹ, ವೇಗದಿಂದ ಐದನೆಯ ಸುರಂಗದ ಕೆಲಸ ಆರಂಭಿಸಿದರು. ಇಷ್ಟರೊಳಗೆ ಸುಮಾರು ಸುಮಾರು 130 ಕೋಲು ಸುರಂಗದ ಕೆಲಸ ವ್ಯರ್ಥವಾಗಿಬಿಟ್ಟಿತ್ತು.

ಬದುಕಿನ ತಿರುವು

ಐದನೆ ಸುರಂಗದ ಜಾಗ ಬೇರೆ ಯಾರಿಗೂ ನಿರೀಕ್ಷೆ ಹುಟ್ಟಿಸುವಂತಿರಲಿಲ್ಲ. ವಿಫಲ ಸುರಂಗಗಗಿಂತಲೂ ಈ ಜಾಗ ತುಂಬ ಎತ್ತರ. ಆದರೆ ಅದೃಷ್ಟದ ಆಟ ಬೇರೆಯೇ ಇತ್ತು. 25 ಕೋಲು ಹೋಗುವುದರೊಳಗೆ ನೀರು! ಅದು ಸುರಂಗದ ಮೇಲ್ಭಾಗದಿಂದ ಒಸರುವುದನ್ನು ಕಂಡಾಗ ನಾಯ್ಕರಿಗೆ ಹೊಸದೊಂದು ಯೋಚನೆ.

‘ಇನ್ನೂ ಮೂರು ಕೋಲು ಎತ್ತರದಲ್ಲಿ ಹೊಸದಾಗಿ ತೋಡಬಾರದೇಕೆ? ಎತ್ತರದಲ್ಲಿ ನೀರು ಸಿಕ್ಕರೆ ತೋಟ ಮಾಡಿ ಅದಕ್ಕೆ ಪಂಪು ಬಳಸದೆ ನೀರು ಉಣಿಸಬಹುದು’ ಆದರೆ ಅಲ್ಲಿನ ಮಣ್ಣು ಸ್ವಲ್ಪ ಸಡಿಲ. ಕುಸಿದು ಬೀಳುವ ಭಯದಿಂದ 25 ಕೋಲು ದೂರದವರೆಗೂ ಕುಳಿತೇ ತೋಡಿದರು. ಈ ಬಾರಿ ಲೆಕ್ಕಾಚಾರ ತಪ್ಪಾಗಲಿಲ್ಲ. ನೀರು ಸಿಕ್ಕಿತು. ಇದು ನಾಯ್ಕರ ಜೀವನದ ಅತಿ ದೊಡ್ಡ ತಿರುವು. ಇನ್ನೂ ಹೆಚ್ಚು ನೀರಿಗಾಗಿ ಅಗೆದಗೆದು ಈ ಸುರಂಗದ ಉದ್ದ 125 ಕೋಲು ಆಯಿತು.

ನೀರು ಸಿಕ್ಕ ನಂತರ ತೋಟ ನಿರ್ಮಾಣ. ಬೇರೆಬೇರೆ ಎತ್ತರಗಳಲ್ಲಿ ಹಂತಹಂತವಾಗಿ ಒಟ್ಟು ಐದು ತಟ್ಟು. ನಾಲ್ಕರಲ್ಲಿ ಅಡಿಕೆ. ಒಂದು ತಟ್ಟಿನಲ್ಲಿ ತೆಂಗು.

ಮೇಲಿನ ಸುರಂಗ ಬತ್ತುವುದಿಲ್ಲ. ಬೇಸಿಗೆ ಕೊನೆವರೆಗೂ - ಸ್ವಲ್ಪ ಕಡಿಮೆಯಾದರೂ - ನೀರು ಕೊಡುತ್ತಿರುತ್ತದೆ. ಈ ನೀರನ್ನು ಅಂದಾಜು 15 ಅಡಿ ಉದ್ದ, 30 ಅಗಲ, ಐದಡಿ ಎತ್ತರದಒಂದು ಮಣ್ಣಿನ ಕೊಳದಲ್ಲಿ ಅಲ್ಲೇ ಸಂಗ್ರಹಿಸುತ್ತಾರೆ.

ಇಲ್ಲಿಂದ ಗುರುತ್ವಾಕರ್ಷಣ ಶಕ್ತಿಯಿಂದ ನೀರು ಹರಿಸಿ ಕೆಳಗಿನ ಮೂರು ತಟ್ಟುಗಳಿಗೆ ತುಂತುರು (ಸ್ಪ್ರಿಂಕ್ಲರ್) ನೀರಾವರಿ. ಒಂದು ಸಲಕ್ಕೆ ಮೂರು ಸ್ಪ್ರಿಂಕ್ಲರ್ ಜೆಟ್ ಜೋಡಣೆ. ಎರಡು ಗಂಟೆ ಸಿಂಪಡಣೆ. ಮೇಲಿನ ತಟ್ಟಿಗೆ ಮಾತ್ರ ಹೋಸ್ ಇರಿಗೇಶನ್ (ಹನಿ ನೀರಾವರಿ).

ಐದನೆಯ ಸುರಂಗದ ನಂತರವೂ ಎರಡು ಸುರಂಗ ನಿರ್ಮಾಣ. ಒಂದು ಮನೆಯ ಹಿಂಭಾಗದಲ್ಲೇ. ‘ಮೇಲಿನ ಸುರಂಗದಿಂದ ಕೆಳಗೆ ಇಲ್ಲಿ ನೀರು ಸಿಗಬಹುದು ಎಂಬ ದೊಡ್ಡ ಆಸೆಯೇ ಇರಲಿಲ್ಲ. ಆದರೂ ಸಿಕ್ಕಿತು. ಈ ನೀರು ತುಂಬಿಸಲು 12,000 ಲೀಟರಿನ ಫೆರೋಸಿಮೆಂಟ್ ಟಾಂಕಿ. ಆರು ದಿನಕ್ಕೊಮ್ಮೆ ಸುರಂಗದ ನೀರಿನಿಂದ ಇದು ತುಂಬುತ್ತದೆ. ತುಂಬಿದಾಗ ಕೆಳಗಿನ ತಟ್ಟುಗಳಿಗೆ ಇಲ್ಲಿಂದಲೂ ನೀರು ಹರಿಸಬರುತ್ತದೆ’ ಎನ್ನುತ್ತಾರೆ ಮಹಾಲಿಂಗ ನಾಯ್ಕ್.

ವರ್ಷದ ಕೃಷಿಕ

ಸುಮಾರು 250 ಫಸಲು ಕೊಡುವ ಅಡಿಕೆ ಮರ. ನಲುವತ್ತು ತೆಂಗಿನ ಮರಗಳಲ್ಲಿ ಎಳೆಯವೂ ಕೆಲವು ಇವೆ. ಈ ವರ್ಷ ಮೂರು-ಮೂರೂವರೆ ಕ್ವಿಂಟಾಲ್ ಬೆಳೆ. ‘ಇಲ್ಲಿಯ ಮಟ್ಟಿಗೆ ಇದು ಒಳ್ಳೆ ಬೆಳೆಯೇ’. ಮನೆಯ ಅಗತ್ಯಕ್ಕೆ ಆಗಿ 1,500 ತೆಂಗು ಮಾರಲು ಸಿಗುತ್ತಿದೆ. ಎಡೆಬೆಳೆಯಾಗಿ ಅಲ್ಪಸ್ವಲ್ಪ ಕರಿಮೆಣಸು. ಮನೆ ಬಳಕೆಗೆ ಹಲಸು, ಗೇರುಬೀಜ.

ಮೊದಮೊದಲು ‘ಸರಕಾರಿ ಗೊಬ್ಬರ’ ಹಾಕುತ್ತಿದ್ದರು. ವಾರಣಾಶಿ ದಂಪತಿಗಳ ಸಂಪರ್ಕಕ್ಕೆ ಬಂದ ನಂತರ ಪೂರ್ತಿ ಸಾವಯವ. ಇವರ ಸಾಧನೆ ಗಮನಿಸಿ ವಾರಣಾಶಿ ಸಂಶೋಧನಾ ಪ್ರತಿಷ್ಠಾನ 2004ರಲ್ಲಿ ಇವರಿಗೆ ‘ವರ್ಷದ ಕೃಷಿಕ’ ಪ್ರಶಸ್ತಿ ಕೊಟ್ಟಿತು. ಇದೀಗ 2018ರಲ್ಲಿ ಮಂಗಳೂರು ಪ್ರೆಸ್‌ ಕ್ಲಬ್ ಇವರಿಗೆ ವರ್ಷದ ಪ್ರಶಸ್ತಿ ನೀಡಿ ಗೌರವಿಸಿದೆ.

ಮನೆ ಪಕ್ಕದಲ್ಲೇ ಹಟ್ಟಿ. ಎರಡು ದನಗಳಿದ್ದುವು. ಒಂದು ಆಕಸ್ಮಿಕವಾಗಿ ಸತ್ತು ಹೋಯಿತು. ಇದ್ದಷ್ಟು ಹಟ್ಟಿಗೊಬ್ಬರ ತೋಟಕ್ಕೆ. ಇದಲ್ಲದೆ ಇಲ್ಲಿ ಸಿಕ್ಕ ತ್ಯಾಜ್ಯ ಸೇರಿಸಿ ನಡುನಡುವೆ ಸ್ವಲ್ಪ ಸುಡುಮಣ್ಣು ಮಾಡಿ ಗೋಣಿಯಲ್ಲಿ ತುಂಬಿಟ್ಟುಕೊಳ್ಳುತ್ತಾರೆ. ಮಳೆಗಾಲದ ಕೊನೆಗೆ ತೋಟಕ್ಕೆ.

ಕಂಪೋಸ್ಟ್ ತಯಾರಿಯೂ ನಡೆದಿದೆ. ಆಚೀಚೆ ಸಿಕ್ಕ ಸೆಗಣಿ, ತರಗೆಲೆಗಳನ್ನು ನೆಲದ ಮೇಲೆ ಒಂದೆಡೆ ಪೇರಿಸಿ ‘ರಾಶಿ ವಿಧಾನ’ದ ಕಂಪೋಸ್ಟಿಂಗ್.ಹೊರಗಿನಿಂದ ಯಾವುದೇ ಗೊಬ್ಬರ ತರುತ್ತಿಲ್ಲ.ಈಚೆಗೆ ಜಮೀನಿನ ಅಂಚಿನಲ್ಲಿ ಒಂದು ಚಿಕ್ಕ ತಟ್ಟು (ಅಂದಾಜು 15X30 ಅಡಿ) ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಇಲ್ಲಿಭತ್ತದ ಬೆಳೆ. ಬೇಸಿಗೆಯಲ್ಲಿ ತರಕಾರಿ. ಅಲಸಂಡೆ, ಗೆಣಸು, ಸೌತೆ, ಮೆಣಸು ಇತ್ಯಾದಿ. ಇಲ್ಲಿಗೆ ತೋಟದ ಪೈಪ್‍ಲೈನಿನಿಂದ ನೀರು.

ಒಂದು ವರ್ಷ ಒಳ್ಳೆ ತರಕಾರಿ ಆಗಿತ್ತು. ಹೆಚ್ಚಾದ್ದನ್ನು ಮಾರಿ 500 ರೂ. ಸಿಕ್ಕಿತ್ತು. ಆದರೆ ಈಗ ಇಲಿ ಮತ್ತು ಮೊಲದ ಹಾವಳಿ ಹೆಚ್ಚು. ತರಕಾರಿ ಆದದ್ದು ಕಡಿಮೆ.

ಮೇಲಿನ ತಟ್ಟಿನಲ್ಲಿ ನಾಯ್ಕರು ದಶಕದ ಕಾಲ ಭತ್ತ ಬೆಳೆಸಿದ್ದರು. ಅದೇ ಸುರಂಗದ ನೀರು ಬಳಸಿ ಎರಡು ಬೆಳೆ. ಹತ್ತು ಮುಡಿ ಭತ್ತ ಆಗುತ್ತಿತ್ತು. ಉಳಲು ಎತ್ತುಗಳಿಲ್ಲ. ಹಾರೆಯಲ್ಲಿ ಅಗೆದೇ ಮಣ್ಣು ಸಡಿಲಾಗಿಸುತ್ತಿದ್ದರು. ಇವರು ಅಗೆದುಕೊಂಡು ಹೋದಂತೆಲ್ಲಾ ಮಕ್ಕಳಾದ ರಘುನಾಥ, ಶಾರದೆ ಮತ್ತು ಬಾಲಕೃಷ್ಣ ಚೆನ್ನಾಗಿ ಕಾಲಿನಲ್ಲಿ ಮಣ್ಣನ್ನು ತುಳಿದುಕೊಡುತ್ತಿದ್ದರು. ‘ಶಾರದೆಯ ಮದುವೆ ಆದ ನಂತರ ಭತ್ತದ ಕೃಷಿ ಕೈಬಿಟ್ಟೆ. ಮಕ್ಕಳು ತುಳಿಯಲು ಆಗದು ಎಂದರು. ಹಾಗಾಗಿ ಅಲ್ಲೂ ಅಡಿಕೆ ತೋಟ ಇಟ್ಟೆ’ ಎನ್ನುತ್ತಾರೆ ಮಹಾಲಿಂಗ ನಾಯ್ಕ್.

ನನಸಾದ ನೀರು, ಸೂರು

ನೀರಿನ ಕನಸಿನಂತೆಯೇ ಬಾಕಿ ಉಳಿದಿದ್ದ ಇನ್ನೊಂದು ಕನಸು ಪಕ್ಕಾ ಮನೆ ಕಟ್ಟುವುದು. 2001ರಲ್ಲಿ ಇದೂ ನನಸಾಯಿತು. ಕೈಯಲ್ಲಿದ್ದ ಹಣ ಸಾಕಾಗಲಿಲ್ಲ. ಅಣ್ಣನ ಮಕ್ಕಳಿಂದ ಕೈಸಾಲ ಪಡೆದರು. ಸಿಮೆಂಟ್ ಸಾರಣೆ ಮಾಡಿದ, ತೀರಾ ಚಿಕ್ಕದಲ್ಲದ ಹಂಚಿನ ಮನೆ.

ಹತ್ತಿರವೇ ಕೊಟ್ಟಿಗೆ, ಹಟ್ಟಿ. ಸುರಂಗದ ನೀರನ್ನೇ ಪೈಪಿನಲ್ಲಿ ತಂದು ನಲ್ಲಿ ನೀರಿನ ಸೌಕರ್ಯ. ಗೇಟಿನಿಂದ ಮನೆ ಅಂಗಳದವರೆಗೂ ರಸ್ತೆ. ದೂರವಾಣಿ,ಟೀವಿ. ಹೀಗೆ ತನ್ನ ಸ್ತರದ ಅದೆಷ್ಟೋ ಕುಟುಂಬಗಳು ಮಾಡಿಕೊಳ್ಳಲಾಗದ ಎಲ್ಲ ಸೌಕರ್ಯಗಳನ್ನೂ ನಾಯ್ಕರು ಮಾಡಿಕೊಂಡಿದ್ದಾರೆ. ಜತೆಗೆ ಎಲ್ಲೆಡೆ ಸ್ವಚ್ಛವಾಗಿಟ್ಟಿದ್ದಾರೆ. ಒಪ್ಪ ಓರಣವೂ.

ಮನೆಗೆ ನಿಕಟಬಂಧುಗಳ ಬಳಿ ಸಾಲ ಮಾಡಿದ್ದು ಬಿಟ್ಟರೆ ಬ್ಯಾಂಕ್ ಸಾಲಕ್ಕೆ ನಾಯ್ಕರು ಈವರೆಗೆ ಯತ್ನಿಸಿಯೇ ಇಲ್ಲವಂತೆ. ಅದೇ ರೀತಿ ಸಬ್ಸಿಡಿಗೂ. ‘ಇಲ್ಲ ಅನ್ನುವುದಕ್ಕೆ ಮನೆ ಕಟ್ಟುವುದಕ್ಕೆ ಸಹಾಯಧನ ಸಿಕ್ಕಿದ್ದು ತೆಗೆದುಕೊಂಡಿದ್ದೇನೆ, ಅದು ಸಾವಿರ ರೂಪಾಯಿಮಾತ್ರ’. ಕೃಷಿ ಕೆಲಸಗಳಿಗೂ ಅಷ್ಟೇ. ಮನೆ ಕಟ್ಟುವಾಗ ಕಲ್ಲು ಹೊತ್ತು ಕೊಟ್ಟದ್ದು ಇವರೇ. ಬಡಗಿ, ಮೇಸ್ತ್ರಿಗಳಂತಹ ಕುಶಲ ಕೆಲಸಗಾರರಲ್ಲದೆ ಮನೆ ಕಟ್ಟುವಾಗ ಮಾತ್ರ ಹೊರಗಿನ ಆಳುಗಳನ್ನು ಕರೆಸಿಕೊಂಡಿದ್ದರಂತೆ.

ದೊಡ್ಡ ಹೊಡೆತ

ಈ ಎಲ್ಲಾ ಕೆಲಸದ ನಡುವೆ ಸುತ್ತಲಿನ ತೋಟಗಳಿಗೆ ಅಡಿಕೆ, ತೆಂಗು ಕೊಯ್ಲಿಗೆ ಹೋಗುವುದು ನಡೆದೇ ಇತ್ತು. ನೀರು, ಸೂರುಗಳ ವಿಚಾರದಲ್ಲಿ ಒಳ್ಳೇಅದೃಷ್ಟ ಕರುಣಿಸಿದ ವಿಧಿ ಇನ್ನೊಂದೆಡೆ ಅದನ್ನು ಕಿತ್ತುಕೊಳ್ಳುವ ಘಟನೆ ನಡೆದುಹೋಯಿತು. 2002ರಲ್ಲಿ ಒಂದು ದಿನ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಸೊಂಟಕ್ಕೆ ಜಖಂ. ಮಂಗಳೂರು ಆಸ್ಪತ್ರೆಯಲ್ಲಿ ಎರಡು ತಿಂಗಳು ಇರಬೇಕಾಯಿತು. ಅರುವತ್ತು ಸಾವಿರಕ್ಕೂ ಮಿಕ್ಕಿ ಖರ್ಚು. ಇದ್ದಬದ್ದ ಉಳಿತಾಯವನ್ನೆಲ್ಲಾ ಕರಗಿಸಿತು.

ಮನೆ ಸೇರಿದ ನಾಯ್ಕರು ಮೊದಲಿನಂತಾಗಲಿಲ್ಲ. ಹೊರನೋಟಕ್ಕೆ ಅಂಥ ಊನ ಕಾಣ ಸದಿದ್ದರೂ ಕುಕ್ಕುರುಗಾಲಲ್ಲಿ ಕೂರಲು, ನೆಲಕ್ಕೆ ಬಾಗಲು ಅವರ ಸೊಂಟ ಒಪ್ಪುವುದಿಲ್ಲ. ಅಸಾಧ್ಯ ನೋವು. ಕೊಯ್ಲಿನ ಕೆಲಸವೂ ಆಗುವುದಿಲ್ಲ. ಇದು ಅವರಿಗೆ ಒಂದು ದೊಡ್ಡ ಹಿಂದೇಟಾಯಿತು.

ಈವರೆಗೆ ಮೂರು ದಶಕ ಕಾಲ ತಮ್ಮ ಕುಟುಂಬವನ್ನು ಆಧರಿಸಿ ಈ ಪ್ರಗತಿಗೆ ಅಡಿಪಾಯವಾದ ಮರ ಏರುವ ವೃತ್ತಿ ನಿಲ್ಲಿಸಬೇಕಾದಾಗ ನಾಯ್ಕರಿಗೆ ಆದ ಬೇಸರ ಅಷ್ಟಿಷ್ಟಲ್ಲ. ಆದರೆ ಅವರು ಅದೇ ಭಾವ ತನ್ನನ್ನು ಆವರಿಸಲು ಬಿಡಲಿಲ್ಲ. ಬೇಗನೆ ಸಂಭಾಳಿಸಿಕೊಂಡು ಹಿಂದಿನ ಏರುತ್ಸಾಹ ಮತ್ತೆ ಕಾಯ್ದುಕೊಂಡರು.

ಮಹಾಲಿಂಗ ನಾಯ್ಕರು ಶಾಲೆಗೆ ಹೋಗಿಲ್ಲ. ಸಾಕ್ಷರರೂ ಅಲ್ಲ. ಅವರ ಬರವಣ ಗೆ ದಸ್ಕತ್ತು ಹಾಕುವುದಕ್ಕೆ ಮಾತ್ರ ಮೀಸಲು. ಅದು ‘ಹೇಗೋ ಕಲಿತುಕೊಂಡದ್ದು’. ಹಾಗೆಂದು ಕೃಷಿಯ ಹೊಸಹೊಸ ಉಪಾಯಗಳನ್ನುಕಲಿಯುವುದರಲ್ಲೂ, ಅಳವಡಿಸುವುದರಲ್ಲೂ ಅವರು ಮುಂದೆಯೇ ಇದ್ದರು.

ಮಳೆಕೊಯ್ಲು

ಊರಿನಲ್ಲಿ ಮಳೆಕೊಯ್ಲಿನ ವ್ಯಾಪಕ ಆಸಕ್ತಿ ಕುದುರುವ ಮೊದಲೇ ಇವರು ಅದನ್ನು ಅನುಷ್ಠಾನಕ್ಕೆ ತಂದಿದ್ದರು.ಇವರ ಜಮೀನಿಗಿಂತಲೂ ಸ್ವಲ್ಪ ಮೇಲೆ ಸರಕಾರದ ಬೀಜದ ‘ಕೂಪು’ (ತೋಟ) ಇದೆ. ನಾಯ್ಕರು ಅದನ್ನೇರಿ ಕೂಪಿನವರು ಗದರಿದರೆ ಅಂತ ‘ಹೆದರಿ ಹೆದರಿ’ ಮುನ್ನೂರು ಇಂಗುಗುಂಡಿ ತೋಡಿದರು.ಈ ಕೆಲಸ ತನ್ನ ಸುರಂಗಗಳ ನೀರಿನ ಮಟ್ಟಿಗೆ ಪ್ರಯೋಜನ ಕೊಟ್ಟಿದೆ ಎನ್ನುತ್ತಾರೆ.

ವರ್ಷಗಳ ನಂತರ ಕೂಪಿಗೆ ಭೇಟಿ ಕೊಟ್ಟ ಸರಕಾರಿ ಅಧಿಕಾರಿ ಒಬ್ಬರು ಇವರೊಡನೆ ಇಂಗುಗುಂಡಿ ತೋರಿಸಿ ‘ಇದನ್ನು ಯಾರು ಮಾಡಿದ್ದು?’ ಎಂದು ಕೇಳಿದರಂತೆ. ಅಂಜುತ್ತಲೇ ಇವರಿಂದ ಉತ್ತರ, ‘ನಾನು’. `ಒಳ್ಳೇ ಕೆಲಸ. ಇದರಿಂದ ನಿಮಗೂ ಪ್ರಯೋಜನ, ನಮಗೂ’ ಅಂದರಂತೆ ನಗುತ್ತಾ!

ಬಾವಿ ತೋಡಿ ಅದರೊಳಗಿಂದ ತೋಡುತ್ತಾ ಹೋದ ಹೊಟ್ಟು ಸುರಂಗ ಇದೆಯಲ್ಲಾ. ಅದು ಇವರ ನೀರಿರುವ ಮೇಲ್ಬದಿಯ ಸುರಂಗಕ್ಕಿಂತ ತಗ್ಗಿನಲ್ಲಿದೆ. ಸುರಂಗದ ಒಂದಷ್ಟು ಭಾಗವನ್ನು ಮುಚ್ಚಿದ್ದಾರೆ. ಮೇಲಿನ ಸುರಂಗದಿಂದ ಮಳೆಗಾಲದಲ್ಲಿ ಕೈಯಷ್ಟು ದಪ್ಪದ ನೀರು ವೃಥಾ ಹರಿದು ಬರುತ್ತಲೇ ಇರುತ್ತದೆ. ಆಗ ನೀರಾವರಿ ಬೇಡ ತಾನೇ? ಈ ನೀರನ್ನು ತಿರುಗಿಸಿ ನೇರ ಹೊಟ್ಟು ಬಾವಿಯೊಳಕ್ಕೆ ಇಳಿಸುತ್ತಾರೆ. ಎರಡು ಮೂರು ಕಡೆ ಹೀಗೆ ಹೆಚ್ಚಾಗಿ ಹೊರಹರಿಯುವ ನೀರನ್ನು ಮರಳಿ ಭೂಮಿಯೊಳಕ್ಕೆ ಉಳಿಸುವ ಏರ್ಪಾಡಿದೆ.

ತನ್ನ ಮನೆಯ ಕೈತೊಳೆದ ಮತ್ತು ಸ್ನಾನದ ನೀರನ್ನೂ ನಾಯ್ಕರು ಹಾಳುಮಾಡುವುದಿಲ್ಲ. ಇದನ್ನು ಸಂಗ್ರಹಿಸಲು ಮನೆಯಂಗಳದ ಕೆಳಗೆ, ತೋಟದ ಮೇಲೆ ಒಂದು ಸಿಮೆಂಟ್ ಟಾಂಕಿ ಮಾಡಿಕೊಂಡಿದ್ದಾರೆ. ಸುಮಾರು 3,500 ಲೀಟರ್ ಸಾಮರ್ಥ್ಯ. ವಾರಕ್ಕೊಮ್ಮೆ ಇದು ತುಂಬಿಕೊಳ್ಳುತ್ತದೆ. ಇದು ನೂರು ಅಡಿಕೆ ಮರಗಳಿಗೆ ಉನಿಸಲು ಸಾಕಾಗುತ್ತದಂತೆ.

ಮೇಲಿನ ತೋಟದಲ್ಲಿ ಒಂದೆಡೆ ಅಜೋಲಾ ಗಿಡಗಳ ತೊಟ್ಟಿ. ಇದನ್ನು ಪ್ರತಿನಿತ್ಯ ದನಕ್ಕೆ ತಿನ್ನಿಸುತ್ತಾರೆ. ಜೇನು ಸಾಕಣೆಯ ಕೆಲಸಗಳೆಲ್ಲಾ ಕರಗತ. ನಾಲ್ಕು ಜೇನು ಪೆಟ್ಟಿಗೆಗಳಿವೆ.

ಬಿಡು ನೀರಿನನೀರಾವರಿ

ಕೆಳಗಿನ ಸುರಂಗದಲ್ಲಿ ಮೇಲಿನದರಷ್ಟು ನೀರಿಲ್ಲ. ಫೆರೋಸಿಮೆಂಟ್ ಟಾಂಕಿಮಾತ್ರವಲ್ಲದೆ ಈ ನೀರನ್ನು ಕೂಡಿಡಲು ಇವರದೇ ಆದ ಉಪಾಯ ಮಾಡಿಕೊಂಡಿದ್ದಾರೆ. ಸುರಂಗದ ಒಳಗೇನೇ ಒಂದೆಡೆ ಮೊಣಕಾಲೆತ್ತರದ ಅಡ್ಡಗೋಡೆ ಕಟ್ಟಿದ್ದಾರೆ. ಇದರಲ್ಲಿ ನೀರು ತುಂಬಿದಾಗ – ಅಂದಾಜು 3,000 ಲೀ- ಜೋಡಿಸಿದ ಪೈಪುಗಳ ಮೂಲಕ ಕೆಳಗಿನ ತೋಟಕ್ಕೆ ಬಿಟ್ಟು ತುಂತುರು ನೀರಾವರಿಗೆ ಬಳಸುತ್ತಾರೆ. ಈ ನೀರು ನೂರು ಅಡಿಕೆ ಮರಕ್ಕೆ ಸಾಕು.

ಮೇಲಿನ ಅಡಿಕೆ ತೋಟ ಬಿಟ್ಟರೆ ಉಳಿದ ಮೂರೂ ತಟ್ಟುಗಳಲ್ಲಿ ತುಂತುರು ನೀರಾವರಿಗಾಗಿ ಭೂಗತ ಪೈಪುಜಾಲವಿದೆ. ಹನ್ನೆರಡು ಕಡೆ ಸ್ಪ್ರಿಂಕ್ಲರ್ ಜೋಡಿಸಬಹುದಾದ ‘ಬಾಯಿ’ಗಳಿವೆ. ಒಂದು ಬಾರಿಗೆ ಮೂರು ಬಾಯಿಗಳಿಗೆ ಜೆಟ್ ಜೋಡಿಸುತ್ತಾರೆ. ಹೀಗೆ ನಾಲ್ಕು ಪಾಳಿಗಳಲ್ಲಿ ನೀರಾವರಿ ಮುಗಿಯುತ್ತದೆ.

‘ಇಲ್ಲಿನ ಪರಿಸ್ಥಿತಿಯಲ್ಲಿ ಎರಡು ಗಂಟೆಯಾದರೂ ನೀರು ಕೊಡದಿದ್ದರೆ ಸಾಕಾಗುವುದಿಲ್ಲ. ಅಷ್ಟು ನೀರು ಸಿಗುವುದಿಲ್ಲ ಎಂದಾಗ ಸ್ಪ್ರಿಂಕ್ಲರ್ ನಿಲ್ಲಿಸಿ ಪೈಪಿನಲ್ಲಿ ನೀರು ಉಣಿಸುತ್ತೇವೆ. ನೀರಿನ ಟಾಂಕಿಗಳಲ್ಲಿ ದಿನಕ್ಕೆ ಎಷ್ಟು ನೀರು ತುಂಬುತ್ತದೆ ಎಂಬುದನ್ನು ಗಮನಿಸಿಯೇ ತೋಟಕ್ಕೆ ನೀರು ಬಿಡುತ್ತೇವೆ’ ಎನ್ನುತ್ತಾರೆ ಅವರು.

ಅಂಗಳದ ಒಂದು ಬದಿಯಲ್ಲೇ ಕಂಪೋಸ್ಟ್ತಯಾರಿ. ಈ ರಾಶಿಯಿಂದ ಸ್ವಲ್ಪ ಪೋಷಕಾಂಶಭರಿತದ್ರವ ಸೋರಿಹೋಗುತ್ತದಲ್ಲಾ? ಅಲ್ಲೇ ನಾಯ್ಕರು ಬಸಳೆ ಮತ್ತು ಗೆಣಸಿನ ಬಳ್ಳಿ ನೆಟ್ಟಿದ್ದಾರೆ. ಅದು ಹೇಗೆ ಹುಲುಸಾಗಿ ಬೆಳೆಯುತ್ತದೆ ಗೊತ್ತೇ?

ವಾರಣಾಶಿ ಪ್ರಶಸ್ತಿಯೊಂದಿಗೆ ನಾಯ್ಕರಿಗೆ ಒಂದು ಏಕಚಕ್ರದ ಕೈಗಾಡಿ ಸಿಕ್ಕಿದೆ. ಇದು ತುಂಬಾ ಉಪಯೋಗಕ್ಕೆ ಬರುತ್ತದೆ. ‘ಮೊಣಕಾಲಲ್ಲಿ ಮಣ್ಣಿನ ಬುಟ್ಟಿ ಇಟ್ಟು ಸಾಗಿಸಿ ನೆಲ ಸಮತಟ್ಟು ಮಾಡಿದ ಆ ದಿನಗಳಲ್ಲಿ ನನಗೆ ಇಂಥದೊಂದು ಕೈಗಾಡಿ ಸಿಕ್ಕಿದ್ದರೆಎಂದು ಆಗಾಗ ಅನ್ನಿಸುತ್ತದೆ’ಎಂದು ನೆನಪಿಸಿಕೊಳ್ಳುತ್ತಾರೆ.

ಪ್ರಶಸ್ತಿ ಸಿಕ್ಕ ನಂತರ ಅದೆಷ್ಟೋ ರೈತತಂಡಗಳು ಇವರ ಸಾಧನೆ ನೋಡಲು ಈ ಅಮೈ ಗುಡ್ಡ ಏರಿವೆ. ನೋಡಿದವರೆಲ್ಲಾ ‘ಕೃಷಿಯೇ ಆಗದು ಎಂದುಕೊಂಡಿದ್ದ ಈ ಜಾಗದಲ್ಲಿ ಇಷ್ಟು ಸಾಧನೆ ಮಾಡಿದ್ದು ವಿಶೇಷವೇ. ಕೃಷಿಯಲ್ಲಿ ಇಷ್ಟೊಂದು ಉತ್ಸಾಹ ವಹಿಸಿ ಕೆಲಸ ಮಾಡಿದವರು ಬಹಳ ಕಡಿಮೆ’ಎನ್ನುತ್ತಾರಂತೆ. ಒಂದಷ್ಟು ತೋಟಗಳಿಗೆ ಅಧ್ಯಯನ ಪ್ರವಾಸ ಹೋದದ್ದಿದೆ. ಅದು ಎಲ್ಲೆಲ್ಲಿಗೆ ಎನ್ನುವುದು ಅವರಿಗೆ ಅಷ್ಟಾಗಿ ನೆನಪಿಲ್ಲ.

ಅಡಿಕೆ, ತೆಂಗು ಕೊಯ್ಯುವ ಕಠಿಣದ ಕೆಲಸ ಮಾಡುವವರು ‘ಆಯಾಸ ಮರೆಯಲು’ ಚಟ ಅಂಟಿಸಿಕೊಳ್ಳುವುದಿದೆ. ನಾಯ್ಕರು ಇದರಿಂದ ಬಲು ದೂರ. ತಾನಾಯಿತು, ತನ್ನ ಕೆಲಸವಾಯಿತು. ಹಾಳು-ಹರಟೆಯಿಲ್ಲ. ಪರದೂಷಣೆಯ ಸುಳಿವೇ ಇಲ್ಲ. ಕಳೆದ ಐದು ವರ್ಷಗಳ ಐದಾರು ಭೇಟಿಯಲ್ಲಿ ನಗುನಗುತ್ತಾ ಮೆಲು ಮಾತನಾಡಿದರೇ ವಿನಃ ಒಮ್ಮೆಯೂ ಗೊಣಗುವುದು, ಇನ್ನೊಬ್ಬರ ಬಗ್ಗೆ ಲಘುವಾಗಿ ಆಡುವುದು ಕೇಳಿಲ್ಲ.

‘ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದಾಯ ಬಹಳ ಜಾಸ್ತಿ ಏನೂ ಇಲ್ಲ. ಸೊಂಟದ ತೊಂದರೆಯಿಂದಾಗಿ ನನಗೆ ಹೊರಗೆ ದುಡಿಯಲು ಹೋಗಲು ಆಗುತ್ತಿಲ್ಲ. ಆದರೂ ಸೋತಿಲ್ಲ ಯಾಕೆ ಅಂದರೆ ಶೋಕಿಗಾಗಿಯೋ, ಅಗತ್ಯವಿಲ್ಲದೆಯೋ ಒಂದಿಷ್ಟೂ ಖರ್ಚು ಮಾಡುತ್ತಿಲ್ಲ, ಸಾಲ ತೆಗೆದಿಲ್ಲ’ಎನ್ನುತ್ತಾ ನಿಟ್ಟುಸಿರು ಬಿಡುತ್ತಾರೆ.

‘ಕೈಯಲ್ಲಿರುವ ಹಣ ಅಥವಾ ಆದಾಯದಲ್ಲಿ ದಿನದ ಕೊನೆಗೆ ಐದು ರೂಪಾಯಿ ಆದರೂ ಉಳಿಯುವಂತೆ ನಾನು ಮೊದಲೇ ಪ್ಲಾನ್ ಹಾಕಿಕೊಳ್ಳುತ್ತೇನೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ ಅನಂತರ ಇನ್ನೊಬ್ಬರ ಹಂಗಿಗೆ ಬೀಳುವುದನ್ನು ಇಷ್ಟಪಡುವುದಿಲ್ಲ’ಎನ್ನುವುದು ಇವರ ತತ್ವ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ನಾಯ್ಕರ ಕಟ್ಟುನಿಟ್ಟಾದ ಧೋರಣೆ ಮಾತ್ರವಲ್ಲ, ನೆಮ್ಮದಿಯ ಬದುಕಿನ ಮುಖ್ಯ ಸೂತ್ರಗಳಲ್ಲೊಂದು.

ಇದೇ ನಿಲುವಿನಿಂದಾಗಿ ಮಹಾಲಿಂಗ ನಾಯ್ಕ ಸೊಂಟನೋವನ್ನೂ ಲೆಕ್ಕಿಸದೆ ತನ್ನ ತೋಟದ ಕೊಯ್ಲು ತಾನೇ ಮಾಡಿಕೊಳ್ಳುತ್ತಾರೆ. ‘ಅಡಿಕೆ ಕೊಯ್ಯಲೂ ಬೇರೆ ಯಾರನ್ನೂ ಆಶ್ರಯಿಸುವುದಿಲ್ಲ. ಒಮ್ಮೆಲೇ ಎಲ್ಲಾ ಮರಗಳಿಂದ ಕೊಯ್ಯಲು ಆಗುವುದಿಲ್ಲ. ಒಂದಿನ ಇಷ್ಟು, ಮರುದಿನ ಮತ್ತಷ್ಟು - ಹೀಗೆ ಜೋರು ಆಯಾಸ ಆಗುವಲ್ಲಿಯವರೆಗೆ ಹಂತಹಂತವಾಗಿ ಕೊಯ್ದು ಮುಗಿಸುತ್ತೇನೆ. ಅದು ಬಿಟ್ಟು ಬೇರೆಯವರನ್ನು ಕರೆಸಿ ₹250 ಸಂಬಳ ಕೊಟ್ಟರೆ ಮತ್ತೆ ನಮಗೆ ಇದರಲ್ಲಿ ಏನು ಉಳಿಯುತ್ತದೆ?’ ಎನ್ನುವುದು ಅವರ ಪ್ರಶ್ನೆ.

ಮತ್ತೆ ಕಾರ್ಮೋಡ

ಒಮ್ಮೆಕಷ್ಟದ ದಿನಗಳೆಲ್ಲಾ ಮುಗಿದು ನಗುನಗುತ್ತಾ ಇರಬೇಕು ಎನ್ನುವ ಈ ಮಧ್ಯವಯಸ್ಸಿನಲ್ಲಿ ಪಾಪ, ನಾಯ್ಕರಿಗೆ ಮನದಲ್ಲಿ ಆತಂಕ ಕಾಡುತ್ತಿದೆ. ಕಾರಣ, ಇಬ್ಬರು ಗಂಡು ಮಕ್ಕಳಿಗೂ ಕೃಷಿಯಲ್ಲಿ ಆಸಕ್ತಿ ಇಲ್ಲ. ದೊಡ್ಡ ಮಗ ರಘುನಾಥ ಈ ಆಸ್ತಿಯ ಇನ್ನೊಂದು ಅಂಚಿನಲ್ಲಿ ಮನೆ ಕಟ್ಟಿ ಸಂಸಾರ ಹೂಡಿದ್ದಾರೆ. ಕೃಷಿ ಕಾರ್ಮಿಕನಾಗಿ ಬೇರೆ ಕಡೆ ದುಡಿತ. ಸಣ್ಣ ಮಗ ಬಾಲಕೃಷ್ಣನದು ಹೆತ್ತವರ ಜತೆ ವಾಸ. ಕೆಲಸ ಪುತ್ತೂರಿನ ಖಾಸಗಿ ಚಿಕಿತ್ಸಾಲಯದಲ್ಲಿ.

‘ಆಸ್ತಿಯನ್ನು ಯಾರಿಗಾದರೂ ಮಾರಬಾರದೇ ಎಂದು ಮಕ್ಕಳು ಕೇಳುತ್ತಿದ್ದಾರೆ. ಮಾರಲು ಕಷ್ಟವಿಲ್ಲ. ಆದರೆ ಬಿಡುನೀರಿನ (ಪಂಪಿನ ಬಾಳಕೆ ಇಲ್ಲದೆ ಗುರುತ್ವಾಕರ್ಷಣ ಶಕ್ತಿಯಿಂದ ನೀರಾವರಿ) ಇಂತಹ ಜಾಗ ಎಲ್ಲಾದರೂ ಕೊಂಡುಕೊಳ್ಳಲು ಸಿಕ್ಕೀತೇ? ಇಬ್ಬರು ಮಕ್ಕಳು ಇಲ್ಲೇ ಇದ್ದರೆ ಇದರಲ್ಲೇ ಜೀವನ ಸಾಗಿಸಬಹುದಿತ್ತು. ಪ್ರಯತ್ನಪಟ್ಟರೆ ನೀರು-ಆದಾಯ ಎರಡನ್ನೂ ಹೆಚ್ಚಿಸಲು ದಾರಿ ಇದೆ. ಮಾತ್ರವಲ್ಲ ಸುಸಜ್ಜಿತ ಮನೆ, ಮನೆಗೆ ರಸ್ತೆ, ಫೋನುಎಲ್ಲ ಸೌಕರ್ಯಗಳು ಇವೆ. ಬದುಕಲು ನಾನು ಪಟ್ಟಷ್ಟು ಪಾಡು ಅವರು ಪಡಬೇಕಿಲ್ಲ. ಆದರೆ ಕೃಷಿಯಲ್ಲಿ ಆಸಕ್ತಿಯೇ ಇಲ್ಲದಿದ್ದರೆ ಏನು ಮಾಡೋಣ?’ತಾವು ನೆಟ್ಟ ತೆಂಗಿನ ಮರಗಳ ತುದಿಗೇ ದೃಷ್ಟಿ ನೆಟ್ಟು ಪ್ರಶ್ನಿಸುವ ಮಹಾಲಿಂಗ ನಾಯ್ಕ ಒಂದು ನಿಮಿಷ ಮೌನವಾಗುತ್ತಾರೆ.

ಅಷ್ಟರಲ್ಲಿ ಬಾಲ ಆಡಿಸುತ್ತಾ,ಖುಷಿ ಸೂಸುತ್ತಾ ಅವರ ನೆಚ್ಚಿನ ನಾಯಿ ಬೊಳ್ಳುಹತ್ತಿರ ಬಂದು ನಿಲ್ಲುತ್ತದೆ. ನಂಬಿಕೆಯ ಬಂಟನನ್ನು ಕಂಡು ಮತ್ತೆ ಮನದ ಪೆಂಡುಲಮ್ ಉಮೇದಿನತ್ತ ವಾಲುತ್ತದೆ. ನಸುನಗುತ್ತಾ ‘ದಾಯ್ತ ಆವೊಡು ಮಾರಾಯಾ ?’ (ಏನು ಆಗಬೇಕು ಮಹರಾಯಾ ?) ಎಂದು ಕೇಳುತ್ತಾ ಬೊಳ್ಳುವಿನ ತಲೆ ನೇವರಿಸುತ್ತಾರೆ.

ಹಿಲ್‍ಟಾಪ್ ಮ್ಯಾನ್

`ಹಿಲ್‍ಟಾಪ್ ಮ್ಯಾನ್. ದಿಸ್ ಮ್ಯಾನ್ ಈಸ್ ಮೈ ಹೀರೋ. ತಾಂತ್ರಿಕ ತರಬೇತಿ ಇಲ್ಲದಿದ್ದರೂ ಸಾಮಾನ್ಯಜ್ಞಾನ ಬಳಸಿ ಜಾಗ ಗುರುತಿಸಿ ಸುರಂಗ ತೋಡಿ ಸ್ವಪ್ರಯತ್ನದಿಂದ ತೋಟ ಮಾಡಿ ಗೆದ್ದ ಏಕವ್ಯಕ್ತಿ ಸೈನ್ಯ’.

ದೂರದರ್ಶನಕ್ಕಾಗಿ ‘ವಾಟರ್ ವಾರಿಯರ್ಸ್’ ಎಂಬ ಸಾಕ್ಷ್ಯಚಿತ್ರಕ್ಕೆ ಚಿತ್ರಕತೆ ಬರೆದ ಬೆಲ್ಜಿಯಂ ತರುಣ ಕಾಕ್ಸ್ ಟೂನ್ ಮಹಾಲಿಂಗ ನಾಯ್ಕರನ್ನು ಚಿತ್ರದಲ್ಲಿ ಪರಿಚಯಿಸಿದ್ದು ಹೀಗೆ. ಅರ್ಧ ಗಂಟೆಯಲ್ಲಿ ಅಳವಡಿಸಿದ ಜಲಸಂರಕ್ಷಣೆಯ ಐದಾರು ಯಶೋಗಾಥೆಗಳಲ್ಲಿ ನಾಯ್ಕರದೂ ಒಂದು. ತಿಂಗಳುಗಳ ಹಿಂದೆ ಈ ಸಾಕ್ಷ್ಯಚಿತ್ರ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದೆ.

ನಾಯ್ಕರ ಜಮೀನಿನ ಆಚೀಚೆಯ ಗುಡ್ಡ ಇವತ್ತಿಗೂ ಅನುತ್ಪಾದಕವಾಗಿ ಉಳಿದಿದೆ. ಈ ಪ್ರದೇಶ ಹಿಂದೆ ಹೇಗಿತ್ತು ಎಂಬ ಕಲ್ಪನೆ ಕೊಡುತ್ತಿದೆ. ಇವರ ತೋಟದ ಸಾಕಷ್ಟು ಕೆಳಭಾಗದವರೆಗೂ ಕೃಷಿಯೇ ನಡೆದಿಲ್ಲ. ಕೃಷಿ ಕಾಣಬೇಕಾದರೆ ಗುಡ್ಡಗಳ ನಡುವಿನ ಕಣಿವೆಗೆ ಇಳಿಯಬೇಕು.

ನಾಯ್ಕರ ನಾಯಕ

ನಾಯ್ಕರ ಜಗತ್ತಿನ ಈಗಿನ ನಾಯಕ ಬೊಳ್ಳು. ಮರಿ ಆಗಿದ್ದಾಗಲೇ ತಂದ ನಾಯಿ. ನಾಯಿಗಳು ದಿನಪತ್ರಿಕೆ ತಂದು ಕೊಡುವುದು, ಅಂಧ ದನಿಯನ್ನು ರಸ್ತೆ ದಾಟಿಸುವುದು ಇತ್ಯಾದಿ ಕೇಳಿ ಗೊತ್ತಿತ್ತು. ‘ಸೊಂಟನೋವಿಂದಾಗಿ ನನಗೆ ಹೇಗೂ ಮೈ ಬಾಗಿಸಿ ತೋಟದಿಂದ ಅಡಿಕೆ ಹೆಕ್ಕಲು ಆಗುವುದಿಲ್ಲ. ಒಂದು ವೇಳೆ ಬೊಳ್ಳು ಈ ಕೆಲಸ ಮಾಡಿದರೆ ಎಷ್ಟು ಉಪಕಾರ’ ಅನಿಸಿತ್ತಂತೆ ಇವರಿಗೆ.

ಯೋಚನೆ ಬಂದದ್ದೇ ತಡ, ಬೊಳ್ಳುವನ್ನು ತೋಟಕ್ಕೊಯ್ದರು. ಬಿದ್ದಿದ್ದ ಹಣ್ಣಡಿಕೆ ತೋರಿಸಿದರು. ತುಳುವಿನಲ್ಲಿ ‘ಹೆಕ್ಕು, ಈ ಬಾಲ್ದಿಯಲ್ಲಿ ಹಾಕು’ ಎಂದರು. ನಾಯಿಗೆ ತರಬೇತಿ ಕೊಡುವ ಶಾಸ್ತ್ರೀಯ ಕ್ರಮ ಇವರಿಗೆ ತಿಳಿಯದು. ಅಪ್ಪನಿಂದಲೋ, ಅಮ್ಮನಿಂದಲೋ, ಬುದ್ಧಿ ಬರಬಹುದಾದ ವಂಶ ಹಿರಿಮೆಯ ಜಾತಿ ಬೊಳ್ಳುವಿನದಲ್ಲ. ಅದು ಯಕಃಶ್ಚಿತ್ ‘ಕಾಟು’ (ಸ್ಥಳೀಯ ಜಾತಿಯ) ನಾಯಿ.

ಆದರೆ ಆಶ್ಚರ್ಯ, ‘ತರಬೇತಿ’ಗೆ ಹೆಚ್ಚು ಶ್ರಮವೇಬೇಕಾಗಲಿಲ್ಲ! ಹತ್ತು ಹದಿನೈದು ದಿನಗಳಲ್ಲೇ ಬೊಳ್ಳು ಚೆನ್ನಾಗಿಯೇ ಕೆಲಸ ನಿರ್ವಹಿಸತೊಡಗಿತು. ಬಾಲ್ದಿ ಹಿಡಿದು ಇವರು ಅದನ್ನುಸರಪಳಿಯಲ್ಲೇ ಕೊಂಡೊಯ್ದರೆ ಸಾಕು. ಕಳೆದೆರಡು ವರ್ಷಗಳಿಂದ ಕೊಯ್ಲಿನ ಸಮಯ ಬಿಟ್ಟು ಉಳಿದೆಲ್ಲಾ ಕಾಲ ತೋಟದ ಅಡಿಕೆ ಹೆಕ್ಕಿ ಕೊಟ್ಟದ್ದು ಬೊಳ್ಳುವೇ. ಅಡಿಕೆ ಮಾತ್ರವಲ್ಲ, ಗೇರುಬೀಜ, ಕೂಂಬಾಳೆಗಳನ್ನೂ ಅದು ಹೆಕ್ಕಿ ಬಾಲ್ದಿಗೆ ಹಾಕುತ್ತದೆ. ‘ಹೇಳಿದ ಮಾತೆಲ್ಲಾ ಬೊಳ್ಳುವಿಗೆ ಅರ್ಥವಾಗುತ್ತದೆ’ಎಂದು ಈ ಮನೆಯವರು ಹೆಮ್ಮೆಯಿಂದ ಹೇಳುತ್ತಾರೆ.

ನಂಬಿದರೆ ನಂಬಿ, ಈಗ ಅದು ತೆಂಗಿನಕಾಯಿಗಳನ್ನೂ ಹೆಕ್ಕಿಕೊಡುತ್ತಿದೆ. ಆದರೆ ಯಾವ ಕೆಲಸ ಮಾಡಿಸಲೂ ಜತೆಗೆ ಸರಪಳಿ ಹಿಡಿದುಕೊಂಡು ನಾಯ್ಕರೇ ಬರಬೇಕು. ಮೊಮ್ಮಗಳು ವಿದ್ಯಾಲಕ್ಷ್ಮಿಯ ಆದೇಶಕ್ಕೆ ಈ ಬೆಲೆ ಸಿಗುವುದಿಲ್ಲ!

ಬೊಳ್ಳುವಿಗೆ ವಯಸ್ಸು ಇನ್ನೂ ಎರಡು. ಹರಸಾಹಸಪಟ್ಟು ಪುಟ್ಟ ದವಡೆಗಳೆಡೆ ತೆಂಗಿನಕಾಯಿ ಕಚ್ಚಿ ಒಯ್ಯುವುದು ಕಂಡಾಗ ಯಾರಿಗೂ ಅಭಿಮಾನ ಎನಿಸೀತು. ಬೆಳೆದ ಬೆಳೆಯನ್ನು ಬಾಗಿ ಶೇಖರಿಸಲಾಗದ ಯಜಮಾನನಿಗಾಗಿ ಅದು ಈ ಕೆಲಸ ಮಾಡುತ್ತಿದೆ. ಅದಕ್ಕೇ ಅದು ನಾಯ್ಕರ ನಾಯಕ!

ಮನೆಗೇ ನೀರು ತರುವ ಗುಹೆ: ಸುರಂಗ

ಕಾಸರಗೋಡು ಜಿಲ್ಲೆ ಮತ್ತು ನೆರೆಯ ಪ್ರದೇಶಗಳಲ್ಲಿ ನೀರಿಗಾಗಿ ತೋಡುವ ಗುಹೆಯೇ ಸುರಂಗ. ಸಾಮಾನ್ಯವಾಗಿ ಸುರಂಗಗಳು 20-30 ಮೀಟರ್‌ನಿಂದನೂರು ಮೀಟರಿನ ಆಸುಪಾಸಿನಲ್ಲೂ ಇರುವುದಿದೆ. ಹದ ಗಟ್ಟಿಯಾಗಿರುವ ಜಂಬಿಟ್ಟಿಗೆ (ಲ್ಯಾಟರೈಟ್, ಮುರ) ಮಣ್ಣಿನಲ್ಲಿ ಮಾತ್ರ ಈ ರಚನೆ ಸಾಧ್ಯ. ಗುಡ್ಡಕ್ಕೆ ಅಡ್ಡಲಾಗಿ, ಒಳಹೋದಂತೆಲ್ಲಾ ಸ್ವಲ್ಪವೇ ಸ್ವಲ್ಪ ಏರು ಸಿಗುವಂತೆ ಅಗೆಯುತ್ತಾ ಹೋಗುತ್ತಾರೆ.

ಸದಾಕಾಲ ಹರಿದು ಬರುವ ತಾಜಾ ನೀರು.ವಿಶೇಷ ಅಂದರೆ ಸಿಕ್ಕಿದ ನೀರು ತನ್ನಿಂದ ತಾನೇ ಹರಿದು ಹೊರಬರುತ್ತದೆ. ಪಂಪು ಬೇಕಿಲ್ಲ. ಸುರಂಗದ ನೀರನ್ನೇ ಕುಡಿಯುವ, ಬಾವಿಗಳಿಲ್ಲದ ಮನೆಗಳು ನೂರಾರು ಇವೆ.

ಗುಡ್ಡಗಳ ಮೇಲ್ತುದಿಯಲ್ಲಿರುವ ಬಡಜನರಿಗೆ ಸುರಂಗ ಒಂದು ವರ. ಬೇರೆ ಯಾವ ರೀತಿಯ ಜಲಮೂಲವನ್ನು ಇಲ್ಲಿ ರಚಿಸುವುದು ಕಷ್ಟ. ಖರ್ಚೂ ಅತ್ಯಧಿಕ. ಉತ್ಸಾಹ, ಕೌಶಲ ಇದ್ದರೆ ಕಿಸೆಯಿಂದ ಖರ್ಚು ಮಾಡದೆ, ತಾವೇ ಮಾಡಿಕೊಳ್ಳಬಹುದು. ಮಹಾಲಿಂಗ ನಾಯ್ಕರರಿಗೆ, ಕುಡಿಯಲು, ಗೃಹಬಳಕೆಗೆ, ತೋಟಕ್ಕೆ ನೀರಾವರಿಗೂ ಸುರಂಗದ್ದೇ ‘ಬಿಡು ನೀರು.’

ಗುಡ್ಡದ ಅಡ್ಡಲಾಗಿ ಮಾತ್ರವಲ್ಲ ತೋಡಿದ ಕೆರೆ-ಬಾವಿಗಳಲ್ಲಿ ನೀರುಸಿಕ್ಕಿದ್ದು ಕಡಿಮೆಯಾದರೆ ಅದರ ಒಳಗಿನಿಂದ ಮತ್ತೆ ಸುರಂಗ ತೋಡುವುದಿದೆ. ಈ ಸಾಂಪ್ರದಾಯಿಕ ವಿದ್ಯೆ ಈಗ ಬಹುತೇಕ ಕಣ್ಮರೆಯಾಗಹತ್ತಿದೆ.

‘ಬರ್ಸದ ನೀರ್ ಉಂತಾಂಡ’

ವಾರಣಾಸಿಪ್ರಶಸ್ತಿಗೆ ಆಯ್ಕೆಯಾದಾಗ ಮಹಾಲಿಂಗ ನಾಯ್ಕರಿಗೆ ಮುಜುಗರ. ಆವರೆಗೆ ಸಭೆಯನ್ನುದ್ದೇಶಿಸಿ ಮಾತಾಡಿದ ಅನುಭವ ಇರಲಿಲ್ಲ. ‘ಭಾಗವಹಿಸುತ್ತೇನೆ, ಆದರೆ ಭಾಷಣ ಮಾಡಲು ನನ್ನಿಂದಾಗದು’ಎಂದಿದ್ದರು. ‘ಪರವಾಗಿಲ್ಲ’ ಅಂತ ಸಂಘಟಕರೂ ಒಪ್ಪಿಕೊಂಡಿದ್ದರು.

ಪ್ರಶಸ್ತಿ ಪ್ರದಾನ ಆದ ನಂತರ ನಾಯ್ಕರ ದೇಹಭಾಷೆ ನೋಡಿದರೆ ವಿನಂತಿಸಿದರೆ ಎರಡು ಮಾತು ಆಡಬಹುದು ಅನ್ನುವಂತಿತ್ತು. ಕೇಳಿದರೆ, ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತೆ ‘ರಡ್ಡ್ ಪಾತೆರ ಪಣ್ಪೆ’ (ಎರಡು ಮಾತು ಹೇಳ್ತೇನೆ) ಎಂದರು.

ಎದ್ದು ನಿಂತು ‘ಬರ್ಸದ ನೀರು ಉಂತಾಂಡ ನಂಕ್ ಬರ ಬರಾಂದ್’ (ಮಳೆನೀರನ್ನು ತಡೆದು ನಿಲ್ಲಿಸಿದರೆ ನಮಗೆ ಬರದ ಬಾಧೆ ಬರಲಾರದು) ಎಂದರು. ಸಭಿಕರು ನಗುನಗುತ್ತಾ ಭಾರೀ ಚಪ್ಪಾಳೆ ಹೊಡೆದರು. ಸಭಿಕರ ನಗು ಕಂಡು ನಾಯ್ಕರಿಗೆ ಹೇಳಿದ್ದು ಹೆಚ್ಚುಕಡಮೆ ಆಯಿತೇನೋ ಅನಿಸಿರಬೇಕು. ಮುಂದುವರಿಸಿ ‘ನಾನು ಮಾಡಿ ನೋಡಿರುವ ಕಾರಣ ಹೀಗೆ ಹೇಳಿದೆ’ ಅಂದರು.

ಇದಾದ ನಂತರ ಎರಡು ಮೂರು ಸಭೆಗಳಲ್ಲಿ ನಾಯ್ಕರು ತನ್ನ ಕೃಷಿ ಅನುಭವಗಳ ಬಗ್ಗೆ ಭಾಷಣ ಮಾಡಿದ್ದಾರೆ. ದೂರದರ್ಶನಕ್ಕಾಗಿ ಚಿತ್ರೀಕರಣ ಮಾಡುವಾಗ ನಿರ್ಮಾಪಕರು ಮುಗಿಸುವಂತೆ ಕೈಸನ್ನೆ ಮಾಡಿದರೂ ಇವರ ಮಾತು ಮುಂದುವರಿದಿತ್ತು!

ಉರುವೆ ಹುಟ್ಟಿದ ಅಡಿಕೆ

ಉದುರಿದ ಹಣ್ಣಡಿಕೆ ಕಣ್ಣಿಗೆಕಾಣದೆ ಹುಟ್ಟಿ ಗಿಡವಾದದ್ದನ್ನು ಸ್ಥಳೀಯವಾಗಿ ‘ಉರುವೆ ಹುಟ್ಟಿದ ಗಿಡ’ ಎನ್ನುತ್ತಾರೆ. ನಾಯ್ಕರ ಒಂದು ತಟ್ಟಿನ ಅಡಿಕೆ ಗಿಡ - ಸುಮಾರು 70 - ಬೀಜ ಆಯ್ದು ಮಾಡಿದ್ದಲ್ಲ. ಅಡಿಕೆ ಕೊಯ್ಯಲು ಹೋದ ಬೇರೆಬೇರೆ ತೋಟಗಳಿಂದ ತಂದವು.

ಉಳಿದ ತಟ್ಟುಗಳಲ್ಲಿ ಆಯ್ದ ಬೀಜದಿಂದ ಮಾಡಿದ ಗಿಡಗಳಿವೆ. ಇವುಗಳ ಉತ್ಪಾದನೆಯಲ್ಲಿ ಹೇಳುವಂತಹ ವ್ಯತ್ಯಾಸ ಕಾಣುತ್ತಿಲ್ಲವಂತೆ !

ವಿಳಾಸ:ಮಹಾಲಿಂಗ ನಾಯ್ಕ,ಅಮೈ,ಅಂಚೆ–ಅಡ್ಯನಡ್ಕ,ಬಂಟ್ವಾಳ ತಾಲೂಕು,ದಕ್ಷಿಣ ಕನ್ನಡ ಜಿಲ್ಲೆ, 574 260. ದೂ– 08255270140.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT