ಸೋಮವಾರ, ಡಿಸೆಂಬರ್ 5, 2022
21 °C
ಮಸೀದಿ ಜಾಗದಲ್ಲಿ ಭವ್ಯ ಮಂದಿರ ಕಟ್ಟುತ್ತೇವೆ: ಶರಣ್‌ ಪಂಪ್‌ವೆಲ್‌

ಮಳಲಿ ಮಸೀದಿ: ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ ವಿಎಚ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಮಳಲಿ ಮಸೀದಿಯಲ್ಲಿ ದೇವಸ್ಥಾನವನ್ನು ಹೋಲುವ ಆಕೃತಿಗಳು ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿ ಮೂರನೇ ಹೆಚ್ಚುವರಿ ನ್ಯಾಯಾಧೀಶರು ಮತ್ತು ಜೆಎಂಎಫ್‌ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಾರ್ಹ’ ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶರಣ್‌ ಪಂಪ್‌ವೆಲ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಕಟ್ಟಡಕ್ಕೆ ಸಂಬಂಧಿಸಿದಂತೆ ಮಳಲಿ ಮಸೀದಿಯ ಆಡಳಿತ ಮಂಡಳಿಯ ಎರಡೂ ಮಧ್ಯಂತರ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಕಟ್ಟಡಕ್ಕೆ ಸಂಬಂಧಿಸಿ ಹಿಂದೂಗಳ ನಂಬಿಕೆಗೆ ಸಿಕ್ಕ ಮೊದಲ ಹಂತದ ಜಯ ಇದು. ನಾವು ಇಲ್ಲಿ ಭವ್ಯವಾದ ಮಂದಿರವನ್ನು ಕಟ್ಟುತ್ತೇವೆ’ ಎಂದು ಅವರು ತಿಳಿಸಿದರು.

‘ಮಸೀದಿಯ ಆಡಳಿತ ಮಂಡಳಿಯವರು ಸಂಘರ್ಷಕ್ಕೆ ಅವಕಾಶ ಕಲ್ಪಿಸದೇ ಈ ಜಾಗವನ್ನು ದೇವಸ್ಥಾನ ಕಟ್ಟಲು ಹಿಂದೂಗಳಿಗೆ ಬಿಟ್ಟುಕೊಡಬೇಕು. ಇದಕ್ಕೆ ಒಪ್ಪದೇ ಇದ್ದರೆ ಹೋರಾಟ ಮುಂದುವರಿಸಬೇಕಾಗುತ್ತದೆ’ ಎಂದರು.

ಈ ಪ್ರಕರಣದ ಅಂತಿಮ ತೀರ್ಪು ಬರುವ ಮುನ್ನವೇ ಈ ತೀರ್ಮಾನಕ್ಕೆ ಬರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘2022ರ ಏಪ್ರಿಲ್ 19ರಂದು ಮಳಲಿ ಜುಮ್ಮಾ ಮಸೀದಿಯನ್ನು ತೆರವುಗೊಳಿಸುವಾಗ ದೇವಸ್ಥಾನವನ್ನು ಹೋಲುವ ಆಕೃತಿಗಳು ಪತ್ತೆಯಾಗಿದ್ದವು. ಅಲ್ಲಿ ದೇವಸ್ಥಾನ ಇತ್ತು ಎಂಬ ಅಂಶ ಬೆಳಕಿಗೆ ಬರುತ್ತಲೇ ನಾವು ಈ ಕಟ್ಟಡ ಕೆಡಹುವುದನ್ನು ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೆವು. ಈ ಕಟ್ಟಡ 800 ವರ್ಷಗಳಷ್ಟು ಹಳೆಯದು ಎಂಬುದನ್ನು ಮಸೀದಿಯ ಆಡಳಿತ ಮಂಡಳಿಯವರೂ ಒಪ್ಪಿಕೊಂಡಿದ್ದಾರೆ. ಇಲ್ಲಿ ಶಿವನ ದೇವಾಲಯ ಇತ್ತು ಎಂಬುದಕ್ಕೆ ನಮ್ಮ ಬಳಿಯೂ ಪುರಾವೆಗಳಿವೆ. ಇನ್ನಷ್ಟು ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಇವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದರು. 

‘ಈ ಬಗ್ಗೆ ಹೆಚ್ಚಿನ ಪುರಾವೆ ಕಲೆ ಹಾಕಲು ನ್ಯಾಯಾಲಯವು ಕಮಿಷನರ್‌ ಅವರನ್ನು ನಿಯೋಜಿಸಬೇಕು. ಜಿಲ್ಲಾಡಳಿತಕ್ಕೂ ಈ ವಿಚಾರದಲ್ಲಿ ಜವಾಬ್ದಾರಿ ಇದೆ. ಅವರು ಪುರಾತತ್ವ ಇಲಾಖೆಯಿಂದ ಸರ್ವೆ ಮಾಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಇಲ್ಲಿ ಶಿವನ ಸಾನ್ನಿಧ್ಯ ಇತ್ತು. ಇಲ್ಲಿ ದೇವಸ್ಥಾನವನ್ನು ಕಟ್ಟಿಸದಿದ್ದರೆ ಊರಿಗೂ ತೊಂದರೆ ಇದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಇಲ್ಲಿ ಪುರಾತನ ದೇವಸ್ಥಾನ ಇತ್ತು. ಆ ಕಟ್ಟಡದ ಎದುರು ನಿಂತು ಕೈಮುಗಿಯುತ್ತಿದ್ದೆವು ಎಂದು ಸ್ಥಳೀಯ ಹಿರಿಯರನೇಕರು ತಿಳಿಸಿದ್ದಾರೆ. ಇಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಿ ಇನ್ನಷ್ಟು ಆಳವಾಗಿ ಮಾಹಿತಿ ಕಲೆ ಹಾಕುತ್ತೇವೆ. ನ್ಯಾಯಾಲಯದಲ್ಲೂ ನಮ್ಮ ಪರವಾಗಿಯೇ ತೀರ್ಪು ಬರುತ್ತದೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್‌ ಕುತ್ತಾರ್‌, ಬಜರಂಗ ದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್‌ ಹಾಗೂ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ಇದ್ದರು.  

‘ಜಾರಕಿಹೊಳಿಗೆ ಜನರೇ ಪಾಠ ಕಲಿಸುತ್ತಾರೆ’

ಹಿಂದೂ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಎಲ್ಲ ಹಿಂದೂಗಳೂ ಖಂಡಿಸಿದ್ದಾರೆ. ಈ ಹೇಳಿಕೆ ಅವರ ರಾಜಕೀಯ ಜೀವನಕ್ಕೆ ಶೋಭೆ ತರುವಂತಹದ್ದಲ್ಲ. ಅವರಿಗೆ ಜನರೇ ಪಾಠ ಕಲಿಸುತ್ತಾರೆ’ ಎಂದು ಶರಣ್‌ ಪಂಪ್‌ವೆಲ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು