ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಲಿ ಮಸೀದಿ: ತೀರ್ಪಿನ ವಿರುದ್ಧ ಮೇಲ್ಮನವಿ

ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ನಿರ್ಧಾರ
Last Updated 9 ನವೆಂಬರ್ 2022, 15:54 IST
ಅಕ್ಷರ ಗಾತ್ರ

ಮಂಗಳೂರು: ಮಳಲಿ ಪೇಟೆಯ ಜುಮ್ಮಾ ಮಸೀದಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ಮತ್ತು ಜೆಎಂಎಫ್‌ ನ್ಯಾಯಾಲಯವು ಬುಧವಾರ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಮುಂದಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ‘ವಕ್ಫ್‌ ಕಾಯ್ದೆಯ ಪ್ರಕಾರ ವಕ್ಫ್‌ಗೆ ಸಂಬಂಧಿಸಿದ ಯಾವುದೇ ವಿವಾದ, ವಿಚಾರ, ಸಮಸ್ಯೆ ಅಥವಾ ಇತರ ವ್ಯಾಜ್ಯಗಳ ಬಗ್ಗೆ ಸಿವಿಲ್, ಕಂದಾಯ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರಗಳು ವಿಚಾರಣೆ ನಡೆಸುವಂತಿಲ್ಲ. ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯವೂ ವಿಚಾರಣೆ ನಡೆಸಬಹುದು ಎಂದು ತೀರ್ಪು ಬಂದಿರುವುದು ಅಚ್ಚರಿ ತಂದಿದೆ. ಈ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸಲಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವೂ ಇದೆ. ಕಾನೂನು ಪರಿಣಿತರ ಸಲಹೆ ಪಡೆದು ಮತ್ತು ರಾಜ್ಯ ವಕ್ಫ್‌ ಮಂಡಳಿ ಜೊತೆ ಚರ್ಚೆ ಮಾಡಿ ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದರು.

‘ವಕ್ಫ್ ಸ್ವತ್ತುಗಳಿಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಲಯದಲ್ಲಿ ಕಲಾಪ ನಡೆಸಬಹುದೇ ಇಲ್ಲವೇ ಎಂಬ ಬಗ್ಗೆ ಮಾತ್ರ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಮಯ ಸಂದೇಶಗಳು ಹರಿದಾಡುತ್ತಿವೆ. ಮಳಲಿ ಮಸೀದಿಗೆ ಸುಮಾರು 500 ವರ್ಷಗಳ ಇತಿಹಾಸವಿದೆ. 2003ರಲ್ಲಿ ವಕ್ಫ್‌ ಮಂಡಳಿಯಲ್ಲಿ ಈ ಮಸೀದಿ ನೋಂದಣಿಯಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಅಧಿಕಾರಿ ಮೌಜಮ್ ಪಾಷಾ, ಮಳಲಿ ಮಸೀದಿಯ ಅಧ್ಯಕ್ಷ ಮುಹಮ್ಮದ್, ಉಪಾಧ್ಯಕ್ಷ ಎಂ.ಎ.ಅಬೂಬಕರ್, ಮಸೀದಿ ನವೀಕರಣ ಸಮಿತಿಯ ಖಜಾಂಚಿಯ ಮೊಯ್ದಿನ್, ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಕೆ.ಅಶ್ರಫ್, ವಕ್ಫ್‌ ಸಲಹಾ ಸಮಿತಿಯ ಸದಸ್ಯರಾದ ಅಶ್ರಫ್ ಕಿನಾರ, ಸೈದುದ್ದೀನ್‌ ಬಜ್ಪೆ, ಹನೀಫ್ ಮಲ್ಲೂರು, ಮುಸ್ತಫಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT