ಬದಿಯಡ್ಕ (ಕಾಸರಗೋಡು): ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡೂರು ಗ್ರಾಮದ ಗೋರಿಗದ್ದೆ ಅಂಗನವಾಡಿಗೆ ಕನ್ನಡ ಮಾತೃಭಾಷೆಯ ಮಕ್ಕಳಿಗೆ ಶಿಕ್ಷಣ ನೀಡಲು ಮಲಯಾಳಿ ಶಿಕ್ಷಕಿಯನ್ನು ನೇಮಿಸಿದ್ದು, ಆಕ್ಷೇಪ ವ್ಯಕ್ತವಾಗಿದೆ.
ಗಡಿ ಪ್ರದೇಶದ ಅಂಗನವಾಡಿಯಲ್ಲಿ ಪ್ರಾದೇಶಿಕವಾದ ಎರಡು ಭಾಷೆ ತಿಳಿದವರನ್ನೇ ಶಿಕ್ಷಕಿಯಾಗಿ ನೇಮಕ ಮಾಡಬೇಕು ಎಂಬ ನಿಯಮವಿದೆ. ಗೋರಿಗದ್ದೆ ಅಂಗನವಾಡಿಯಲ್ಲಿ 16 ಮಂದಿ ಮಕ್ಕಳಲ್ಲಿ 14 ಮಂದಿ ಕನ್ನಡಿಗರು. ಆದರೂ ಕನ್ನಡ ತಿಳಿಯದ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ.
ಈಗ ತಾತ್ಕಾಲಿಕವಾಗಿ ನೇಮಕಾತಿ ಆಗಿದ್ದರೂ, ಮುಂದೆ ಕಾಯಂ ಮಾಡುವ ಹುನ್ನಾರ ಎಂದು ಪೋಷಕರು ದೂರಿದ್ದಾರೆ.
ಕಳೆದ ವರ್ಷ ಇದೇ ಪಂಚಾಯಿತಿಯ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ಕನ್ನಡ ಮಕ್ಕಳಿಗೆ ಸಮಾಜ ವಿಜ್ಞಾನ ಬೋಧಿಸಲು ಕನ್ನಡ ಸರಿಯಾಗಿ ತಿಳಿಯದ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು. ನಂತರ ಹೈಕೋರ್ಟ್ ತೀರ್ಪು ಕನ್ನಡ ವಿದ್ಯಾರ್ಥಿಗಳ ಪರವಾಗಿ ಬಂದಿತ್ತು.
ಇದೀಗ ಅಂಗನವಾಡಿಯ ಹಂತದಿಂದಲೇ ಈ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ‘ಕನ್ನಡ ಪೋಷಕಿ’ ನಯನಾ ಗಿರೀಶ್ ಆರೋಪಿಸಿದ್ದಾರೆ.