ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಫುಟ್‌ಪಾತ್‌ನಲ್ಲಿ ತ್ಯಾಜ್ಯ: ₹ 4 ಸಾವಿರ ದಂಡ

ನಗರಸೌಂದರ್ಯಕ್ಕೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ; ಜಾಗೃತಿ
Published 23 ಆಗಸ್ಟ್ 2023, 14:34 IST
Last Updated 23 ಆಗಸ್ಟ್ 2023, 14:34 IST
ಅಕ್ಷರ ಗಾತ್ರ

ಮಂಗಳೂರು: ಕಟ್ಟಡದ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿದ ವ್ಯಕ್ತಿಯೊಬ್ಬರಿಗೆ ಮಂಗಳೂರು ಮಹಾನಗರ ಪಾಲಿಕೆ ₹ 4 ಸಾವಿರ ದಂಡ ವಿಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಉರ್ವದ ಮಣ್ಣಗುಡ್ಡದಲ್ಲಿರುವ ಕೆನರಾ ಹೈಸ್ಕೂಲ್ ಸಮೀಪದ ಲಕ್ಷ್ಮಿ ಸದನದ ಮುಂಭಾಗದ ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬರು ಕಟ್ಟಡದ ತ್ಯಾಜ್ಯವನ್ನು ಗೋಣಿ ಚೀಲಗಳಲ್ಲಿ ತೆಗೆದುಕೊಂಡು ಬಂದು ಇರಿಸಿದ್ದರು. 20ಕ್ಕೂ ಹೆಚ್ಚು ಗೋಣಿಚೀಲಗಳು ಅಲ್ಲಿದ್ದವು. ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತ್ಯಾಜ್ಯವನ್ನು ಸಾಗಿಸಲು ಸೂಚಿಸಿದ್ದರು. ಅಲ್ಲಿ ತಂದಿರಿಸಿದ್ದ ವ್ಯಕ್ತಿಗೆ ದಂಡವನ್ನೂ ಹಾಕಿದರು.

ನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿಯ ಕಂಡಕಂಡಲ್ಲಿ ಹಸಿ ಮತ್ತು ಒಣ ಕಸ, ಕಟ್ಟಡದ ತ್ಯಾಜ್ಯವನ್ನು ಸುರಿಯುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಕೆಲವು ಕಡೆಗಳಲ್ಲಿ ತ್ಯಾಜ್ಯದ್ದೇ ಸಣ್ಣ ರಾಶಿ ಉಂಟಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸ್ವಚ್ಛತಾ ಕಾರ್ಯಕ್ಕೂ ಇದೊಂದು ಸವಾಲಾಗಿ ಪರಿಣಮಿಸಿದೆ. ಇಂಥ ಕೃತ್ಯಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಪಾಲಿಕೆ ಮುಂದಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅನಧಿಕೃತ ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮತ್ತು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಇಂಥ ಕ್ರಮದ ಭಾಗವಾಗಿ ಮಣ್ಣಗುಡ್ಡ ಪ್ರದೇಶದಲ್ಲಿ ತ್ಯಾಜ್ಯ ಸುರಿದವರಿಗೆ ದಂಡ ವಿಧಿಸಲಾಗಿದೆ. ಇಲ್ಲಿ ಘನತ್ಯಾಜ್ಯ ನಿರ್ವಹಣೆಯ ಉಪವಿಧಿಯ ಸ್ಪಷ್ಟ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT