ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 21 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ

ಶಂಕಿತ ಕೋವಿಡ್‌–19 ಲಕ್ಷಣಗಳುಳ್ಳ 12 ಮಂದಿ ನಿಗಾ ಕೇಂದ್ರಕ್ಕೆ
Last Updated 29 ಏಪ್ರಿಲ್ 2020, 17:02 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 21 ಜನರಲ್ಲಿ ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ) ಕಾಣಿಸಿಕೊಂಡಿದ್ದು, ಎಲ್ಲರನ್ನೂ ಕೋವಿಡ್‌–19 ಸೋಂಕು ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಉಸಿರಾಟದ ತೀವ್ರ ತೊಂದರೆ ಮತ್ತು ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಳ್ಳುವುದು ಕೂಡ ಕೋವಿಡ್‌–19 ಲಕ್ಷಣಗಳಲ್ಲಿ ಸೇರಿದೆ. ಈ ಕಾರಣದಿಂದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ಈ ಲಕ್ಷಣಗಳುಳ್ಳ ರೋಗಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಬುಧವಾರ ಜಿಲ್ಲೆಯ ವಿವಿಧೆಡೆ 21 ಜನರು ‘ಎಸ್‌ಎಆರ್‌ಐ’ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

‘ಬುಧವಾರ 70 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೋವಿಡ್‌–19 ಸೋಂಕಿನ ಶಂಕಿತ ಲಕ್ಷಣಗಳು ಕಂಡುಬಂದಿರುವ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

390 ವರದಿ ನೆಗೆಟಿವ್‌:390 ಜನರ ಗಂಟಲಿನ ದ್ರವದ ಮಾದರಿಗಳ ಪರೀಕ್ಷಾ ವರದಿ ಬುಧವಾರ ಲಭಿಸಿದೆ. ಎಲ್ಲ ವರದಿಗಳೂ ನೆಗೆಟಿವ್‌ ಆಗಿವೆ. ಬುಧವಾರ ಹೊಸದಾಗಿ 248 ಜನರ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಒಟ್ಟು 394 ಮಾದರಿಗಳ ವರದಿಗಳು ಬರಬೇಕಿದೆ.

ಜಿಲ್ಲೆಯಲ್ಲಿ ಈವರೆಗೆ 2,841 ಜನರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. 2,447 ಮಾದರಿಗಳ ವರದಿಗಳು ಬಂದಿವೆ. 2,426 ಜನರಲ್ಲಿ ಸೋಂಕು ಪತ್ತೆಯಾಗಿಲ್ಲ. 21 ಜನರಲ್ಲಿ ಮಾತ್ರ ಸೋಂಕು ಕಂಡುಬಂದಿದೆ. ಈ ಪೈಕಿ 15 ಜನರು ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳು. ನಾಲ್ವರು ನೆರೆಯ ಕೇರಳ ರಾಜ್ಯದವರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಉಡುಪಿ ಜಿಲ್ಲೆಯ ತಲಾ ಒಬ್ಬರಿಗೆ ಮಂಗಳೂರಿನಲ್ಲೇ ಚಿಕಿತ್ಸೆ ನೀಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 39,632 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ 1,859 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಜ್ವರ ಸಂಬಂಧಿ ರೋಗಿಗಳ ಪತ್ತೆಗಾಗಿ ಈವರೆಗೆ 2,82,101 ಮನೆಗಳ ತಪಾಸಣೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ರೋಗಿ ಸ್ಥಿತಿ ಗಂಭೀರ:ಕೋವಿಡ್‌–19 ಸೋಂಕಿನಿಂದ ಬಳಲುತ್ತಿರುವ ಬಂಟ್ವಾಳ ತಾಲ್ಲೂಕಿನ ಕಸಬಾ ನಿವಾಸಿ (ಪಿ–409) 67 ವರ್ಷದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್‌ ಅಳವಡಿಸಲಾಗಿದೆ. ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT