ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ₹500ರ ಗಡಿಯತ್ತ ಕೆ.ಜಿ. ಅಡಿಕೆ ಬೆಲೆ; ಅಡಿಕೆ ಬೆಳೆಗಾರರಲ್ಲಿ ಹರ್ಷ

Published 11 ಆಗಸ್ಟ್ 2023, 0:30 IST
Last Updated 11 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ 3 ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿದ್ದು, ₹500ರ ಗಡಿ ಸಮೀಪಿಸುತ್ತಿದೆ. ಉತ್ತಮ ದರ ಸಿಗುತ್ತಿರುವ ಕಾರಣ ಬೆಳೆಗಾರರು ಮಂದಹಾಸ ಬೀರುತ್ತಿದ್ದಾರೆ. ಪ್ರಸ್ತುತ ಮಂಗಳೂರು ಚಾಲಿ ಹೊಸ ಅಡಿಕೆ ದರ ಕೆ.ಜಿ.ಗೆ ₹447 ಇದ್ದು, ಹಳೆ ಅಡಿಕೆ ಧಾರಣೆ ಕೆ.ಜಿ.ಗೆ ₹485ರಿಂದ ₹487 ಇದೆ.

3 ತಿಂಗಳಿನಿಂದ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇದೆ. ಕಳೆದ ಬಾರಿ ಕೆ.ಜಿ.ಗೆ ₹370 ಇದ್ದ ದರ ಪ್ರಸ್ತುತ ₹487ಇದ್ದು, ₹80 ಏರಿಕೆ ಕಂಡಿದೆ. ಅಡಿಕೆಗೆ ಭಾರಿ ಬೇಡಿಕೆಯಿದ್ದು, ದರ ಹೆಚ್ಚಿರುವ ಕಾರಣ ಅಡಿಕೆ ವರ್ತಕರು, ಕ್ಯಾಂಪ್ಕೊ, ಎಪಿಎಂಸಿಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಇನ್ನುಳಿದಂತೆ ಪಟೋರ ಅಡಿಕೆ ಕೆ.ಜಿ.ಗೆ ₹400 ದರ ಇದ್ದು, ಕರಿಗೋಟು ದರ ಕೆ.ಜಿ.ಗೆ ₹340, ಚೆಪ್ಪುಗೋಟು ₹325–₹330 ಇದೆ.

ಕ್ಯಾಂಪ್ಕೊದಲ್ಲಿ ಪ್ರಸ್ತುತ ಹಳೆ ಅಡಿಕೆ ಕ್ವಿಂಟಲ್‌ಗೆ ₹43,500 ರಿಂದ ₹47,000 ದರ ಇದ್ದು, ಹೊಸ ಅಡಿಕೆಗೆ ₹30 ಸಾವಿರದಿಂದ 45 ಸಾವಿರ ಇದೆ. ಕೋಕಂಗೆ ಕ್ವಿಂಟಲ್‌ಗೆ ₹23 ಸಾವಿರದಿಂದ 31 ಸಾವಿರ ಇದೆ. ಕಳೆದ ವರ್ಷ ಮಂಗಳೂರು ಎಪಿಎಂಸಿಯಲ್ಲಿ ಒಟ್ಟು 1 ಲಕ್ಷದ 76 ಸಾವಿರದ 7 ಕ್ವಿಂಟಲ್‌ ಅಡಿಕೆ ವಹಿವಾಟು ನಡೆದಿದೆ. ಈ ವರ್ಷ ಏಪ್ರಿಲ್‌ನಲ್ಲಿ 15,678 ಕ್ವಿಂ., ಮೇನಲ್ಲಿ 22,131 ಕ್ವಿಂ., ಜೂನ್‌ನಲ್ಲಿ 19,009 ಕ್ವಿಂ. ಹಾಗೂ ಜುಲೈನಲ್ಲಿ 13,958 ಕ್ವಿಂಟಲ್‌ ವಹಿವಾಟು ನಡೆದಿದೆ.

ನಗರದ ವರ್ತಕರು ಅಡಿಕೆ ಖರೀದಿಸಲು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ಸಂಸ್ಕರಿಸಿದ ಉತ್ತಮ ಗುಣಮಟ್ಟದ ಅಡಿಕೆ ದೊರೆಯುತ್ತದೆ. ನಗರದಲ್ಲಿ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಕಡಿಮೆ ಗುಣಮಟ್ಟದ ಅಡಿಕೆ ಸೇರಿಸಿ ಮಾರಾಟ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ಅಲ್ಲದೇ ಹಳ್ಳಿಯಲ್ಲಿ ಸಂಸ್ಕರಣ ವೆಚ್ಚ ಕಡಿಮೆ ಹಾಗೂ ಕೂಲಿ ಕಾರ್ಮಿಕರು ಸಂಬಳ ಕಡಿಮೆ ಆಗಿರುವುದು. ಎಪಿಎಂಸಿಯಲ್ಲಿ ಕೆ.ಜಿ.ಗೆ ₹2 ಹೆಚ್ಚು ನೀಡಬೇಕು. ಆದ್ದರಿಂದ ಪುತ್ತೂರು, ಸುಳ್ಯ, ಬೆಳ್ಳಾರೆ, ಈಶ್ವರಮಂಗಲ, ವಿಟ್ಲ, ಕಡಬ ಮುಂತಾದ ಸ್ಥಳಗಳಿಂದ ಅಡಿಕೆ ಖರೀದಿಸಲಾಗುತ್ತಿದೆ ಎಂದು ವರ್ತಕ ಇಕ್ಬಾಲ್‌ ಆ್ಯಂಡ್‌ ಕಂಪನಿಯ ಯು.ಎಸ್‌. ಇಕ್ಬಾಲ್‌ ಬಂದರು ಮಾಹಿತಿ ನೀಡಿದರು.

ಕೋಟ್‌: ಲಾಭದ ಉದ್ದೇಶಕ್ಕಾಗಿ ರಸಗೊಬ್ಬರ ಬಳಸಿ ಅಡಿಕೆ ಕೃಷಿ ಮಾಡಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ನಾಶವಾಗಿ ಭವಿಷ್ಯದಲ್ಲಿ ಸಂಕಷ್ಟ ಎದುರಾಗಬಹುದು. ಆದ್ದರಿಂದ ಸಾವಯುವ ಕೃಷಿಗೆ ಆದ್ಯತೆ ನೀಡಬೇಕು.
ಸಂತೋಷ್‌ ಶೆಟ್ಟಿ ಕಲಾಯಿ, ಕೃಷಿಕ

ಜಿಲ್ಲೆಯಲ್ಲಿ ಉತ್ಪಾದಿಸಲಾಗುವ ಅಡಿಕೆ ಉತ್ತಮ ಗುಣಮಟ್ಟ ಹೊಂದಿದ್ದು, ದೇಶ ವಿದೇಶಗಳಿಂದ ಉತ್ತಮ ಬೇಡಿಕೆಯಿದೆ. ಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ಇಲ್ಲಿನ ಅಡಿಕೆ ರಫ್ತಾಗುತ್ತದೆ ಎಂದು ಅವರು ತಿಳಿಸಿದರು.

ಅಡಿಕೆ ಸುಲಿಯಲು ಯಂತ್ರಗಳು ಲಭ್ಯವಿದೆಯಾದರೂ ಬೆಳೆಗಾರರು ಅಡಿಕೆ ಸುಲಿಯಲು ಕೂಲಿಕಾರ್ಮಿಕರನ್ನೇ ನೆಚ್ಚಿಕೊಂಡಿದ್ದಾರೆ. ಯಂತ್ರದಲ್ಲಿ ಕಡಿಮೆ ಗುಣಮಟ್ಟದ ಕರಿಗೋಟು, ಚೆಪ್ಪುಗೋಟು ಅಡಿಕೆ ಪುಡಿಯಾಗುತ್ತದೆ. ಆದರೆ ಕೂಲಿಕಾರ್ಮಿಕರಲ್ಲಿ ಸುಲಿಸುವುದರಿಂದ ಎಲ್ಲಿಯೂ ನಷ್ಟ ಉಂಟಾಗುವುದಿಲ್ಲ. ಪ್ರತಿ ಕೆ.ಜಿ.ಗೆ ಇಂತಿಷ್ಟು ಎಂದು ಸುಲಿದ ಒಟ್ಟು ಅಡಿಕೆಗೆ ಕೂಲಿ ನೀಡಲಾಗುತ್ತದೆ.

ಕಡಿಮೆ ಕೂಲಿ

ಅಡಿಕೆಗೆ ದರ ಏರಿಕೆಯಾದರೂ ಅದರ ಲಾಭ ಅಡಿಕೆ ಸುಲಿಯುವವರಿಗೆ ವರ್ಗಾವಣೆಯಾಗಿಲ್ಲ. ಅವರ ದಿನಗೂಲಿಯಲ್ಲಿ ಏರಿಕೆಯಾಗಿಲ್ಲ. ಸುಲಿದ ಪ್ರತಿ ಕೆ.ಜಿ. ಅಡಿಕೆಗೆ ₹13 ನೀಡಲಾಗುತ್ತದೆ. ಕೆಲವು ಕಡೆ ಹೆಚ್ಚೆಂದರೆ ₹15–₹16 ನೀಡಲಾಗುತ್ತಿದೆ.

ಅಡಿಕೆ ಸುಲಿಯುವ ಕೆಲಸ ‍ಲಾಭ ತರುವಂಥದ್ದಾದರೂ ಸುಲಭವಲ್ಲ. ವೇಗವಾಗಿ ಸುಲಿಯುತ್ತಿರುವಾಗ ಒಮ್ಮೊಮ್ಮೆ ಮುಟ್ಟಕತ್ತಿ (ಅಡಿಕೆ ‍ಸುಲಿಯುವ ಕತ್ತಿ) ತಾಗಿಬಿಡುತ್ತದೆ. ಅಂಗೈಗೆ ಕತ್ತಿ ತಾಗಿ ಗಾಯವಾಗುವುದರಿಂದ ಸ್ವಲ್ಪ ದಿನ ನಿರೀಕ್ಷಿಸಿದಷ್ಟು ಸುಲಿಯುವುದು ತುಂಬಾ ಕಷ್ಟವಾಗುತ್ತದೆ. ಅಲ್ಲದೇ ಬೆಳಿಗ್ಗೆಯಿಂದ ಸಂಜೆಯ ತನಕ ಕುಳಿತೇ ಸುಲಿಯಬೇಕಾಗಿರುತ್ತದೆ ಮತ್ತು ಉಸಿರಾಟದ ಮೂಲಕ ಧೂಳು ಶ್ವಾಸಕೋಶ ಸೇರುತ್ತದೆ. ಸುಲಿಯಲು ಉತ್ತಮವಾಗಿರುವ ಅಡಿಕೆ ದೊರತರೆ ಕಾರ್ಮಿಕರ ಪಾಲಿಗೆ ಅದು ಸುಗ್ಗಿ. ದಿನದಲ್ಲಿ 1 ಕ್ವಿಂಟಾಲ್‌ಗಳಿಗೂ ಅಧಿಕ ಅಡಿಕೆ ಸುಲಿಯುವ ಪರಿಣತರಿದ್ದಾರೆ. ಆದರೆ ಸಿಪ್ಪೆ ಸರಿ ಒಣಗಿರದಿದ್ದರೆ, ಮೆತ್ತಗಿದ್ದರೆ ಸರಿಯಾದ ರೀತಿಯಲ್ಲಿ ಸಂಸ್ಕರಿಸದಿದ್ದರೆ ಕಷ್ಟವಾಗಿ 40–50 ಕೆ.ಜಿ.ಯೂ ಸುಲಿಯಲು ಸಾಧ್ಯವಾಗುವುದಿಲ್ಲ. ದರ ಇಳಿಕೆಯಾದಾಗ, ಮಳೆಗಾಲದಲ್ಲಿ ಕೆಲವೊಮ್ಮೆ ಕೆಲಸವೂ ಇರುವುದಿಲ್ಲ ಎಂದು ಅಡಿಕೆ ಸುಲಿಯುವ ಬೆಳ್ಳಾರೆಯ ಆನಂದ ಹೇಳುತ್ತಾರೆ.

ಅಡಿಕೆ ದರ ಏರಿಕೆಯಾಗುತ್ತಿರುವುದು ಖುಷಿ ತಂದಿದೆ. ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಧಾರಣೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಕಳೆದ ವರ್ಷ ಅಡಿಕೆಗೆ ₹460 ಅಧಿಕ ದರವಿತ್ತು. ಕೊಳೆರೋಗ ಬಂದು ಉತ್ಪಾದನೆ ಕಡಿಮೆಯಿದ್ದರಿಂದ ಅಡಿಕೆಗೆ ಬೇಡಿಕೆ ಇದ್ದ ಕಾರಣ ಮತ್ತು ಹೊರದೇಶಗಳಿಂದ ಆಮದು ನಿಲ್ಲಿಸಿದ್ದು ದರ ಏರಿಕೆಯಾಗಲು ಕಾರಣ ಎಂದು ಕೃಷಿಕ ಸಂತೋಷ್‌ ಶೆಟ್ಟಿ ಕಲಾಯಿ ಹೇಳಿದರು.

ಅಡಿಕೆ ಸಂಸ್ಕರಣೆ ಸಂಬಂಧಿತ ಹಲವಾರು ತಂತ್ರಜ್ಞಾನ, ಯಂತ್ರಗಳು ಲಭ್ಯವಿದೆ. ಆದರೆ ಅವು ಶೇ 100 ಯಶಸ್ಸು ಗಳಿಸಿಲ್ಲ. ಕಂಗು ಹತ್ತುವ ಯಂತ್ರ, ಅಡಿಕೆ ಸುಲಿಯುವ ಯಂತ್ರ ಲಭ್ಯವಿದೆ. ಆದರೆ ಮಾನವ ಶ್ರಮದಿಂದ ಮಾತ್ರ ನಿರೀಕ್ಷಿತ ಲಾಭ ಸಿಗುತ್ತದೆ. ಅಡಿಕೆ ಸುಲಿಯುವ ಯಂತ್ರದಲ್ಲಿ ಸುಲಿಸಿದರೆ ಶೇ 10ರಷ್ಟು ಅಡಿಕೆ ನಷ್ಟವಾಗುತ್ತದೆ. ಆ ಕೆಲಸವನ್ನೇ ನೆಚ್ಚಕೊಂಡಿರುವ ಕಾರ್ಮಿಕರ ಹೊಟ್ಟೆಗೆ ಹೊಡೆದಂತಾಗುತ್ತದೆ. ಯಂತ್ರಗಳನ್ನೇ ಕೃಷಿಯಲ್ಲಿ ಬಳಸಿದರೆ ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಯುವಜನತೆಯನ್ನು ಕೃಷಿ ವಿಮುಖರನ್ನಾಗಿ ಮಾಡಿದಂತಾಗುತ್ತದೆ ಎಂದು ಅವರು ಕಾಳಜಿಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT