ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ನಗರದ ಹೆಬ್ಬಾಗಿಲಿನಲ್ಲಿ ತಪ್ಪದ ಕಿರಿಕಿರಿ

Published 25 ಜೂನ್ 2023, 15:46 IST
Last Updated 25 ಜೂನ್ 2023, 15:46 IST
ಅಕ್ಷರ ಗಾತ್ರ

ಮಂಗಳೂರು: ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ನಗರದಲ್ಲಿ ಸಂಚಾರ ದುಸ್ತರವಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ವಾಹನಗಳ ಓಡಾಟಕ್ಕೆ ತುಂಬ ತೊಂದರೆಯಾಗುತ್ತದೆ. ಪ್ರಮುಖ ವೃತ್ತಗಳಲ್ಲಂತೂ ಈ ಸಮಸ್ಯೆ ತೀವ್ರ ಆಗಿರುತ್ತದೆ. ಇಂಥವುಗಳಲ್ಲಿ ಒಂದು, ಬಲ್ಮಠ ವೃತ್ತ.

ನಗರದ ಒಳಗಿನಿಂದ ಬೆಂಗಳೂರು, ಮೈಸೂರು, ಕೇರಳ ಕಡೆಗೆ ಹೋಗಲು ಮತ್ತು ನಗರದ ಒಳಗೆ ಪ್ರವೇಶಿಸಲು ಈ ವೃತ್ತವೇ ಹೆಬ್ಬಾಗಿಲು. ಸುತ್ತ ಶಿಕ್ಷಣ ಸಂಸ್ಥೆಗಳು, ಉದ್ಯಮಗಳು, ಹೋಟೆಲ್‌–ಪಬ್‌ಗಳು ಇರುವುದರಿಂದ ಸಹಜವಾಗಿ ಇಲ್ಲಿ ಜನ–ವಾಹನ ದಟ್ಟಣೆ ಹೆಚ್ಚು. ಭಾನುವಾರ ಒಂದು ದಿನ ಬಿಟ್ಟರೆ ಉಳಿದ ಎಲ್ಲ ದಿನಗಳಲ್ಲೂ ಈ ವೃತ್ತ ವಾಹನಗಳಿಂದ ತುಂಬಿರುತ್ತದೆ. ಈಚೆಗೆ ಜ್ಯೋತಿ ವೃತ್ತದ ಬಳಿ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಈ ವೃತ್ತದಲ್ಲೂ ವಾಹನಗಳು ನಿಮಿಷಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.

ಈ ವೃತ್ತದಲ್ಲಿ ನಾಲ್ಕು ರಸ್ತೆಗಳು ಸೇರುತ್ತವೆ. ಜ್ಯೋತಿ ವೃತ್ತದಿಂದ ಬರುವ ವಾಹನಗಳು ಕಂಕನಾಡಿ ಕಡೆಗೂ ಎಸ್‌ಸಿಎಸ್ ಆಸ್ಪತ್ರೆಯ ಕಡೆಗೂ ಈ ವೃತ್ತದ ಮೂಲಕವೇ ಸಾಗುತ್ತವೆ. ಆರ್ಯ ಸಮಾಜ ರಸ್ತೆಯಿಂದ ಬರುವ ವಾಹನಗಳು ಕೂಡ ಈ ವೃತ್ತವನ್ನು ಹಾದುಕೊಂಡೇ ಮುಂದೆ ಸಾಗಬೇಕು. ಅಲ್ಲಿಂದ ಬರುವ ವಾಹನಗಳು ಜ್ಯೋತಿ ವೃತ್ತದ ಕಡೆಗೆ ಹೋಗಬೇಕಾದರೆ ಇಲ್ಲಿ ಯು–ಟರ್ನ್ ತೆಗೆದುಕೊಳ್ಳಬೇಕು. ಸಹೋದಯ ಸಂಸ್ಥೆಯ ಕಡೆಯಿಂದ ಬರುವ ವಾಹನಗಳು ಜ್ಯೋತಿ ವೃತ್ತದ ಕಡೆಗೆ ತಿರುವು ಪಡೆದುಕೊಳ್ಳುವಾಗಲೂ ತೊಂದರೆ ಆಗುತ್ತದೆ. ಎಸ್‌ಸಿಎಸ್ ಆಸ್ಪತ್ರೆ ಕಡೆಯಿಂದ ಬರುವ ವಾಹನಗಳು ಜ್ಯೋತಿ ವೃತ್ತಕ್ಕೂ ಸಹೋದಯ ಕಡೆಗೂ ಕಂಕನಾಡಿ ಭಾಗಕ್ಕೂ ಇಲ್ಲಿಂದಲೇ ಹೋಗುತ್ತವೆ. ಇದೆಲ್ಲವೂ ಗೊಂದಲ ಸೃಷ್ಟಿಸುತ್ತದೆ.

ಬಸ್ ತಂಗುದಾಣ, ರಾಂಗ್ ಸೈಡ್

ಜ್ಯೋತಿ ಕಡೆಯಿಂದ ಬರುವ ಖಾಸಗಿ ಬಸ್‌ಗಳು ಎಸ್‌ಬಿಐ ಎಟಿಎಂ ಮುಂದೆ ಪ್ರಯಾಣಿಕರನ್ನು ಹತ್ತಿಸುತ್ತವೆ. ಕೆಲವೊಮ್ಮೆ ಒಂದೇ ಸಮನೆ ಮೂರು–ನಾಲ್ಕು ಬಸ್‌ಗಳು ಬಂದು ನಿಲ್ಲುತ್ತವೆ. ಅಂಥ ಸಂದರ್ಭದಲ್ಲಿ ದಟ್ಟಣೆ ಹೆಚ್ಚಾಗುತ್ತದೆ. ಇದೇ ಸಂದರ್ಭದಲ್ಲಿ ಕೆಲವು ವಾಹನಗಳು ಯು–ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಕಂಕನಾಡಿ ಕಡೆಯಿಂದ ಬರುವ ವಾಹಗಳಿಗೂ ತೊಂದರೆಯಾಗುತ್ತದೆ. ವಾಹನಗಳ ಹಾರ್ನ್‌, ಬಸ್‌ ಕ್ಲೀನರ್‌ಗಳ ವಿಸಿಲ್‌ ಸದ್ದು ಎಲ್ಲವೂ ಸೇರಿ ಪರಿಸರದಲ್ಲಿ ಪೂರ್ತಿ ಕಿರಿ ಕಿರಿಯಾಗುತ್ತದೆ. 

ಜ್ಯೋತಿ ವೃತ್ತ, ಆರ್ಯಸಮಾಜ ರಸ್ತೆ ಮತ್ತು ಸ್ವಾಗತ್ ಹೋಟೆಲ್ ಕಡೆಯಿಂದ ಬರುವ ವಾಹನಗಳಿಗೆ ಇಲ್ಲಿ ಏಕಪಥ ನಿಗದಿ ಮಾಡಲಾಗಿದೆ. ಆದರೆ ಪ್ರೆಸ್ಟಿಜ್ ಹೋಟೆಲ್ ದಾಟಿ ಬರುವ ಕೆಲವು ವಾಹನ ಸವಾರರು ನೇರವಾಗಿ ‘ರಾಂಗ್ ಸೈಡ್‌’ನಲ್ಲಿ ನುಗ್ಗಿ ಆರ್ಯ ಸಮಾಜ ರಸ್ತೆ ಅಥವಾ ಸ್ವಾಗತ್ ಹೋಟೆಲ್ ಕಡೆಗೆ ಹೋಗುತ್ತಾರೆ. ಸ್ವಲ್ಪ ದಿನ ಇಲ್ಲಿ ಎಎಸ್‌ಐ ದರ್ಜೆಯ ಅಧಿಕಾರಿ ಮತ್ತು ಒಂದಿಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಲ್ಲಿಸಲಾಗಿತ್ತು. ಆಗ ನಿಯಂತ್ರಣದಲ್ಲಿದ್ದ ಈ ಚಾಳಿ ಈಗ ಮತ್ತೆ ಆರಂಭವಾಗಿದೆ. 

ಸಮಸ್ಯೆಗಳು ನಿಯಂತ್ರಿಸಲು ಆಗದಷ್ಟು ಜಟಿಲವಾಗಿರುವುದರಿಂದ ಈ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವುದು ದೊಡ್ಡ ಸವಾಲು ಎನ್ನುತ್ತಾರೆ ಸಂಚಾರ ವಿಭಾಗದ ಪೊಲೀಸರು. ‘ರಾಂಗ್ ಸೈಡ್‌’ನಲ್ಲಿ ನುಗ್ಗುವವರನ್ನು ಹಿಡಿಯುವುದು ಕಷ್ಟ. ಪ್ರಯಾಸಪಟ್ಟು ಹಿಡಿಯಲು ಹೋದರೂ ಕೆಲವೊಮ್ಮೆ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ‘ಸಾಹಸ’ಕ್ಕೆ ಕೈ ಹಾಕುವುದಿಲ್ಲ. ಪೋಟೊ ತೆಗೆಯಲು ಪ್ರಯತ್ನಿಸುವಾಗ ಎಷ್ಟೋ ಸಂದರ್ಭದಲ್ಲಿ ಬೇರೆ ವಾಹನಗಳು ಅಡ್ಡ ಬರುತ್ತವೆ’ ಎಂದು ಕಾನ್‌ಸ್ಟೆಬಲ್ ಒಬ್ಬರು ಹೇಳಿದರು.

‘ಸಹೋದಯ ಸಂಸ್ಥೆಯ ಕಡೆಯಿಂದ ಬರುವ ವಾಹನಗಳು ಎಡಕ್ಕೆ ತಿರುಗಿ ಜ್ಯೋತಿ ಕಡೆಗೆ ಹೋಗಬೇಕು. ಆದರೆ ಕೆಲವರು ನೇರವಾಗಿ ಬಂದು ಪ್ರೆಸ್ಟಿಜ್ ಹೋಟೆಲ್ ಕಡೆಗೆ ಹೋಗಲು ಪ್ರಯತ್ನಿಸುತ್ತಾರೆ. ಆ ಭಾಗಕ್ಕೆ ಪ್ರವೇಶ ನಿಷೇಧ ಎಂಬ ಫಲಕವೊಂದನ್ನು ಅಳವಡಿಸಲಾಗಿತ್ತು. ಅದನ್ನು ಯಾರೋ ಕಿತ್ತು ಬಿಸಾಕಿದ್ದಾರೆ’ ಎಂದು ಮತ್ತೊಬ್ಬರು ಕಾನ್ಸ್‌ಟೆಬಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT