ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಕಾರ್ಯಾಚರಣೆ: ಕಣಜದ ಗೂಡು ನಾಶ

‘ಪ್ರಜಾವಾಣಿ’ ವರದಿ ಫಲಶ್ರುತಿ
Last Updated 22 ಸೆಪ್ಟೆಂಬರ್ 2018, 17:22 IST
ಅಕ್ಷರ ಗಾತ್ರ

ಮಂಗಳೂರು: ನಗರದ ಲೋಯರ್‌ ಬೆಂದೂರು 3ನೇ ಅಡ್ಡರಸ್ತೆಯ ಡಾಮಿನೋಜ್‌ ಪಿಡ್ಜಾ ಕಾರ್ನರ್‌ ಸಮೀಪ ತೆಂಗಿನ ಮರದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಬೃಹತ್ ಕಣಜದ ಹುಳಗಳ (ಪಿಲಿಕುಂಡೆಲು) ಗೂಡನ್ನು ಮಂಗಳೂರು ಮಹಾನಗರ ಪಾಲಿಕೆ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ, ನಾಶಪಡಿಸಿದೆ.

ಗುರುಪುರ ಅಣ್ಣಪ್ಪ ಪ್ರಭು ಎಂಬುವವರ ಮನೆಯ ಆವರಣದಲ್ಲಿನ ತೆಂಗಿನ ಮರದಲ್ಲಿ ದೊಡ್ಡ ಗಾತ್ರದ ಕಣಜದ ಹುಳುಗಳು ಗೂಡು ಕಟ್ಟಿದ್ದವು. ಈ ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುವ ಅಪಾಯವಿದೆ. ಈ ಕಾರಣದಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಸೆಪ್ಟೆಂಬರ್‌ 18ರ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಈ ಬಗ್ಗೆ ಚಿತ್ರಸಹಿತ ವರದಿ ಪ್ರಕಟಿಸಿತ್ತು.

ಪತ್ರಿಕೆಯ ವರದಿ ಬಳಿಕ ಕಣಜದ ಗೂಡುಗಳ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಮರ ಹತ್ತುವುದರಲ್ಲಿ ಅನುಭವಿಗಳಾಗಿರುವ ಕೆಲವರನ್ನು ಶುಕ್ರವಾರ ಕರೆತರಲಾಗಿತ್ತು. ಆದರೆ, ಅವರಿಗೂ ಕಣಜದ ಗೂಡು ತೆರವು ಮಾಡಲು ಸಾಧ್ಯವಾಗಿರಲಿಲ್ಲ. ಅರ್ಧದಲ್ಲೇ ಕಾರ್ಯಾಚರಣೆ ಕೈಬಿಡಲಾಗಿತ್ತು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ನೇತೃತ್ವದಲ್ಲಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಇದಕ್ಕಾಗಿ ಪಾಲಿಕೆಯ ಬೃಹತ್‌ ಗಾತ್ರದ ಕ್ರೇನ್‌ ಅನ್ನು ಬಳಕೆ ಮಾಡಲಾಯಿತು. ಒಂದೂವರೆ ಗಂಟೆಗಳ ಕಾಲ ಇಎಸ್‌ಐ ಆಸ್ಪತ್ರೆಯಿಂದ ಬೆಂದೂರ್‌ ಮುಖ್ಯರಸ್ತೆವರೆಗಿನ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿತ್ತು.

‘ಬೃಹತ್‌ ಕ್ರೇನ್‌ನಲ್ಲಿ ಇಬ್ಬರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅವರು ಉದ್ದನೆಯ ಕೊಳವೆಗೆ ಸೀಮೆಎಣ್ಣೆ ಸುತ್ತಿ ಕಟ್ಟಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಕಣಜದ ಗೂಡನ್ನು ನಾಶಪಡಿಸಿದರು.

ಕಾರ್ಯಾಚರಣೆಯ ಅವಧಿಯಲ್ಲಿ ಸುತ್ತಲಿನ ಮನೆಗಳ ವಿದ್ಯುತ್‌ ದೀಪಗಳನ್ನು ಆರಿಸಲಾಗಿತ್ತು. ಬೀದಿ ದೀಪಗಳನ್ನೂ ಆರಿಸಲಾಗಿತ್ತು’ ಎಂದು ಸ್ಥಳೀಯ ನಿವಾಸಿ ರಾಕೇಶ್ ಬೋಳಾರ್ ತಿಳಿಸಿದರು.

ಕಣಜದ ಗೂಡು ಸುಡುವಾಗ ತೆಂಗಿನ ಮರಕ್ಕೆ ಬೆಂಕಿ ತಗುಲಿದೆ. ಕಾರ್ಯಾಚರಣೆಗೆ ತೆರಳಿದವರು ಕ್ರೇನ್‌ನಲ್ಲಿ ನಿಂತುಕೊಂಡೇ ಬೆಂಕಿ ಆರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT